ಗುಣಮಟ್ಟದ ಹಾಲು ಸರಬರಾಜು ಮಾಡಿ: ರಾಜಣ್ಣ
ತಾಲೂಕಿನ ಹಾಲು ಉತ್ಪಾದಕ ಸಂಘಗಳು ಗುಣಮಟ್ಟದ ಹಾಲು ಉತ್ಪಾದಿಸುವ ಜೊತೆಗೆ ಹಾಲಿನ ಶೇಖರಣೆ ಹೆಚ್ಚಿಸುವ ನಿಟ್ಟಿನಲ್ಲಿ ಖಾಸಗಿ ಡೈರಿಗಳಿಗೆ ಕಡಿವಾಣ ಹಾಕಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಒಕ್ಕೂಟದ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಮಧುಗಿರಿ : ತಾಲೂಕಿನ ಹಾಲು ಉತ್ಪಾದಕ ಸಂಘಗಳು ಗುಣಮಟ್ಟದ ಹಾಲು ಉತ್ಪಾದಿಸುವ ಜೊತೆಗೆ ಹಾಲಿನ ಶೇಖರಣೆ ಹೆಚ್ಚಿಸುವ ನಿಟ್ಟಿನಲ್ಲಿ ಖಾಸಗಿ ಡೈರಿಗಳಿಗೆ ಕಡಿವಾಣ ಹಾಕಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಒಕ್ಕೂಟದ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಶುಕ್ರವಾರ ತುಮಕೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಮಲ್ಲಸಂದ್ರದ ವತಿಯಿಂದ ಮಧುಗಿರಿಯ ಹಿಂದೂಪುರ ರಸ್ತೆಯಲ್ಲಿರುವ ಉಪ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕಿನ ಹಾಲು ಉತ್ಪಾದಕ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಭೆ ಅಧ್ಯಕ್ಷೆತೆ ವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮಧುಗಿರಿ ತಾಲೂಕಿನಲ್ಲಿ ಕ್ವಾಲಿಟಿ ಹಾಲು ಬರುತ್ತಿಲ್ಲ, ಅದೇ ಶಿರಾ, ಪಾವಗಡ ತಾಲೂಕುಗಳಲ್ಲಿ ಗುಣಮಟ್ಟದ ಹಾಲು ಶೇಖರಣೆಯಾಗುತ್ತಿದೆ. ನಮ್ಮಲ್ಲಿ ಏಕೆ ಕಳಪೆ ಹಾಲು ಶೇಖರಣೆಯಾಗುತ್ತಿದೆ. ಅಧಿಕಾರಿಗಳು ಏನು ಮಾಡುತ್ತಿದ್ದೀರಾ.? ಬಿಎಂಸಿಗಳಲ್ಲಿ ಯಾರು ಹೇಳೋರು ಕೇಳೋರು ಇಲ್ಲವೆ. ಕಳಪೆ ಹಾಲು ನಿಲ್ಲಿಸಿ ಇಲ್ಲವಾದರೆ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ ಎಂದು ಎಂಡಿಗೆ ಸೂಚಿಸಿ, ಹಾಲು ಹೆಚ್ಚಿಸುವ ಬಗ್ಗೆ ಕ್ರಮ ಕೈಗೊಳ್ಳಿ. ತಾವುಗಳು ರಾಜಕೀಯ ಮಾಡುವುದು ಬಿಟ್ಟು, ರೈತರ ಕೆಲಸ ಮಾಡಿ ಖಾಸಗಿ ಡೈರಿಗಳಿಗೆ ಕಡಿವಾಣ ಹಾಕಿ. ಹಾಲು ಶೇಖರಣೆ ಹೆಚ್ಚಿಸಿ ರೈತರಿಗೆ ನೆರವಾಗುವ ಮೂಲಕ ಪುಣ್ಯ ಕಟ್ಟಿಕೊಳ್ಳಿ ಎಂದು ಅಧಿಕಾರಿಗಳಿಗೆ ಹೇಳಿದರು.
ಖಾಸಗಿಯವರಿಗೆ ಹಾಲು ಮಾರಾಟ ಮಾಡಿ ರೈತರಿಗೆ ಅನ್ಯಾಯ ಮಾಡುವುದನ್ನು ನಾನು ಸಹಿಸುವುದಿಲ್ಲ. ಅಧ್ಯಕ್ಷರ ಜವಾಬ್ದಾರಿ ಹೆಚ್ಚಿರುತ್ತದೆ . ಕಾರ್ಯದರ್ಶಿಗಳು ಒಕ್ಕೂಟದ ನಿಯಮಾನುಸಾರ ಕೆಲಸ ಮಾಡಬೇಕು. ರೈತರ ಪರ ಕೆಲಸ ಮಾಡುವ ಸಂಘಗಳಿಗೆ ನನ್ನ ಸಹಕಾರವಿದೆ. ಉಪ್ಪು, ಸಕ್ಕರೆ ಹಾಕಿ ಹಾಲು ಮಾರಾಟ ಮಾಡಿದರೆ ಶೋಷಣೆಯಲ್ಲವೆ ಎಂದರು.
ಪ್ರತಿ ಸಂಘದವರು ಹಾಲು ಉತ್ಪಾದಕರ ಬ್ಯಾಂಕ್ ಖಾತೆಗೆ ಹಣ ಹಾಕಬೇಕು. ಯಾವ ಸಂಘಗಳಲ್ಲಿ ಹಣ ದುರುಪಯೋಗ ಪಡಿಸಿಕೊಂಡರೆ ಅಂತಹ ಕಾರ್ಯದರ್ಶಿಗಳ ವಿರುದ್ಧ ಕ್ರಿಮಿನಲ್, ಸಿವಿಲ್ ಕೇಸ್ ಹಾಕಿ ಕ್ರಮ ಕೈಗೊಳ್ಳುವಂತೆ ಸೂಚಿಸಿ, ಕ್ಷೀರಭಾಗ್ಯ ಯೋಜನೆಯಿಂದ ಹಳ್ಳಿಗಾಡಿನ ಹಾಲು ಉತ್ಪಾದಕರು, ರೈತರು ಮತ್ತು ಒಕ್ಕೂಟ ಉಳಿದಿದ್ದು, ಶಾಲೆ ಅಂಗನವಾಡಿ ಮಕ್ಕಳಿಗೆ ಹಾಲು ನೀಡುತ್ತಿರುವುದರಿಂದ ರೈತರ ಆರ್ಥಿಕ ಚಟುವಟಿಕೆಗಳು ಹೆಚ್ಚಿದೆ. ನಮ್ಮ ತಾಲೂಕಿನಲ್ಲಿ ಕ್ವಾಲಿಟಿ ಹಾಲು ಹಾಕದಿದ್ದರೆ ನಮಗೆ ಕೆಟ್ಟಹೆಸರು ಬರುತ್ತದೆ. ಆದ ಕಾರಣ ಅಧಿಕಾರಿಗಳು ಎಚ್ಚೆತ್ತುಕೊಂಡು ಗುಣಮಟ್ಟದ ಹಾಲು ಸರಬರಾಜಿಗೆ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.
ಹಾಲು ಉತ್ಪಾದಕರ ಕಲ್ಯಾಣ ಟ್ರಸ್ಟ್ ನಿಂದ ಮಧುಗಿರಿ ಉಪವಿಭಾಗ ಮಟ್ಟದಲ್ಲಿ ಹೆಣ್ಣು ಮಕ್ಕಳ ಹಾಸ್ಟೆಲ್ ತೆರೆದು ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಲು ಆಡಳಿತ ಮಂಡಳಿ ಕ್ರಮ ಕೈಗೊಳ್ಳಿ, ರೈತರ, ಬಡವರ ಪರ ಕೆಲಸ ಮಾಡಿ ಎಂದು ಒಕ್ಕೂಟದ ವ್ಯವಸ್ಥಾಪಕ ಡಾ.ಪ್ರಸಾದ್‌ಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ,ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್,ವ್ಯವಸ್ಥಾಪಕ ಡಾ. ಪ್ರಸಾದ್, ನಿರ್ದೇಶಕರಾದ ಶಿರಾದ ಎಸ್.ಆರ್.ಗೌಡ, ಪಾವಗಡ ಚನ್ನಮಲ್ಲಯ್ಯ, ಡಿ.ಕೃಷ್ಣಕುಮಾರ್, ಚಂದ್ರಶೇಖರ್, ಕೊಂಡವಾಡಿ ಚಂದ್ರಶೇಖರ್, ಈಶ್ವರಯ್ಯ, ರೇಣುಕಾಪ್ರಸಾದ್, ಮಾಜಿ ಅಧ್ಯಕ್ಷ ಹಳೇಮನೆ ಶಿವನಂಜಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್‌ಬಾಬು, ಕೆಎಂಎಫ್ ನಿರ್ದೇಶಕ ಮೈದನಹಳ್ಲಿ ಕಾಂತರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಡಾ.ಎಂ.ಜಿ.ಶ್ರೀನಿವಾಸಮೂರ್ತಿ, ರಾಜ್‌ಕುಮಾರ್, ವ್ಯವಸ್ಥಾಪಕ ಶಂಕರ್‌ನಾಗ್ ಸೇರಿದಂತೆ ಅನೇಕರಿದ್ದರು.
ಮುಂಬರುವ ದಿನಮಾನಗಳಲ್ಲಿ ಮಧುಗಿರಿ ತಾಲೂಕಿನಲ್ಲಿ ಕೆಎಂಎಫ್ ಮತ್ತು ಒಕ್ಕೂಟಗಳ ವತಿಯಿಂದ ರಾಜ್ಯಮಟ್ಟದ ಹಾಲು ಉತ್ಪಾದಕರ ಸಮಾವೇಶ ಆಯೋಜಿಸಲಾಗುವುದು. ಈ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಪಶುಸಂಗೋನಾ ಸಚಿವರು ಸೇರಿದಂತೆ ಅನೇಕ ಮಂತ್ರಿಗಳು, ಗಣ್ಯರನ್ನು ಆಹ್ವಾನಿಸಲಾಗುವುದು.
ಕೆ.ಎನ್.ರಾಜಣ್ಣ .ಸಹಕಾರ ಸಚಿವ .