ಉತ್ತರ ಕನ್ನಡ: 5 ತಾಲೂಕುಗಳಲ್ಲಿ ಮತ್ತೆ ಗುಡ್ಡ ಕುಸಿಯುವ ಭೀತಿ!
ಜಿಲ್ಲೆಯ ಐದು ತಾಲೂಕಿನಲ್ಲಿ ಈ ಬಾರಿ ಮತ್ತೆ ಗುಡ್ಡ ಕುಸಿಯುವ ಆತಂಕ ಎದುರಾಗಿದೆ. ಜೊಯಿಡಾದ ಅಣಶಿ ರಾಜ್ಯ ಹೆದ್ದಾರಿ, ಯಲ್ಲಾಪುರದ ಕಳಚೆ, ಅರೆಬೈಲು ಘಟ್ಟ, ಶಿರಸಿಯ ಜಾಜಿಗುಡ್ಡ ,ಕಾರವಾರದ ಬೈತಕೋಲ್, ಚೆಂಡಿಯಾ ಗುಡ್ಡದ ಭಾಗ ಹಾಗೂ ಹೊನ್ನಾವರದ ಅಪ್ಸರ ಕೊಂಡದ ಕೆಳಗಿನೂರು ಭಾಗದಲ್ಲಿ ಯಾವಾಗ ಬೇಕಾದರೂ ಗುಡ್ಡ ಕುಸಿತವಾಗಬಹುದು ಎಂದು ಭೂ ವಿಜ್ಞಾನಿಗಳ ತಂಡ ವರದಿ ನೀಡಿದೆ.
ಉತ್ತರಕನ್ನಡ (ಜು.12) : ಜಿಲ್ಲೆಯ ಐದು ತಾಲೂಕಿನಲ್ಲಿ ಈ ಬಾರಿ ಮತ್ತೆ ಗುಡ್ಡ ಕುಸಿಯುವ ಆತಂಕ ಎದುರಾಗಿದೆ. ಜೊಯಿಡಾದ ಅಣಶಿ ರಾಜ್ಯ ಹೆದ್ದಾರಿ, ಯಲ್ಲಾಪುರದ ಕಳಚೆ, ಅರೆಬೈಲು ಘಟ್ಟ, ಶಿರಸಿಯ ಜಾಜಿಗುಡ್ಡ ,ಕಾರವಾರದ ಬೈತಕೋಲ್, ಚೆಂಡಿಯಾ ಗುಡ್ಡದ ಭಾಗ ಹಾಗೂ ಹೊನ್ನಾವರದ ಅಪ್ಸರ ಕೊಂಡದ ಕೆಳಗಿನೂರು ಭಾಗದಲ್ಲಿ ಯಾವಾಗ ಬೇಕಾದರೂ ಗುಡ್ಡ ಕುಸಿತವಾಗಬಹುದು ಎಂದು ಭೂ ವಿಜ್ಞಾನಿಗಳ ತಂಡ ವರದಿ ನೀಡಿದೆ.
2021ರಲ್ಲಿ ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮ ಭೂ ಕುಸಿತದಿಂದ ಸಂಪೂರ್ಣ ನಾಶವಾಗಿ ಹೋಗಿತ್ತು. ಇದರ ಜತೆಗೆ ನಿರಂತರವಾಗಿ ಜೋಯಿಡಾ, ಶಿರಸಿ, ಕಾರವಾರದ ಗುಡ್ಡ ಪ್ರದೇಶದಲ್ಲೂ ಕುಸಿತವಾಗಿ ಸಾಕಷ್ಟು ಅನಾಹಯತ ಸೃಷ್ಟಿಮಾಡಿತ್ತು. 2022ರಲ್ಲೂ ಗುಡ್ಡ ಕುಸಿತವಾಗಿ ಭಟ್ಕಳದಲ್ಲಿ ನಾಲ್ವರು ಸಾವನ್ನಪ್ಪಿದ್ದರು. ಆದರೆ, ಜಿಲ್ಲಾಡಳಿತ ಮಾತ್ರ ಈವರೆಗೂ ಎಚ್ಚೆತ್ತುಕೊಂಡಿಲ್ಲ. ಅಲ್ಲದೇ, ಭೂ ಕುಸಿತವಾದ ಗ್ರಾಮದ ಜನರನ್ನು ಬೇರೆಡೆ ಸ್ಥಳಾಂತರ ಕೂಡಾ ಮಾಡದಿರುವುದು ಇದೀಗ ಮತ್ತೆ ಆತಂಕಕ್ಕೆ ಕಾರಣವಾಗಿದೆ.
ಕೊಡಗು ಭೂಕುಸಿತದಿಂದ ಹಾನಿಗೊಳಗಾದ ಶಾಲೆಯಲ್ಲಿ ಪಾಠ ಪ್ರವಚನ: ಮಕ್ಕಳ ಜೀವಕ್ಕೆ ಆಪತ್ತಿನ ತೂಗುಗತ್ತಿ
ಯಲ್ಲಾಪುರದ ಕಳಚೆಯಲ್ಲಿ ದೊಡ್ಡ ಪ್ರಮಾಣದ ಭೂ ಕುಸಿತವಾಗಿದ್ದಾಗ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj bommai)ಯವರು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಘೋಷಿಸಿದ್ದಲ್ಲದೇ, ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಆದೇಶಿಸಿದ್ದರು. ಆದರೆ, ಸೂಕ್ತ ಪರಿಹಾರ ಸಿಗುವುದಿರಲಿ 600 ಕ್ಕೂ ಹೆಚ್ಚು ಜನಸಂಖ್ಯೆ ಇರುವ ಈ ಗ್ರಾಮದ ಜನರನ್ನು ಈವರೆಗೂ ಸ್ಥಳಾಂತರಿಸಿಲ್ಲ. ಹೀಗಾಗಿ ಇಲ್ಲಿನ ಜನರು ನ್ಯಾಯಾಲಯದ ಮೆಟ್ಟಿಲೇರುವ ಬಗ್ಗೆ ಚಿಂತನೆ ನಡೆಸಿದ್ದಾರೆ.
ಕಳೆದೊಂದು ವಾರದಿಂದ ಸುರಿದ ಮಳೆ ಕೇವಲ ಕರಾವಳಿ ಭಾಗ ಮಾತ್ರವಲ್ಲದೇ, ಇದೀಗ ಪಶ್ಚಿಮ ಘಟ್ಟ ಪ್ರದೇಶದಲ್ಲೂ ಆತಂಕ ಸೃಷ್ಠಿ ಮಾಡಿದೆ. ಈ ಹಿಂದೆ ಗುಡ್ಡ ಕುಸಿದ ಭಾಗದಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿದ್ದು, ಜಿಲ್ಲಾಡಳಿತ ಈಗಲಾದರೂ ಎಚ್ಚೆತ್ತು ಗುಡ್ಡ ಕುಸಿಯುವ ಪ್ರದೇಶದ ಜನರನ್ನು ಬೇರೆಡೆ ಸ್ಥಳಾಂತರಿಸಬೇಕಿದೆ.
ಚಿಕ್ಕಮಗಳೂರಿನಲ್ಲೂ ನಿರಂತರ ಮಳೆ: ಚಾರ್ಮಾಡಿ ಘಾಟಿಯಲ್ಲಿ ಭೂ ಕುಸಿತ!
ಇನ್ನು ಬಗ್ಗೆ ಪ್ರತಿಕ್ರಯಿಸಿರುವ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲೆಯಲ್ಲಿ ಯಲ್ಲಾಪುರದ ಕಳಚೆ, ಅರೆಬೈಲು ಘಟ್ಟ, ಜೋಯಿಡಾದ ಅಣಶಿ ಘಟ್ಟ, ಕಾರವಾರದ ಗುಡ್ಡ ಪ್ರದೇಶಗಳು, ಶಿರಸಿಯ ಜಾಜಿಗುಡ್ಡ, ಹೊನ್ನಾವರದ ಅಪ್ಸರಕೊಂಡ ಗುಡ್ಡ ಪ್ರದೇಶಗಳು ಸೂಕ್ಷ ಪ್ರದೇಶ ಎಂದು ಗುರುತಿಸಲಾಗಿದ್ದು, ಈ ಪ್ರದೇಶಗಳನ್ನು ನಿರಂತರ ಮಾನಿಟರಿಂಗ್ ಮಾಡಲಾಗುತ್ತಿದೆ. ಯಾವಾಗ ಬೇಕಾದರೂ ಗುಡ್ಡ ಕುಸಿಯುವ ಸಾಧ್ಯತೆಗಳಿರೋದ್ರಿಂದ ಭೂ ವಿಜ್ಞಾನಿಗಳ ತಂಡದ ಶಿಫಾರಸ್ಸು ಆಧರಿಸಿ ಕ್ರಮ ಕೈಗೊಳ್ಳಲಾಗುತ್ತದೆ. ನದಿ ಪಾತ್ರದಲ್ಲಿ ಪ್ರವಾಹ ಹಾನಿ ತಡೆಗಟ್ಟಲು ಆಣೆಕಟ್ಟುಗಳ ನೀರಿನ ಮಟ್ಟವನ್ನು ಆಧರಿಸಿ ಹಂತಹಂತವಾಗಿ ನೀರು ಬಿಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.