Asianet Suvarna News Asianet Suvarna News

Kodagu: ರಸ್ತೆಗಾಗಿ ಚುನಾವಣೆ ಬಹಿಷ್ಕರಿಸಲು ನಿರ್ಧಾರ, ಅಭ್ಯರ್ಥಿಗಳಿಗೆ ಹೊಡೆತ!

ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ 15 ಕುಟುಂಬಗಳು ಚುನಾವಣಾ ಬಹಿಷ್ಕಾರಕ್ಕೆ ತೀರ್ಮಾನಿಸಿದೆ. ಇದು ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಿಗೆ ಹೊಡೆತ ಬೀಳಲಿದೆ.
 

suntikoppa village people decide to boycott election in Kodagu gow
Author
First Published Apr 23, 2023, 7:45 PM IST

ಕೊಡಗು (ಏ.23): ಇವರೆಲ್ಲರೂ ತಲೆತಲಾಂತರಗಳಿಂದ ಇದೇ ಊರಿನಲ್ಲಿ ಹುಟ್ಟಿ ಬೆಳೆದಿದ್ದರೂ ಇಂದಿಗೂ ರಸ್ತೆ ವ್ಯವಸ್ಥೆ ಮಾತ್ರ ಇಲ್ಲ. ಸರ್ಕಾರಿ ದಾಖಲೆಗಳಲ್ಲಿ ರಸ್ತೆ ಇದೆ ಆದರೂ ಅದನ್ನು ಖಾಸಗಿ ವಿಶೇಷ ಚೇತನ ಮಕ್ಕಳ ವಿದ್ಯಾ ಸಂಸ್ಥೆಯೊಂದು ಒತ್ತುವರಿ ಮಾಡಿಕೊಂಡು ಶಾಲಾ ಕಟ್ಟಡ ನಿರ್ಮಿಸಿದೆ. ಹೀಗಾಗಿ ಗ್ರಾಮಕ್ಕೆ ರಸ್ತೆಯಿಲ್ಲದೆ ಜನರು ಪಡಬಾರದ ಕಷ್ಟ ಪಡುವಂತೆ ಆಗಿದೆ. ಹೌದು ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸಮೀಪದಲ್ಲಿ 15 ಕುಟುಂಬಗಳು ಇಂತಹ ಸಮಸ್ಯೆ ಅನುಭವಿಸುತ್ತಿವೆ. ಹಲವು ವರ್ಷಗಳಿಂದ ರಸ್ತೆ ಬಿಡಿಸಿಕೊಡುವಂತೆ ಪಂಚಾಯಿತಿ ಆಡಳಿತ ಮಂಡಳಿ, ಶಾಸಕರು, ಸಂಸದರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಹೀಗಾಗಿ ಈ ಗ್ರಾಮದ 15 ಕುಟುಂಬಗಳು ಕೂಡ ರಸ್ತೆ ಬಿಡಿಸಿಕೊಡದಿದ್ದರೆ, ನಾವು ಚುನಾವಣೆ ಬಹಿಷ್ಕಾರ ಮಾಡುವುದಂತೂ ಖಚಿತ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಒಂದೆಡೆ ವಿದ್ಯಾ ಸಂಸ್ಥೆ ಸರ್ಕಾರಿ ರಸ್ತೆ ಮೇಲೆ ಶಾಲಾ ಕಟ್ಟಡ ನಿರ್ಮಿಸಿದ್ದರೆ, ಅದಕ್ಕೂ ಮುಂಭಾಗದಲ್ಲೇ ಗೇಟ್ ನಿರ್ಮಿಸಿ ಯಾರೂ ಆ ರಸ್ತೆಯಲ್ಲಿ ಸಂಚರಿಸದಂತೆ ತಡೆ ಹಾಕಿದೆ. ಇದರಿಂದ ಸ್ವಲ್ಪ ದೂರದಲ್ಲೇ ಖಾಸಗಿ ವ್ಯಕ್ತಿಯೊಬ್ಬರು ರಸ್ತೆಗೆ ಅಡ್ಡಲಾಗಿ ಬೇಲಿ ಹಾಕಿದ್ದು ಈ 15 ಕುಟುಂಬಗಳಿಗೆ ಓಡಾಡಲು ರಸ್ತೆಯೇ ಇಲ್ಲದಂತೆ ಆಗಿದೆ. ಕಳೆದ ಒಂದು ವರ್ಷದ ಹಿಂದೆ ಗ್ರಾಮದ ಜನರೆಲ್ಲರೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕುಶಾಲನಗರ ತಹಶೀಲ್ದಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಒತ್ತುವರಿಯಾಗಿರುವ ಸರ್ಕಾರಿ ರಸ್ತೆಯನ್ನು ತೆರವುಗೊಳಿಸುವಂತೆ ಸೂಚಿಸಿದ್ದರು.

ಗ್ರಾಮಸ್ಥರು ವಿಶೇಷ ಮಕ್ಕಳ ಶಾಲಾ ಕಟ್ಟಡವನ್ನು ತೆರವುಗೊಳಿಸುವ ಬದಲು ಅದರ ಪಕ್ಕದಲ್ಲಿಯೇ ರಸ್ತೆಗಾಗಿ ಜಾಗ ಬಿಟ್ಟುಕೊಡುವಂತೆ ಹೇಳಿದ್ದರು. ಇದಕ್ಕೆ ಶಾಲೆಯಿಂದ ಒಪ್ಪಿಗೆ ಸೂಚಿಸಲಾಗಿತ್ತು. ಆದರೆ ದಿನಕಳೆದಂತೆ ರಸ್ತೆ ಬಿಟ್ಟುಕೊಡುವ ಬದಲು ಆ ರಸ್ತೆಯಲ್ಲಿ ಯಾರೂ ಓಡಾಡದಂತೆ ತಡೆಯೊಡ್ಡಿದೆ. ಇದರಿಂದ ಶಾಲಾ ಕಟ್ಟಡ ಹೊಡೆದು ಹಾಕದಂತೆ ಬಿಟ್ಟಿದ್ದೇ ನಮಗೆ ಮುಳುವಾಯಿತೇ ಎಂದು ಈ ವಾರ್ಡಿನ ಪಂಚಾಯಿತಿ ಸದಸ್ಯರಾದ ಪ್ರಸಾದ್ ಕುಟ್ಟಪ್ಪ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಮಂಡ್ಯದಲ್ಲಿ ಬಿಜೆಪಿ ಸುಮಾಸ್ತ್ರಕ್ಕೆ ಕಾಂಗ್ರೆಸ್ ನಿಂದ ರಮ್ಯಾಸ್ತ್ರ!

ಹಿಂದಿನಿಂದಲೂ ರಸ್ತೆ ಜಾಗವಿದ್ದರೂ ಅದನ್ನು ಒತ್ತುವರಿ ಮಾಡಿಕೊಂಡಿರುವವರಿಂದ ತೆರವು ಮಾಡುವಂತೆ ಎಷ್ಟು ಬಾರಿ ಪಂಚಾಯಿತಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಕಳೆದ ನಾಲ್ಕು ವರ್ಷಗಳ ಹಿಂದೆ ರಸ್ತೆ ಬಿಡಿಸಿಕೊಡುವಂತೆ ಸಂಸದರಿಗೂ ಮನವಿ ಮಾಡಿದ್ದೆವು. ಆದರೂ ಸಂಸದರು ಯಾವುದೇ ಕ್ರಮ ಕೈಗೊಂಡಿಲ್ಲ. ಮಳೆಗಾಲದಲ್ಲಿ ನಮ್ಮ ಮಕ್ಕಳನ್ನು ಶಾಲೆಗೆ ಕರೆದೊಯ್ಯಬೇಕೆಂದರೆ ಕೆಸರು ಗದ್ದೆಗಳಂತೆ ಆಗಿರುವ ತೋಟದೊಳಗೆ ಮಕ್ಕಳನ್ನು ಹೆಗಲ ಮೇಲೆ ಹೊತ್ತು ಸಾಗಿ ಅಲ್ಲಿ ಶಾಲೆ ಶಾಲೆಗೆ ಬಿಟ್ಟು ಬರಬೇಕಾದ ಸ್ಥಿತಿ ಇದೆ.

ಬಿಜೆಪಿಯಲ್ಲಿ‌ ಲಿಂಗಾಯತರ ಕಡೆಗಣನೆ, ಹುಬ್ಬಳ್ಳಿಯಲ್ಲಿ ರಾಹುಲ್ - ಶೆಟ್ಟರ್ ಸುದೀರ್ಘ

ಕೂಲಿ ನಾಲಿ ಮಾಡಿ ಬದುಕುವ ನಾವು ಮಕ್ಕಳನ್ನು ಶಾಲೆಗೆ ಬಿಡುವುದಕ್ಕಾಗಿ ನಿತ್ಯ ಒಬ್ಬರು ಮೀಸಲಾದರೆ ನಮ್ಮ ಬದುಕು ನಡೆಯುವುದಾದರೂ ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ. ಕಳೆದ ಒಂದು ವರ್ಷದ ಹಿಂದಿನವರೆಗೆ ನಮ್ಮ ಹದಿನೈದು ಕುಟುಂಬಗಳಿಗೆ ವಿದ್ಯುತ್ ಸಂಪರ್ಕವೂ ಇರಲಿಲ್ಲ. ಪಂಚಾಯಿತಿ ಉಪಾಧ್ಯಕ್ಷರು ಎಲ್ಲರ ವಿರೋಧದ ನಡುವೆ ವಿದ್ಯುತ್ ಲೈನ್ ಎಳೆಸಿಕೊಟ್ಟಿದ್ದಾರೆ. ಆಗಲೋ, ಈಗಲೋ ಬಿದ್ದು ಹೋಗುವಂತಹ ಸ್ಥಿತಿಯಲ್ಲಿರುವ ನಮ್ಮ ಮನೆಗಳಿಗೆ ಸರ್ಕಾರದಿಂದ ಮನೆ ಮಂಜೂರಾಗಿದ್ದು, ಅವುಗಳನ್ನು ನಿರ್ಮಿಸಿಕೊಳ್ಳುವುದಕ್ಕೆ ಬೇಕಾಗಿರುವ ವಸ್ತುಗಳನ್ನು ಸಾಗಿಸಲು ರಸ್ತೆ ಇಲ್ಲದಂತೆ ಆಗಿದೆ. ಸಂಬಂಧಿಸಿದ ಅಧಿಕಾರಿಗಳು ರಸ್ತೆ ಬಿಡಿಸಿಕೊಡಬೇಕು. ಇಲ್ಲದಿದ್ದರೆ ಚುನಾವಣೆಯನ್ನು ಬಹಿಷ್ಕರಿಸಿ, ಕಂದಾಯ ಇಲಾಖೆ ಕಚೇರಿ ಮುಂದೆ ಅವಿರತ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರಾದ ಮಾಲತಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios