ಚಿಕ್ಕಮಗಳೂರಿನ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ದರ್ಗಾ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಸ್ಲಿಂ ಸಮುದಾಯ ಮತ್ತು ಎಸ್‌ಡಿಪಿಐ ತಿರುಗಿಬಿದ್ದಿದೆ. ಉರೂಸ್ ಆಚರಣೆಗೆ ನಿರ್ಬಂಧ ಹೇರಿರುವುದನ್ನು ವಿರೋಧಿಸಿ, ಕಾಂಗ್ರೆಸ್ ಬಿಜೆಪಿಗಿಂತ ಅಪಾಯಕಾರಿ ಎಂದು ಆರೋಪಿಸಿದ್ದಾರೆ. 

ಚಿಕ್ಕಮಗಳೂರು (ಮಾ. 5): ಕಾಫಿನಾಡು ಚಿಕ್ಕಮಗಳೂರಿನಲ್ಲಿ ರಾಜಕೀಯ ಸಮೀಕರಣಗಳು ಬದಲಾಗುವ ಮುನ್ಸೂಚನೆ ಸಿಕ್ಕಿದೆ. ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ದರ್ಗಾದ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧವೇ ಮುಸ್ಲಿಂ ಸಮುದಾಯ ಮತ್ತು ಎಸ್‌ಡಿಪಿಐ (SDPI) ಮುಖಂಡರು ಬಹಿರಂಗವಾಗಿ ತಿರುಗಿ ಬಿದ್ದಿದ್ದಾರೆ.

Add Asianetnews Kannada as a Preferred SourcegooglePreferred

ಬಿಜೆಪಿಗಿಂತ ಕಾಂಗ್ರೆಸ್ಸೇ ಮೋಸ್ಟ್ ಡೇಂಜರ್!

ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಹಿತರಕ್ಷಣೆ ಮಾಡುವ ಬದಲು ಬಿಜೆಪಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಹಿಂದೂತ್ವದ ಅಜೆಂಡಾ ಜಾರಿಗೆ ತರುತ್ತಿದೆ ಎಂದು ಮುಸ್ಲಿಂ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ. 'ಬಿಜೆಪಿಯೇ ಎಷ್ಟೋ ಪರವಾಗಿಲ್ಲ, ಈ ಕಾಂಗ್ರೆಸ್ ಪಕ್ಷ ಬಿಜೆಪಿಗಿಂತಲೂ ಹೆಚ್ಚು ಅಪಾಯಕಾರಿಯಾಗಿದೆ. ಕಾಂಗ್ರೆಸ್ ಮೋಸಗಾರ ಪಕ್ಷ. ಇದನ್ನು ನಾವು ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ' ಎಂದು ಎಸ್‌ಡಿಪಿಐ ಮುಖಂಡ ಮುನೀರ್ ಗುಡುಗಿದರು.

ದತ್ತಪೀಠದ ಉರೂಸ್ ವಿವಾದ: ಜಿಲ್ಲಾಡಳಿತದ ವಿರುದ್ಧ SDPI ಕಿಡಿ

ದತ್ತಜಯಂತಿ ವೇಳೆ ಇಡೀ ನಗರವನ್ನು ಕೇಸರಿಮಯ ಮಾಡಲು ಬಿಡುವ ಜಿಲ್ಲಾಡಳಿತ, ಉರೂಸ್ ಸಮಯದಲ್ಲಿ ಒಂದು ಹಸಿರು ಬಾವುಟ ಕಟ್ಟಲು ಬಿಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. 'ಸುಪ್ರೀಂಕೋರ್ಟ್ ಆದೇಶದಂತೆ ಉರೂಸ್ ವೇಳೆ ಗರ್ಭಗುಡಿಯ ಗೋರಿಗೆ ಹೊಸ ಬಟ್ಟೆ ಹಾಕಬೇಕು, ಗಂಧ ಹಚ್ಚಬೇಕು. ಆದರೆ ಜಿಲ್ಲಾಡಳಿತವು ದತ್ತಪೀಠದ ಆವರಣದ ಹೊರಗಿರುವ ಗೋರಿಗಳಿಗೆ ಮಾತ್ರ ಈ ಆಚರಣೆ ಸೀಮಿತಗೊಳಿಸುತ್ತಿದೆ' ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರದಿಂದ ಹಿಂದೂ ಅರ್ಚಕರ ನೇಮಿಸಿ, ತ್ರಿಕಾಲ ಪೂಜೆ

ಬಿಜೆಪಿ ಸರ್ಕಾರವು ಕೇವಲ 3 ದಿನಗಳ ಕಾಲ ಹಿಂದೂ ಅರ್ಚಕರ ನೇಮಕಕ್ಕೆ ಸುಪ್ರೀಂಕೋರ್ಟ್ ಬಳಿ ಅನುಮತಿ ಕೇಳಿತ್ತು. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರವು ಶಾಶ್ವತವಾಗಿ ಹಿಂದೂ ಅರ್ಚಕರನ್ನು ನೇಮಿಸಿ, ತ್ರಿಕಾಲ ಪೂಜೆ ಮಾಡಿಸುವ ಮೂಲಕ ದರ್ಗಾವನ್ನು ಸಂಪೂರ್ಣವಾಗಿ ಹಿಂದೂ ದೇವಾಲಯವನ್ನಾಗಿ ಮಾಡಿದೆ ಎಂದು ಆರೋಪಿಸಿದರು. 'ಸೂಫಿ ಸಂತರ ನೇತೃತ್ವದಲ್ಲಿ ನಡೆಯಬೇಕಿದ್ದ ಉರೂಸ್ ಅನ್ನು ಜಿಲ್ಲಾಡಳಿತ ಹತ್ತಿಕ್ಕುತ್ತಿದೆ' ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ಮನೆಮನೆಗೆ ಮಾಧುಸ್ವಾಮಿ ವರದಿ ಹಂಚಿಕೆ

ಜಿಲ್ಲಾಡಳಿತ ಮತ್ತು ಸರ್ಕಾರದ ಈ ಧೋರಣೆಯನ್ನು ಖಂಡಿಸಿರುವ ಎಸ್‌ಡಿಪಿಐ, ಸತ್ಯವನ್ನು ಜನರಿಗೆ ತಿಳಿಸಲು ನಿರ್ಧರಿಸಿದೆ. 'ಮಾಧುಸ್ವಾಮಿ ವರದಿ ಮತ್ತು ಸುಪ್ರೀಂಕೋರ್ಟ್ ನೀಡಿದ ಆದೇಶದ ಪ್ರತಿಗಳನ್ನು ನಾವು ಮನೆಮನೆಗೆ ಹಂಚುತ್ತೇವೆ. ಕಾಂಗ್ರೆಸ್ ಮಾಡುತ್ತಿರುವ ಅನ್ಯಾಯವನ್ನು ಜನರ ಮುಂದೆ ಬಯಲು ಮಾಡುತ್ತೇವೆ' ಎಂದು ಎಸ್‌ಡಿಪಿಐ ಮುಖಂಡ ಮುನೀರ್ ಎಚ್ಚರಿಕೆ ನೀಡಿದರು.