ಭೇರ್ಯ (ಜ.20):  ನನಗೆ ಕೆ.ಆರ್‌. ನಗರ ತಾಲೂಕಿನ ಜನತೆ ಆರ್ಶೀವಾದ ಮಾಡಿದರೆ ಹಳ್ಳಿಗಳ ರಸ್ತೆಗಳಿಗೆ ಡಾಂಬರೀಕರಣ ಮಾಡುವುದಾಗಿ ಹೇಳಿದ್ದೆ, ಮಾತಿಗೆ ತಪ್ಪದೇ ರಸ್ತೆಗಳ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ ಎಂದು ಸಂಸದೆ ಸುಮಲತಾ ಅಂಬರೀಶ್‌ ಹೇಳಿದರು.

ಹೊಸ ಅಗ್ರಹಾರ ಹೋಬಳಿಯ ಕಂಚಿನಕೆರೆ ಗ್ರಾಮದಲ್ಲಿ ಹಾಸನ- ಮೈಸೂರು ಹೆದ್ದಾರಿಯಿಂದ ಕಂಚಿನಕೆರೆ - ಮಾರಗೌಡನಹಳ್ಳಿ ಮಾರ್ಗವಾಗಿ ತಾಲೂಕಿನ ಗಡಿ ಭಾಗದವರೆಗೂ ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ 3.84 ಕೋಟಿ ರು. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಯ ಪರಿವೀಕ್ಷಣೆ ನೆಡಸಿ ನಂತರ ಅವರು ಮಾತನಾಡಿದರು.

ಕೆ.ಆರ್‌. ನಗರ ತಾಲೂಕಿನ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿಯಲ್ಲಿ ಸುಮಾರು 24 ಕೋಟಿ ರು. ಹಣವನ್ನು ಸಂಸದರ ಅನುದಾನದಲ್ಲಿ ನೀಡಿದ್ದೇನೆ ಎಂದು ತಿಳಿಸಿದರು.

ಸಿನಿಮಾ ಆಗಲಿದೆಯೇ ನಟಿ ಸುಮಲತಾ ರಾಜಕೀಯ ಜೀವನ! ..

ಮಂಡ್ಯ ಜಿಲ್ಲೆ ಲೋಕಸಭಾ ಕ್ಷೇತ್ರವಾದರು ಮೈಸೂರು ಜಿಲ್ಲೆಯ ಕೆ.ಆರ್‌. ನಗರ ತಾಲೂಕು ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸೇರಿಸಲಾಗಿದೆ, ಕೆಲವೊಂದು ಸ್ವಾರ್ಥ ರಾಜಕಾರಣದಿಂದ ಸ್ವಂತ ಕ್ಷೇತ್ರದ ತಾಲೂಕಿಗೆ ಹೆಚ್ಚು ಅನುದಾನವನ್ನು ಸಂಸದರ ಅನುದಾನ ಬಳಕೆಯಾಗಿತ್ತು. ನಾನು ಸಂಸದೆಯಾಗಿ ಬಂದ ಮೇಲೆ ಮಂಡ್ಯ ಲೋಕಸಭಾ ಕ್ಷೇತ್ರದ ಎಲ್ಲ ತಾಲೂಕಿಗೆ ಸಮನಾಗಿ ಅನುದಾನ ನೀಡಿರುವುದಾಗಿ ಅವರು ತಿಳಿಸಿದರು.

ನನಗೆ ಮೊದಲು ಸವಾಲಿನ ಕೆಲಸವಾಗಿತ್ತು, ಈ ಮಧ್ಯೆ ಕೇಂದ್ರ ಸರ್ಕಾರ ಮುಂದಿನ ಎರಡು ವರ್ಷದವರೆವಿಗೆ ನನಗೆ ಬರಬೇಕಿದ್ದ 10 ಕೋಟಿ ಸಂಸದರ ಅನುದಾನವನ್ನು ಬಿಡುಗಡೆ ಮಾಡಿಲ್ಲ, ಕಾರಣ ಕೋವಿಡ್‌-19 ಹಿನ್ನಲೆಯಲ್ಲಿ ಕಡಿತ ಮಾಡಲಾಗಿದೆ. ಮೊದಲ ವರ್ಷ ಎರಡು ಕೋಟಿ ಅನುದಾನ ಬಂದಿದ್ದನ್ನು ಸಮನಾಗಿ ಕೆ.ಆರ್‌. ನಗರ ತಾಲೂಕಿಗೆ 30 ಲಕ್ಷ ನೀಡಿದ್ದೇನೆ ಎಂದು ತಿಳಿಸಿದರು.

ನಾನು ಹೋದ ಕಡೆಗಳಲ್ಲಿ ಸಮುದಾಯ ಭವನ ಅಥವಾ ದೇವಸ್ಥಾನ ಅಭಿವೃದ್ಧಿಗೆ ಅನುದಾನ ಕೇಳುತ್ತಿದ್ದಾರೆ. ಆದರೆ 2021-22 ನೇ ಸಾಲಿನವರೆಗೆ 10 ಕೋಟಿ ಕಡಿತ ಮಾಡಿರುವ ಕೇಂದ್ರ ಸರ್ಕಾರ ಆಸ್ಪತ್ರೆ, ಕುಡಿಯುವ ನೀರು, ಶಾಲೆಗಳಿಗೆ ಅನುದಾನ ಬಳಸಬಹುದು, ಆದ್ದರಿಂದ ಹೆಚ್ಚಿನ ಆದ್ಯತೆ ಮೇರೆಗೆ ಅಭಿವೃದ್ಧಿಗೆ ಸಹಕರಿಸಿ, ಮುಂದಿನ ದಿನಗಳಲ್ಲಿ ಸಮುದಾಯ ಭವನ, ದೇವಸ್ಥಾನದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಅವರು ಭರವಸೆ ನೀಡಿದರು.

ಜಿಪಂ ಸದಸ್ಯ ಡಿ. ರವಿಶಂಕರ್‌, ತಾಲೂಕು ಕುರುಬ ಸಂಘದ ಅಧ್ಯಕ್ಷ ಶಿವಣ್ಣ, ತಾಪಂ ಅಧ್ಯಕ್ಷ ಚಂದ್ರಶೇಖರ್‌, ಮಾಜಿ ಅಧ್ಯಕ್ಷ ಯೋಗೇಶ್‌, ಸದಸ್ಯ ಜಿ.ಎಸ್‌. ಮಂಜುನಾಥ್‌, ಗ್ರಾಪಂ ಸದಸ್ಯರಾದ ರಾಜಮ್ಮ, ರಾಜೇಗೌಡ ಇದ್ದರು.