ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣದ ಮೊದಲ ಆರೋಪಿ ಇಮ್ಮಡಿ ಮಹದೇವಸ್ವಾಮಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಆರೋಗ್ಯದ ಕಾರಣ ನೀಡಿ ಜಾಮೀನು ಪಡೆದ ಆತ ಮೈಸೂರು ಜೈಲಿನಿಂದ ಬಿಡುಗಡೆಯಾಗಿದ್ದು, ಸಂತ್ರಸ್ತರು ಈ ನಿರ್ಧಾರವನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ.
ಚಾಮರಾಜನಗರ: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣದ ಮೊದಲನೇ ಆರೋಪಿ ಇಮ್ಮಡಿ ಮಹದೇವಸ್ವಾಮಿಗೆ ಜಾಮೀನು ಮಂಜೂರು ಮಾಡಲಾಗಿದೆ. ಜಾಮೀನಿನ ಮೇಲೆ ಸೋಮವಾರ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಮೈಸೂರು ಜೈಲಿನಿಂದ ಇಮ್ಮಡಿ ಮಹಾದೇವಸ್ವಾಮಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಆರೋಗ್ಯದ ಕಾರಣಕ್ಕಾಗಿ ಹೈಕೋರ್ಟ್ ಷರತ್ತುಬದ್ದ ಜಾಮೀನು ನೀಡಿತ್ತು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಹಿನ್ನೆಲೆ ತಕ್ಷಣದ ವೈದ್ಯಕೀಯ ಚಿಕಿತ್ಸೆಗಾಗಿ ಹೈ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.
ಹೈಕೋರ್ಟ್ ಮಂಜೂರು ಮಾಡಿರುವ ಜಾಮೀನು ಪ್ರತಿಯನ್ನು ಚಾಮರಾಜನಗರ ನ್ಯಾಯಾಲಯಕ್ಕೆ ಸಲ್ಲಿಸಲು ಮತ್ತು ವಿಚಾರಣೆಗೆ ಇಂದು ಖುದ್ದು ಚಾಮರಾಜನಗರ ಜಿಲ್ಲಾ ನ್ಯಾಯಾಲಯಕ್ಕೆ ಇಮ್ಮಡಿ ಮಹಾದೇವಸ್ವಾಮಿ ಹಾಜರಾದನು. ಕಾವಿ ಧರಿಸದೇ ಶ್ವೇತ ವಸ್ತ್ರಧಾರಿಯಾಗಿ ನ್ಯಾಯಾಲಯಕ್ಕೆ ಹಾಜರಾದ ಸ್ವಾಮೀಜಿ ವಿಚಾರಣೆ ಮುಗಿಸಿ ತೆರಳಿದರು. ಇಮ್ಮಡಿ ಮಹಾದೇವಸ್ವಾಮಿ ವಕೀಲ ಸಿದ್ದಾರ್ಥ್ ಕರೆತಂದಿದ್ದರು.
ಏನಿದು ಪ್ರಕರಣ
ಹನೂರು ತಾಲೂಕಿನ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಪಾರಮ್ಯ ಸಾಧಿಸಲು 2018 ರ ಡಿ.14 ರಂದು ಪ್ರಸಾದಕ್ಕೆ ವಿಷ ಬೆರೆಸಲಾಗಿತ್ತು. ವಿಷ ಪ್ರಸಾದ ಸೇವಿಸಿದ್ದ 17 ಮಂದಿ ಭಕ್ತರು ಸಾವನ್ನಪ್ಪಿ, 123 ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದರು. ಈ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಮಹಾದೇವಸ್ವಾಮಿ 2018 ರಿಂದಲೂ ಮೈಸೂರು ಕಾರಾಗೃಹದಲ್ಲಿ ವಿಚಾರಣಾ ಕೈದಿಯಾಗಿದ್ದರು.
ಜಾಮೀನು ಮಂಜೂರು ಖಂಡಿಸಿ ಪ್ರತಿಭಟನೆ
ಸುಳ್ವಾಡಿ ವಿಷ ಪ್ರಸಾದ ದುರಂತದ ಮೊದಲನೇ ಆರೋಪಿ ಇಮ್ಮಡಿ ಮಹಾದೇವಸ್ವಾಮಿಗೆ ಜಾಮೀನು ಮಂಜೂರು ಖಂಡಿಸಿ ಸಂತ್ರಸ್ತರು ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇಗುಲದ ಮುಂಭಾಗ ಪ್ರತಿಭಟನೆ ನಡೆಸಿದ್ದರು. ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇಗುಲ ಮುಂಭಾಗ ಜಮಾಯಿಸಿದ ಸಂತ್ರಸ್ತ ಕುಟುಂಬಗಳು, ಕೈಯಲ್ಲಿ ಪೆಟ್ರೋಲ್ ಹಿಡಿದು ಇಮ್ಮಡಿ ಮಹಾದೇವಸ್ವಾಮಿ ವಿರುದ್ಧ ಧಿಕ್ಕಾರ ಕೂಗಿ, ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದ್ದರು.


