ಆಟ ಆಡೋ ವಯಸ್ಸಲ್ಲಿ ತಂದೆಯ ಸೇವೆ ಮಾಡ್ತಿರುವ ಮಗ: ಸುಲ್ತಾನ್ ಕಾರ್ಯಕ್ಕೆ ಸಲಾಂ ಎಂದ ಜನತೆ..!
* ತಂದೆಯ ಸೇವೆಯಲ್ಲೇ ಕಾಲ ಕಳೆಯುತ್ತಿರುವ ಮಗ
* 6 ವರ್ಷದ ಹುಡುಗನಲ್ಲಿ ದೊಡ್ಡ ಗುಣ.
* ತಾಯಿ ಇಲ್ಲದ ತಬ್ಬಲಿಗೆ ದೇವರು ಇದೆಂತ ಪರೀಕ್ಷೆ
ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಕೋಲಾರ(ಜೂ.18): ಈ ಕಾಲದಲ್ಲಿ ಮಕ್ಕಳು ಮೊಬೈಲ್‌ನಲ್ಲಿ ಸದಾ ಬ್ಯೂಸಿ ಆಗಿರುತ್ತಾರೆ. ಕಾಲ ಬದಲಾದಂತೆ ತಂದೆ ತಾಯಿಯ ಬಾಂಧವ್ಯವನ್ನು ಮಕ್ಕಳು ಮರೆಯುತ್ತಿದ್ದಾರೆ. ಆದ್ರೆ ಇಲ್ಲೊಬ್ಬ ತಾಯಿ ಇಲ್ಲದ ತಬ್ಬಲಿ, 6 ವರ್ಷದ ಹುಡುಗ ಎರಡು ವರ್ಷದಿಂದ ತಂದೆಯ ಸೇವೆಯಲ್ಲಿ ಕಾಲ ಕಳೆಯುತ್ತಿದ್ದಾನೆ. ಇವನ ಹಿಂದೆ ಇಡೀ ಆಸ್ಪತ್ರೆಯೂ ಸಹ ಕೈ ಜೋಡಿಸಿದೆ.
ಕಾಲು ಮುರಿದುಕೊಂಡು ಕುಂತಲ್ಲೇ ಕೂತಿರುವ ತಂದೆ. ವ್ಹೀಲ್ ಚೇರ್ ಬಳಸಿ ತಂದೆಯನ್ನು ಕರೆದುಕೊಂಡು ಹೋಗುತ್ತಿರುವ ಪುಟಾಣಿ ಮಗ. ಮಗನ ದೊಡ್ಡ ಗುಣ ಕಂಡು ಕೈ ಜೋಡಿಸಿರುವ ಆಸ್ಪತ್ರೆಯ ಸಿಬ್ಬಂದಿಗಳು. ತಾಯಿಯ ಪ್ರೀತಿಯನ್ನು ತಂದೆಯಲ್ಲಿ ಕಾಣುತ್ತಿರುವ ಮಗ. ಅಂದಹಾಗೆ ಈ ರೀತಿ ಮನ ಮಿಡಿಯುವ ದೃಶ್ಯಗಳು ನಮಗೆ ಕಂಡುಬಂದಿದ್ದು ಕೋಲಾರ ಜಿಲ್ಲಾ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ.ಈಗೆ ಕಾಲು ಮುರಿದುಕೊಂಡು ವೀಲ್ ಚೇರ್ ಮೂಲಕ ಜೀವನ ಸಾಗಿಸುತ್ತಿರುವ ಈತನ ಹೆಸರು ತಬ್ರೋಜ್ ಅಂತ, ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಮೂಲದ ನಿವಾಸಿ. ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ತಬ್ರೋಜ್ ನ ಜೀವನ ಕಳೆದ ಎರಡು ವರ್ಷಗಳ ಹಿಂದೆ ಚೆನ್ನಾಗಿಯೇ ಇತ್ತು, ಆದ್ರೆ ಮದನಪಲ್ಲಿ ರಸ್ತೆಯಲ್ಲಿ ಆಟೋ ಓಡಿಸಿಕೊಂಡು ಹೋಗುವಾಗ ಟಾಟಾ ಸುಮೋಗೆ ಡಿಕ್ಕಿ ಹೊಡೆದ ಪರಿಣಾಮ ತಬ್ರೋಜ್ ನ ಬಲಗಾಲು ಮುರಿದುಹೋಗಿತ್ತು, ಕೂಡಲೇ ಜಿಲ್ಲಾಸ್ಪತ್ರೆಗೆ ಸ್ಥಳೀಯರು ದಾಖಲಿಸಿ ಚಿಕಿತ್ಸೆ ನೀಡಿದ್ರು ಸಹ ಇಂದಿಗೂ ಈತನ ಕಾಲು ಸರಿಯಾಗಿಲ್ಲ.
ಕೋಲಾರ: ಅಪ್ಪನ ಕೆಲಸ ನನಗೆ ನೀಡಿಲ್ಲ ಎಂದು ಮಗ ಆತ್ಮಹತ್ಯೆಗೆ ಯತ್ನ
ಪ್ರತಿ ಕೆಲಸಕ್ಕೂ ವ್ಹೀಲ್‌ಚೇರ್ ಮೇಲೆ ಅವಲಂಬನೆ ಆಗಿರುವ ತಬ್ರೋಜ್ ಪಡಬಾರದ ಪಾಡು ಪಡ್ತಿದ್ದಾನೆ. ಇನ್ನು ಇದೇ ವೇಳೆ ತಬ್ರೋಜ್ ನ ಪತ್ನಿ ಸಹ ಇದ್ದಕ್ಕಿದಂತೆ ಕಾಣೆ ಆಗಿದ್ದಾಳೆ. ಘಟನೆ ನಡೆದ ವೇಳೆ ತಬ್ರೋಜ್ ನ ಮಗ ಸುಲ್ತಾನ್ ಗೆ 4 ವರ್ಷ, ಇತ್ತ ತಾಯಿಯ ಪ್ರೀತಿ ಸಿಗದೆ, ಆಧಾರವಾಗಿದ್ದ ತಂದೆಯ ಪರಿಸ್ಥಿತಿಯನ್ನು ಕಂಡು ಸುಲ್ತಾನ್ ತಂದೆಯ ಸೇವೆಯಲ್ಲಿ ತೊಡಗಿಕೊಂಡಿದ್ದಾನೆ. ಹೇಗಾದ್ರು ಮಾಡಿ ತಂದೆಯ ಕಾಲು ಸರಿ ಮಾಡಿಸಲೇಬೇಕು ಎಂದು ಪ್ರತಿ ಕ್ಷಣ ತಬ್ರೋಜ್ ನ ಸೇವೆಯಲ್ಲಿ ಮುಳುಗಿದ್ದಾನೆ. ಇಬ್ಬರಿಗೂ ಅವರೇ ಪ್ರಪಂಚವಾಗಿದ್ದು, ತಂದೆ ಮಗನ ಪ್ರೀತಿ ಕಂಡು ಇಡೀ ಆಸ್ಪತ್ರೆಯೇ ಸುಲ್ತಾನ್ ಜೊತೆ ಕೈ ಜೋಡಿಸಿ ಕೈಲಾದಷ್ಟು ಸಹಾಯ ಮಾಡ್ತಿದ್ದಾರೆ.
ಇನ್ನು ಸುಲ್ತಾನ್ ಬಗೆ ಈಗ 6 ವರ್ಷ ವಯಸ್ಸು, ಆಟ ಆಡುತ್ತಾ ಬೆಳಯುವ ವಯಸ್ಸು ಬೇರೆ.ಈಗಿರುವ ಇಷ್ಟು ಚಿಕ್ಕ ವಯಸ್ಸಿಗೆ ಸುಲ್ತಾನ್ ಇರುವ ದೊಡ್ಡ ಗುಣ ಕಂಡು ಎಂತಹವರಿಗೂ ಮನ ಮಿಡಿಯುತ್ತೆ. ಈಗಾಗಿ ಆಸ್ಪತ್ರೆಯ ಸಿಬ್ಬಂದಿಯಾದ ಗೋವಿಂದ್ ಹಾಗೂ ಸ್ನೇಹಿತರು ಯಾವುದೇ ಜಾತಿ, ಧರ್ಮ ಅನ್ನೋ ಭೇದ ಭಾವವಿಲ್ಲದೆ ತಮ್ಮ ಸ್ವಂತ ಕುಟುಂಬಸ್ಥರಂತೆ ರೀತಿ ಸುಲ್ತಾನ್ ಕೇಳಿದನ್ನು ಕೊಡಿಸಿ ಖುಷಿ ಪಡಿಸುವ ಮೂಲಕ ಕೇರ್ ಮಾಡ್ತಿದ್ದಾರೆ.ಸಮಯಕ್ಕೆ ಸರಿಯಾಗಿ ಸ್ನಾನ, ಊಟ ಹಾಗೂ ಆಸ್ಪತ್ರೆಯಲ್ಲೇ ವಸತಿ ವ್ಯವಸ್ಥೆ ಮಾಡಿದ್ದು,ಬಾಲಕ ಸುಲ್ತಾನ್ ತಾಯಿಯ ಪ್ರೀತಿಯನ್ನು ಇವರಲ್ಲಿ ಕಾಣುತ್ತಿದ್ದಾನೆ.
Kolar: ಬೀದಿ ನಾಯಿಗಳ ಕಾಟ: ಸಾರ್ವಜನಿಕರಿಗೆ ತೀವ್ರ ತೊಂದರೆ!
ಇನ್ನು ಈಗ ಸುಲ್ತಾನ್ ಗೆ ಜಿಲ್ಲಾಸ್ಪತ್ರೆಯೇ ಪ್ರಪಂಚವಾಗಿದೆ.ಮೊದಲನೇ ಹಾಗೂ ಎರಡನೇ ಕೋವಿಡ್ ಅಲೆ ಇದ್ದಾಗಲು ಹೆದರದೆ ಪ್ರತಿಕ್ಷಣ ತಂದೆಯ ಯೋಗಕ್ಷೇಮ ವಿಚಾರಿಸೋದು,ಟೈಂ ಸರಿಯಾಗಿ ಊಟ, ಮಾತ್ರೆ ನೀಡೋದು,ಡಾಕ್ಟರ್ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸೋದು ಸುಲ್ತಾನ್ ಕೆಲಸವಾಗಿತ್ತು. ಇದೀಗ ಸುಲ್ತಾನ್ ಗೆ ಒಂದನೇ ತರಗತಿಗೆ ಸೇರುವ ವಯಸ್ಸಾಗಿರೋದ್ರಿಂದ ವಿದ್ಯಾಭ್ಯಾಸದಿಂದ ದೂರ ಉಳಿಬಾರದು ಅಂತ ಗೋವಿಂದ್ ಆಂಡ್ ಟೀಂ ಖರ್ಚು ಹಾಕಿಕೊಂಡು ಒಳ್ಳೆಯ ಶಾಲೆಗೆ ಸೇರಿಸುವ ಪ್ಲಾನ್ ನಲ್ಲಿದ್ದಾರೆ. ದಿನದಿಂದ ತಬ್ರೋಜ್ ನ ಕಾಲು ಸಹ ಕ್ಷೀಣಿಸುತ್ತಿದ್ದು, ಸರಿಯಾಗುವುದು ಕಷ್ಟ ಅಂತ ವೈದ್ಯರು ಹೇಳಿದ್ದಾರೆ. ಹೀಗಾಗಿ ನಮ್ಮಲ್ಲಿ ಯಾರಿಗಾದ್ರು ಸುಲ್ತಾನ್ ನನ್ನು ದತ್ತು ನೀಡಿದ್ರೆ ನಾವು ಸಾಕೋದಕ್ಕೆ ಸಿದ್ದ ಅಂತಿದ್ದಾರೆ ಆಸ್ಪತ್ರೆಯ ಕೆಲ ಸಿಬ್ಬಂದಿ.
ಒಟ್ಟಾರೆ ತಾಯಿ ಪ್ರೀತಿಯಿಂದ ದೂರ ಉಳಿದಿರುವ ಸುಲ್ತಾನ್ ನ ಪ್ರಪಂಚ ತಂದೆಯೇ ಆಗಿದ್ದಾರೆ. ತಂದೆ ತಾಯಿಯ ಬಾಂಧವ್ಯವನ್ನು ಮರೆಯುತ್ತಿರುವ ಮಕ್ಕಳ ನಡುವೆ ಇಂತಹ ದೊಡ್ಡ ಮನಸ್ಸು ಇರುವ ಬಾಲಕ ಹುಟ್ಟಿರೋದು ಸಮಾಜಕ್ಕೆ ಆದರ್ಶ ಅಂದ್ರೆ ತಪ್ಪಾಗೋದಿಲ್ಲ. ಅವರವರ ಜೀವನ ನೋಡಿಕೊಂಡು ಹೋಗುತ್ತಿರುವ ಬ್ಯೂಸಿ ಪ್ರಪಂಚದಲ್ಲಿ, ಸುಲ್ತಾನ್ ನ ಕಷ್ಟಕ್ಕೆ ಕೈ ಜೋಡಿಸಿ ಮಿಡಿಯುತ್ತಿರುವ ಆಸ್ಪತ್ರೆಯ ಸಿಬ್ಬಂದಿಗಳಿಗೂ ಸಲಾಂ ಹೇಳಲೇಬೇಕು.