ದುರ್ಗಾಕುಮಾರ್‌ ನಾಯರ್‌ಕೆರೆ

ಸುಳ್ಯ [ಆ.28]: ಸುಳ್ಯ ವಿಧಾನಸಭಾ ಕ್ಷೇತ್ರದ ಪಾಲ್ತಾಡು ಗ್ರಾಮದ ಕುಂಜಾಡಿ ಮನೆತನದ ನಳಿನ್‌ಕುಮಾರ್‌ ಕಟೀಲ್‌ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿದ್ದಾರೆ. ನಿಜಕ್ಕಾದರೆ ಕ್ಷೇತ್ರದ ಮಣ್ಣಿನ ಮಗನ ಪದಗ್ರಹಣ ಸಂದರ್ಭ ಸುಳ್ಯದ ಬಿಜೆಪಿಯವರು ಸಂಭ್ರಮದಿಂದ ನಲಿದಾಡಬೇಕಿತ್ತು. ಆದರೆ ಈ ಬಾರಿ ಹಾಗಾಗಿಲ್ಲ. ಇಲ್ಲಿನ ಕಾರ್ಯಕರ್ತರ ಆಕ್ರೋಶ ತಗ್ಗಿದಂತಿಲ್ಲ. ಸುಳ್ಯದಲ್ಲಿ ಮಾತ್ರವಲ್ಲ, ದ.ಕ. ಜಿಲ್ಲೆಯಲ್ಲೂ ವಿಜಯೋತ್ಸವ ನಡೆದಿಲ್ಲ.

ಭದ್ರಕೋಟೆ: ಸುಳ್ಯ ವಿಧಾನಸಭಾ ಕ್ಷೇತ್ರ ಕಳೆದ ಮೂರು ದಶಕದಿಂದ ಬಿಜೆಪಿಯ ಭದ್ರಕೋಟೆ. ಕಳೆದ 6 ಅವಧಿಯಿಂದಲೂ ಇಲ್ಲಿ ಬಿಜೆಪಿ ಶಾಸಕರು ಬಹುಮತದಿಂದ ಗೆದ್ದುಬರುತ್ತಿದ್ದಾರೆ. ಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ವಿಜಯದ ಹಿಂದೆ ಸುಳ್ಯ ವಿಧಾನಸಭಾ ಕ್ಷೇತ್ರದ ದೊಡ್ಡ ಕೊಡುಗೆಯಿದೆ. ನಳಿನ್‌ ಕುಮಾರ್‌ ಕಟೀಲ್‌ರಿಗೆ ಮೂರು ಬಾರಿಯೂ ಭರ್ಜರಿ ಬಹುಮತ ಕೊಟ್ಟದ್ದು ಇದೇ ಕ್ಷೇತ್ರ. ಇಲ್ಲಿ ಜಿ.ಪಂ. ಸದಸ್ಯರು, ತಾ.ಪಂ. ಸದಸ್ಯರು ಬಹುತೇಕ ಬಿಜೆಪಿಯವರೇ. ಗ್ರಾ.ಪಂ, ಹಾಗೂ ಸಹಕಾರ ಸಂಘಗಳು ಕೂಡಾ ಬಿಜೆಪಿ ಬೆಂಬಲಿಗರ ಹಿಡಿತದಲ್ಲಿಯೇ ಇದೆ.

ಸಂಘ ಪರಿವಾರದ ಮುಖಂಡರು ಪಕ್ಷ ಸಂಘಟನೆಯಲ್ಲೂ ಪರೋಕ್ಷವಾಗಿ ಭಾಗವಹಿಸುತ್ತಾರೆ. ಬಿಜೆಪಿಯ ಯಾವುದೇ ಸಭೆಗೂ ಕರೆ ಕೊಟ್ಟಾಕ್ಷಣ ಜನ ಬಂದು ಸೇರುತ್ತಾರೆ. ದೇಶದಲ್ಲಿ ನಡೆಯುವ ಯಾವುದೇ ವಿಚಾರದ ಪ್ರತಿಭಟನೆ ಇದ್ದರೂ ಇಲ್ಲಿ ಅದಕ್ಕೆ ತಕ್ಷಣ ಸ್ಪಂದಿಸುತ್ತಾರೆ. ದೇಶದ ಬಿಜೆಪಿಯ ಮಟ್ಟಿಗೆ ಯಾವುದೇ ಸಂತೋಷದ ಸಂಗತಿ ಎದುರಾದರೂ ಇಲ್ಲಿ ಪಟಾಕಿ ಹಚ್ಚಿ ಸಂಭ್ರಮಿಸುತ್ತಾರೆ.

ಅಂತಹ ವಾತಾವರಣವಿರುವ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಇದೇ ಕ್ಷೇತ್ರದ ನಾಯಕರೂ ಈ ಭಾಗದ ಸಂಸದರೂ ಆಗಿರುವ ನಳಿನ್‌ಕುಮಾರ್‌ ಕಟೀಲ್‌ ಪಕ್ಷದ ರಾಜ್ಯಾಧ್ಯಕ್ಷರಾಗಿ ಪದಗ್ರಹಣ ನಡೆಸುವ ಸಂದರ್ಭ ಯಾವುದೇ ಹರ್ಷಾಚರಣೆಯಾಗಲೀ, ವಿಜಯೋತ್ಸವವಾಗಲೀ ನಡೆಯಲಿಲ್ಲ. ಸುಳ್ಯದ ಒಂದಷ್ಟುಮುಖಂಡರು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಬಿಟ್ಟರೆ ಬೇರೆ ಯಾವುದೇ ಚಟುವಟಿಕೆಯೂ ಇರಲಿಲ್ಲ.

ರಾಜ್ಯ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಬಾರಿಯ ಸಚಿವ ಸಂಪುಟದಲ್ಲಿ ಇಲ್ಲಿನ ಶಾಸಕ ಎಸ್‌.ಅಂಗಾರ ಅವರಿಗೆ ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ಕೈತಪ್ಪಿದೆ. ಇದರಿಂದ ಅಂಗಾರರು ಹಾಗೂ ಇಲ್ಲಿನ ಬಿಜೆಪಿ ಕಾರ್ಯಕರ್ತರಿಗೆ ನೋವು ಹಾಗೂ ಅಸಮಾಧಾನ ಉಂಟಾಗಿದೆ. ತುರ್ತು ಸಭೆ ಸೇರಿದ ಮಂಡಲ ಸಮಿತಿ ಪಕ್ಷದ ಜಿಲ್ಲಾ ಮತ್ತು ರಾಜ್ಯ ಘಟಕದೊಂದಿಗೆ ಅಸಹಕಾರ ಚಳವಳಿ ಘೋಷಿಸಿದೆ. ಪರಿಣಾಮ ಇದುವರೆಗೆ ಮುನ್ನೂರಕ್ಕೂ ಅಧಿಕ ಮಂದಿ ಮಂಡಲ ಸಮಿತಿ ಅಧ್ಯಕ್ಷರಿಗೆ ರಾಜಿನಾಮೆ ಸಲ್ಲಿಸಿದ್ದಾರೆ. ಒಂದು ರೀತಿಯಲ್ಲಿ ಪಕ್ಷದ ಚಟುವಟಿಕೆಗಳು ತಟಸ್ಥಗೊಂಡಂತಿದೆ. ಸಾರ್ವಜನಿಕ ಕಾರ್ಯಕ್ರಮಗಳೂ ಜನಪ್ರತಿಗಳ ಭಾಗವಹಿಸುವಿಕೆ ವಿರಳವಾಗಿದೆ.

ಈ ಎಲ್ಲ ಹಿನ್ನೆಲೆಯಲ್ಲಿ ಸುಳ್ಯದ ಬಿಜೆಪಿ ಕಾರ‍್ಯಕರ್ತರಲ್ಲಿ ಸಂಕಟ ಮರೆಯಾಗದೆ ಸುಮ್ಮನೆ ಕುಳಿತಿದ್ದಾರೆ. ಹಾಗೆಂದು ಕಟೀಲ್‌ ರಾಜ್ಯಾಧ್ಯಕ್ಷರಾಗಿರುವುದಕ್ಕೆ ಇಲ್ಲಿನವರಿಗೆ ಸಂತೋಷವಿದೆ. ಆದರೆ ಅದಕ್ಕಿಂತಲೂ ಹೆಚ್ಚು ಅಂಗಾರರು ಮಂತ್ರಿಯಾಗದಿರುವುದಕ್ಕೆ ಸಂಕಟವಿದೆ. ಹೀಗಾಗಿ ಸಂತೋಷದ ದಿನ ಇಲ್ಲಿನ ಬಿಜೆಪಿ ಪಾಲಿಗೆ ನಿರ್ಲಿಪ್ತವಾಗಿತ್ತು. ಅನೇಕ ಕ್ರಿಯಾಶೀಲ ಮುಖಂಡರು ಹಾಗೂ ಕಾರ್ಯಕರ್ತರು ಟಿವಿ ನೋಡಿ ಪದಗ್ರಹಣ ದೃಶ್ಯವನ್ನು ಕಣ್ತುಂಬಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿದ್ದರು.