ಸುಳ್ಯ [ಆ.28]: ಬೆಂಗಳೂರಿನಲ್ಲಿ ನಡೆದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರ ಪದಗ್ರಹಣ ಸಮಾರಂಭದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಹಲವು ಮುಖಂಡರು ಭಾಗವಹಿಸಿದ್ದು ಕಾರ‍್ಯಕರ್ತರ ತರಾಟೆಗೆ ಕಾರಣವಾಯಿತು.

ಶಾಸಕ ಅಂಗಾರರಿಗೆ ಸಚಿವ ಪದವಿ ದೊರೆಯದ ಹಿನ್ನೆಲೆಯಲ್ಲಿ, ಸಚಿವ ಪದವಿ ಅಥವಾ ಸ್ಪಷ್ಟಭರವಸೆ ದೊರೆಯುವವರೆಗೆ ಜಿಲ್ಲಾ ಹಾಗೂ ರಾಜ್ಯ ಘಟಕದೊಂದಿಗೆ ಅಸಹಕಾರ ಚಳವಳಿ ನಡೆಸುವುದಾಗಿ ಸುಳ್ಯ ಮಂಡಲ ಬಿಜೆಪಿ ಹೇಳಿತ್ತು. ಅದರಂತೆ 300ಕ್ಕೂ ಅಧಿಕ ಮಂದಿ ರಾಜಿನಾಮೆ ನೀಡಿ ತಟಸ್ಥರಾಗಿದ್ದರು. 

ರಾಜ್ಯ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಂತ್ರಿ ಸ್ಥಾನ ದೊರೆಯುವ ಖಚಿತತೆ ಕುರಿತಂತೆ ಮಹತ್ವದ ಬೆಳವಣಿಗೆ ನಡೆದ ಮಾಹಿತಿ ಇಲ್ಲ. ಈ ಮಧ್ಯೆಯೂ ಬಿಜೆಪಿಯ ಹಲವು ಮುಖಂಡರು ರಾಜ್ಯ ಘಟಕದ ಈ ಸಮಾರಂಭದಲ್ಲಿ ಭಾಗಿಯಾಗುತ್ತಿರುವುದು ಕಾರ್ಯಕರ್ತರ ನಡುವೆ ತೀವ್ರ ಚರ್ಚೆಗೆ ವಸ್ತುವಾಗಿದ್ದು, ಸಾಮಾಜಿಕ ಜಾಲತಾಣದಲ್ಲೂ ಟೀಕೆಗೆ ಒಳಗಾಗುತ್ತಿದೆ. ಭಾಗವಹಿಸಿದ ನಾಯಕರ ಫೋಟೋಗಳನ್ನೂ ಶೇರ್‌ ಮಾಡಿಕೊಳ್ಳುತ್ತಿದ್ದಾರೆ.

ಬಿಜೆಪಿ ಎತ್ತ ಸಾಗುತ್ತಿದೆ ಎಂದು ಬಿಜೆಪಿ ಕಾರ‍್ಯಕರ್ತರೇ ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುತ್ತಿದ್ದಾರೆ. ಅಸಹಕಾರ ಚಳವಳಿ ಎಂಬ ಪ್ರಹಸನ ಅಂತ್ಯವಾಯಿತೇ ಎಂದು ಅರಂತೋಡಿನ ಕಾರ‍್ಯಕರ್ತರೊಬ್ಬರು ವ್ಯಂಗ್ಯವಾಡಿದ್ದಾರೆ. ಅಂಗಾರರಿಗೆ ಮಂತ್ರಿ ಸ್ಥಾನ ದೊರೆಯದ ನೋವಿಗಿಂತಲೂ ಹತ್ತು ಪಟ್ಟು ನೋವು ಇಂದು ಆಗಿರಬಹುದು ಎಂದು ಮತ್ತೊಬ್ಬರು ಹೇಳಿದ್ದಾರೆ.