Udupi: ನ್ಯಾಯ ಕೊಡಿಸುವವರಿಗೇ ಎದುರಾದ ಸಂಕಷ್ಟ: 3 ತಿಂಗಳಿಂದ ತಾಯಿ ನಾಪತ್ತೆ
ಸರ್ಕಾರಿ ಅಭಿಯೋಜಕರ ತಾಯಿ ಮೂರು ತಿಂಗಳ ಹಿಂದೆ ಕಣ್ಮರೆ
ಪತ್ತೆಯಾಗದ ತಾಯಿಯನ್ನು ನೆನೆದು ದುಃಖಿಸುತ್ತಿರುವ ಜಯರಾಮ ಶೆಟ್ಟಿ
ಇತ್ತೀಚೆಗೆ ತಾಯಿಗೆ ಮರೆವಿನ ಕಾಯಿಲೆ ಉಲ್ಬಣ ಆಗಿತ್ತು.
ಉಡುಪಿ (ಫೆ.08): ನ್ಯಾಯಾಂಗ ವ್ಯವಸ್ಥೆಯಲ್ಲಿ ಅವರದ್ದು ಉನ್ನತ ಹುದ್ದೆ. ಸರ್ಕಾರಿ ಅಭಿಯೋಜಕರಾಗಿ ಅನೇಕ ಮಂದಿ ತುಳಿತಕ್ಕೊಳ್ಳಗಾದವರಿಗೆ ನ್ಯಾಯ ಒದಗಿಸಿಕೊಟ್ಟಿದ್ದಾರೆ. ಈಗ ಸ್ವತಃ ತಾನೇ ಸಂಕಷ್ಟದಲ್ಲಿರುವಾಗ ಯಾರ ನೆರವೂ ಸಿಗದೆ ಅನಾಥಪ್ರಜ್ಞೆ ಅನುಭವಿಸುತ್ತಿದ್ದಾರೆ. ಇಷ್ಟಕ್ಕೂ ಉಡುಪಿ ಜಿಲ್ಲಾ ನ್ಯಾಯಾಲಯದ ಪಬ್ಲಿಕ್ ಪ್ರಾಸಿಕ್ಯೂಟರ್ ಅವರ ಮನದಾಳದ ನೋವಿಗೆ ಕಾರಣವೇನು ಗೊತ್ತಾ?
ನನ್ನ ಪ್ರೀತಿಯ ತಾಯಿ ಕಾಣೆಯಾಗಿ ಮೂರು ತಿಂಗಳಾಗುತ್ತಾ ಬಂದರೂ, ತಾಯಿ ಮಾತ್ರ ಪತ್ತೆಯಾಗಿಲ್ಲ. ಮನೆಯಲ್ಲಿ ಕುಟುಂಬ ಸದಸ್ಯರು ಹೊರದ ಹರಕೆಗಳಿಲ್ಲ, ಹೋಗದ ದೇವಸ್ಥಾನ ಇಲ್ಲ. ಆದರೆ ತಾಯಿಯ ಸುಳಿವೇ ಸಿಕ್ಕಿಲ್ಲ ಎನ್ನುತ್ತಾ ಸರ್ಕಾರಿ ಅಭಿಯೋಜಕರ (Public Procicuter) ಕಣ್ಣಂಚು ತೇವಗೊಂಡಿತ್ತು. ಹೌದು, ಉಡುಪಿ ಜಿಲ್ಲಾ ನ್ಯಾಯಾಲಯದ ಸರ್ಕಾರಿ ಅಭಿಯೋಜಕ ಜಯರಾಮ್ ಶೆಟ್ಟಿಯವರ ತಾಯಿ ವನಜಾ ಶೆಡ್ತಿಯವರು ನಾಪತ್ತೆಯಾಗಿ ಮೂರು ತಿಂಗಳಾಯಿತು. ಪೋಲಿಸರು ಇವರನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದು, ಸರಕಾರಿ ಅಭಿಯೋಜಕರ ತಾಯಿಯನ್ನು ಪತ್ತೆಹಚ್ಚಲು ಸಾಧ್ಯವಾಗದ ಇಲಾಖೆಯನ್ನು ಸಾರ್ವಜನಿಕರು ಅಚ್ಚರಿಯಿಂದ ನೋಡುವಂತಾಗಿದೆ.
ಉಡುಪಿಯಲ್ಲಿ ಫೆ.11ರಿಂದ ಯಕ್ಷಗಾನ ಸಮ್ಮೇಳನ ಆರಂಭ: ಡಾ. ಎಂ.ಪ್ರಭಾಕರ ಜೋಷಿ ಸಮ್ಮೇಳನಾಧ್ಯಕ್ಷ
ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದ ತಾಯಿ ನಾಪತ್ತೆ: ವನಜಾ ಶೆಡ್ತಿಯವರು ಜಯರಾಂ ಶೆಟ್ಟಿಯವರ ತಮ್ಮನ ಮನೆಯಾದ ಬ್ರಹ್ಮಾವರದ ವಾರಂಬಳ್ಳಿಯಲ್ಲಿ ವಾಸವಿದ್ದರು. 2022 ರ ನ.14 ರಂದು ಮುಂಜಾನೆ ಮನೆಯಲ್ಲಿ ಎಲ್ಲೂ ಕಾಣಿಸದೇ ಇದ್ದಾಗ, ಜಯರಾಂ ಶೆಟ್ಟಿ ಮತ್ತು ಸಹೋದರರು ತಾಯಿಯನ್ನು ಹುಡುಕಿದ್ದಾರೆ. ನಂತರ ಬ್ರಹ್ಮಾವರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದು, ಪೋಲಿಸರು ಹುಡುಕಾಟ ನಡೆಸಿದರೂ, ವನಜಾ ಶೆಡ್ತಿಯವರು ಪತ್ತೆಯಾಗಿಲ್ಲ. ಆದರೆ ಮುಖ್ಯವಾಗಿ ವನಜಾ ಶೆಡ್ತಿಯವರು ಕಳೆದ ಒಂದು ವರ್ಷದಿಂದ ಮರೆವಿನ ಖಾಯಿಲೆಯಿಂದ ಬಳಲುತ್ತಿದ್ದು, ಒಬ್ಬರೇ ಎಲ್ಲಿಗೂ ಹೋಗುತ್ತಿರಲಿಲ್ಲ. ಒಬ್ಬರೇ ಎಲ್ಲಿಗೆ ಹೋದರು ವಾಪಾಸು ಬಾರಲು ಅವರಿಗೆ ತಿಳಿಯುವುದಿಲ್ಲ ಎಂಬ ಕಾರಣಕ್ಕೆ ಮನೆಯಿಂದ ಹೊರಗೆ ಅವರೊಬ್ಬರನ್ನೇ ಕಳುಹಿಸುತ್ತಿರಲಿಲ್ಲ ಎಂದು ಮನೆಯವರು ತಿಳಿಸಿದ್ದಾರೆ.
ಈವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ: ಬ್ರಹ್ಮಾವರದ ವಾರಂಬಳ್ಳಿಯ ಮನೆಯಿಂದ ಅನತಿ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ ಇದ್ದು, ನಾಲ್ಕು ರಸ್ತೆಗಳು ವಿಭಜಿಸುತ್ತವೆ. ಬಾರ್ಕೂರು, ಉಡುಪಿ, ಕುಂದಾಪುರ ಕಡೆಗೆ ರಸ್ತೆಗಳು ವಿಭಜಿಸುವ ಜಂಕ್ಷನ್ ಇದಾಗಿದ್ದು, ಸಿಸಿಟಿವಿ ಇಲ್ಲದಿರುವುದರಿಂದಾಗಿ ವನಜಾ ಶೆಡ್ತಿಯವರು ಎಷ್ಟು ಗಂಟೆಗೆ, ಯಾವ ಕಡೆಗೆ ತೆರಳಿದ್ದಾರೆ ಎಂಬುದರ ಸುಳಿವೇ ಸಿಕ್ಕಿಲ್ಲ. ತಾಯಿಯನ್ನು ಹುಡುಕಲು ನಾನು, ಸಹೋದರರು ಮತ್ತು ಸಂಬಂಧಿಕರು ಎಲ್ಲಾ ಪ್ರಯತ್ನವನ್ನು ನಡೆಸಿದ್ದು, ಈವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯವರನ್ನು 2 ಬಾರಿ ಮುಖತಃ ಭೇಟಿ ಮಾಡಿ ತಾಯಿಯನ್ನು ಪತ್ತೆಹಚ್ಚಿ ಕೊಡುವಂತೆ ಮನವಿ ಮಾಡಿದ್ದೇನೆ. ಆದರೂ ಇದುವರೆಗೆ ನನ್ನ ತಾಯಿ ಪತ್ತೆಯಾಗಿಲ್ಲ ಎಂದು ಜಯರಾಮ್ ಶೆಟ್ಟಿ ನೊಂದು ಅಳಲು ತೋಡಿಕೊಂಡಿದ್ದಾರೆ.
ಅಪಘಾತ ಮಾಡಿದ್ದವನಿಗೆ ಎರಡು ವರ್ಷದ ನಂತರ ಶಿಕ್ಷೆ: 4 ತಿಂಗಳು ಜೈಲುವಾಸ
ಸಾಮಾಜಿಕ ಜಾಲತಾಣದಲ್ಲಿ ಪ್ರಯತ್ನ ನಡೆದಿತ್ತು: ತಾಯಿಯವರು ಕಾಣೆಯಾಗಿದ್ದು, ಮಾಹಿತಿ ದೊರಕಿದವರು ದಯವಿಟ್ಟು ತಿಳಿಸಿ ಎಂದು ಸರಕಾರಿ ಅಭಿಯೋಜಕ ಜಯರಾಂ ಶೆಟ್ಟಿಯವರ ಪರವಾಗಿ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಗಳನ್ನು ಹಂಚಿಕೊಂಡಿದ್ದರು. ಈಗ ಸಾರ್ವಜನಿಕರಿಗೆ ನನ್ನ ತಾಯಿಯ ಬಗ್ಗೆ ಯಾವುದೇ ಮಾಹಿತಿ ದೊರಕಿದಲ್ಲಿ ದಯವಿಟ್ಟು 8310013257 ಈ ಸಂಖ್ಯೆಗೆ ಕರೆಮಾಡಿ ಮಾಹಿತಿ ನೀಡಿ ಎಂದು ಮನವಿ ಮಾಡಿದ್ದಾರೆ.