ಕಾಫಿನಾಡಲ್ಲಿ ಯಶಸ್ವಿ ಕೋಟಿ ಕಂಠ ಗಾಯನ: ಸಿ.ಟಿ.ರವಿ ಸಕತ್ ಡ್ಯಾನ್ಸ್
- ಜಿಲ್ಲೆಯಲ್ಲಿ ಏಕ ಕಾಲಕ್ಕೆ ಹಾಡಿದ 4 ಲಕ್ಷ ಮಂದಿ
- ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಹಾಡಿಗೆ ಡ್ಯಾನ್ಸ್ ಮಾಡಿದ ಶಾಸಕ ಸಿ.ಟಿ.ರವಿ
ಚಿಕ್ಕಮಗಳೂರು (ಅ.29) : ರಾಜ್ಯ ಸರ್ಕಾರದ ವಿನೂತನ ಕಾರ್ಯಕ್ರಮ ಕೋಟಿ ಕಂಠ ಗಾಯನ ಕಾಫಿ ನಾಡಿನಲ್ಲಿ ಶುಕ್ರವಾರ ಯಶಸ್ವಿಯಾಗಿ ನಡೆಯಿತು. ಜಿಲ್ಲೆಯ 6 ಪ್ರಮುಖ ಸಾರ್ವಜನಿಕ ಸ್ಥಳಗಳು, ಶಾಲೆ, ಕಾಲೇಜು, ಖಾಸಗಿ ಸಂಸ್ಥೆಗಳಲ್ಲಿ ಸುಮಾರು 4 ಲಕ್ಷ ಮಂದಿ ಏಕಕಾಲದಲ್ಲಿ 6 ಹಾಡುಗಳನ್ನು ಹಾಡಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಗಾಯನ ಕಾರ್ಯಕ್ರಮ ಆರಂಭವಾಗಿ 11.30ಕ್ಕೆ ಮುಕ್ತಾಯಗೊಂಡಿತು.
ಕೋಟಿ ಕಂಠ ಗಾಯನಕ್ಕೆ ನಾಳೆ ಚಾಲನೆ: 1 ಕೋಟಿ ಮಂದಿ ನೋಂದಣಿ
ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಗೀತ ಗಾಯನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಶಾಸಕ ಸಿ.ಟಿ. ರವಿ, ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ವೆಂಕಟೇಶ್, ನಗರಸಭಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು ಸೇರಿ 10 ಸಾವಿರ ಜನರು ಭಾಗವಹಿಸಿದ್ದರು. ಕುವೆಂಪು ವಿರಚಿತ ನಾಡಗೀತೆ ಜಯ ಭಾರತ ಜನನಿಯ ತನುಜಾತೆ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಗಿ ಹಂಸಲೇಖಾ ರಚಿತ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಗೀತೆಯೊಂದಿಗೆ ಮುಕ್ತಾಯಗೊಂಡಿತು. ಕೊನೆಯ ಹಾಡಿಗೆ ಶಾಸಕ ಸಿ.ಟಿ.ರವಿ ಹಾಗೂ ನೆರೆದಿದ್ದ ಇತರೆ ಜನಪ್ರತಿನಿಧಿಗಳು ಹೆಜ್ಜೆ ಹಾಕಿದರು. ಸೋಷಿಯಲ್ ಮೀಡಿಯಾದಲ್ಲಿ ಖ್ಯಾತಿಯಾಗಿರುವ ಕಾಫಿ ನಾಡು ಚಂದು ಕೂಡ ಡ್ಯಾನ್ಸ್ ಮಾಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮಾತನಾಡಿ, ನನ್ನ ಕ್ಷೇತ್ರದಲ್ಲೂ ಕೋಟಿಕಂಠ ಗಾಯನ ಕಾರ್ಯಕ್ರಮವಿದ್ದರೂ ಚಿಕ್ಕಮಗಳೂರಿನ ಬಗ್ಗೆ ವಿಶೇಷ ಕಾಳಜಿ ವಹಿಸಿ ಎರಡೂ ಕಾರ್ಯಕ್ರಮಕ್ಕೆ ಕೈ ಜೋಡಿದ್ದೇನೆ. ಗಾಯನದಲ್ಲಿ ಪಾಲ್ಗೊಂಡಿರುವ ಎಲ್ಲಾ ವಿದ್ಯಾರ್ಥಿಗಳು, ನಾಗರಿಕರಿಗೆ ಸರ್ಕಾರದ ಪರವಾಗಿ ಧನ್ಯವಾದ ಹೇಳಿದರು.
ಸಾಮಾನ್ಯ ಸಂಗತಿಯಲ್ಲ:
ಶಾಸಕ ಸಿ.ಟಿ.ರವಿ ಮಾತನಾಡಿ, ಕೋಟಿಕಂಠ ಗಾಯನ ಕನ್ನಡಿಗರನ್ನು ಭಾರತೀಯತೆಗೆ ಜೋಡಿಸಿದೆ. ಸ್ವಾತಂತ್ರೋತ್ಸವ ಅಮೃತ ಮಹೋತ್ಸವದ ಸಂದರ್ಭ ರಾಜ್ಯ ಸರ್ಕಾರ ತಾಯಿ ಭಾರತಿಗೆ ಅಮೃತದಾರತಿ ಎಂದು ಆಯೋಜಿಸಿ, ಕನ್ನಡಿಗರೆಲ್ಲರನ್ನು ಒಗ್ಗೂಡಿಸಿ ಕನ್ನಡದ ಜನಪ್ರಿಯ ಗೀತೆಗಳನ್ನು ನಮ್ಮೆಲ್ಲರ ಕಂಠದಲ್ಲಿ ಹಾಡಿಸಿ ಕೋಟಿ ಕಂಠಗಳನ್ನು ಜೋಡಿಸುವುದು ಸಾಮಾನ್ಯ ಸಂಗತಿಯಲ್ಲ. ಕೋಟಿ ಕಂಠಗಳ ಮೂಲಕ ಕನ್ನಡ ಕಟ್ಟುವ ಕೆಲಸ ಮಾಡಿದ ಸಿಎಂ ಹಾಗೂ ಸಚಿವ ಸುನೀಲ್ ಕುಮಾರ್‌ಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆಂದರು.
ಜನತೆಗೆ ಕೃತಜ್ಞತೆ:
ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾತನಾಡಿ, ಕೋಟಿ ಕಂಠ ಗಾಯನದಲ್ಲಿ ವಿಶೇಷವಾಗಿ ಶಾಲಾ ಮಕ್ಕಳು, ಶಿಕ್ಷಕರು, ಪೋಷಕರು ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ ಎಂದರು.
ರಾಜ್ಯದ 10 ಸಾವಿರ ಸ್ಥಳಗಳಲ್ಲಿ 1.15 ಕೋಟಿ ಜನರಿಂದ ಕೋಟಿಕಂಠ ಗಾಯನ ನಡೆಯುತ್ತಿದ್ದು, ಕಾಫಿ ನಾಡಿನ ಮನೆ, ಶಾಲೆಗಳು, ತಾಲೂಕು ಕಚೇರಿ, ಶೃಂಗೇರಿ ಶಾರದಾಂಬೆ ದೇವಾಲಯ, ಎಐಟಿ, ಅಮೃತಾಪುರ ಸೇರಿ ಜಿಲ್ಲೆಯಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನ ಕೋಟಿ ಕಂಠ ಗಾಯನಕ್ಕೆ ಧ್ವನಿಯಾಗಿದ್ದಾರೆ. ಕನ್ನಡ ಭಾಷೆ ಮೇಲಿರುವ ಅಭಿಮಾನ, ಕನ್ನಡ ನಾಡು ಮತ್ತು ಭಾರತ ಮಾತೆಗೆ ಸಲ್ಲಿಸಬೇಕಾದ ಗೌರವ ಸಲ್ಲಿಸಿದ ಜನತೆಗೆ ಕೃತಜ್ಞತೆ ಎಂದರು.
ಪ್ರಮುಖ ಸ್ಥಳಗಳಲ್ಲಿ ಕೋಟಿ ಕಂಠ ಗಾಯನ ಆಯೋಜಿಸಿ; ವೈಶಾಲಿ
ಕಾರ್ಯಕ್ರಮದಲ್ಲಿ ಸಿಡಿಎ ಅಧ್ಯಕ್ಷ ಸಿ. ಆನಂದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಜಿಪಂ ಸಿಇಒ ಜಿ. ಪ್ರಭು, ಎಡಿಸಿ ಬಿ.ಆರ್.ರೂಪಾ, ತಹಸೀಲ್ದಾರ್ ವಿನಾಯಕ್ ಸಾಗರ್, ಬಿಇಓ ಎಸ್.ಆರ್. ಮಂಜುನಾಥ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ತಾರಾನಾಥ್, ಜಿಲ್ಲಾ ಕ್ರೀಡಾಧಿಕಾರಿ ಮಂಜುಳಾ ಹುಲ್ಲಳ್ಳಿ, ಡಾ.ರಮೇಶ್, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಟಿ. ರಾಜಶೇಖರ್, ಎಚ್.ಡಿ. ತಮ್ಮಯ್ಯ, ಭಾಜಪ ಜಿಲ್ಲಾಧ್ಯಕ್ಷ ಎಚ್.ಸಿ. ಕಲ್ಮರುಡಪ್ಪ ಇದ್ದರು.