ಶಿವಾಜಿ ಮಹಾರಾಜ್ ಪ್ರತಿಮೆ ತೆರವು ವಿವಾದ: ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಬಾಗಲಕೋಟೆ ಬಂದ್ ಯಶಸ್ವಿ
ಶಿವಾಜಿ ಮೂರ್ತಿ ತೆರವು ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ನೀತಿ ವಿರೋಧಿಸಿ ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿಗರು ಕರೆ ನೀಡಿದ್ದ ಬಾಗಲಕೋಟೆ ಬಂದ್ ಕರೆ ಯಶಸ್ವಿಗೊಂಡಿತು.

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ (ಆ.19): ಶಿವಾಜಿ ಮೂರ್ತಿ ತೆರವು ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ನೀತಿ ವಿರೋಧಿಸಿ ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿಗರು ಕರೆ ನೀಡಿದ್ದ ಬಾಗಲಕೋಟೆ ಬಂದ್ ಕರೆ ಯಶಸ್ವಿಗೊಂಡಿತು. ಬಂದ್ ಹಿನ್ನೆಲೆಯಲ್ಲಿ ಬೆಳಗಿನಿಂದಲೇ ಎಲ್ಲ ಅಂಗಡಿ ಮುಂಗ್ಗಟ್ಟುಗಳು ಬಂದ್ ಆಗಿದ್ದು, ವ್ಯಾಪಾರ ವಹಿವಾಟ ಸ್ಥಗಿತಗೊಂಡಿತ್ತು. ಈ ಮಧ್ಯೆ ಪ್ರತಿಭಟನಾ ಮೆರವಣಿಗೆ ನಡೆಸಿರೋ ಹಿಂದೂಪರ ಸಂಘಟನೆಗಳು ಶಿವಾಜಿ ಮೂರ್ತಿ ಮರು ಸ್ಥಾಪನೆಗಾಗಿ ಜಿಲ್ಲಾಡಳಿತಕ್ಕೆ ಡೆಡ್ಲೈನ್ ನೀಡಿದ್ದು, ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಈ ಕುರಿತ ವರದಿ ಇಲ್ಲಿದೆ.
ಅಂದಹಾಗೆ, ನಗರದಾದ್ಯಂತ ಎಲ್ಲಿ ನೋಡಿದ್ರೂ ಅಲ್ಲಿ ಒಂದೆಡೆ ಮುಚ್ಚಿದ ಅಂಗಡಿ ಮುಂಗಟ್ಟುಗಳು, ಮತ್ತೊಂದೆಡೆ ಬಿಕೋ ಎನ್ನುತ್ತಿರೋ ರಸ್ತೆಗಳು, ಇವುಗಳ ಮಧ್ಯೆ ಬೀದಿಗಿಳಿದು ಶಿವಾಜಿ ಪರ ಘೋಷಣೆ ಮೊಳಗಿಸುತ್ತಾ ನಗರದಾದ್ಯಂತ ಮೆರವಣಿಗೆ ನಡೆಸಿದ ಹಿಂದೂಪರ ಸಂಘಟನೆಗಳು. ಹೌದು ಇಂತಹವೊಂದು ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ನಗರದಲ್ಲಿ. ಬಾಗಲಕೋಟೆ ಜಿಲ್ಲಾಡಳಿತದಿಂದ ಶಿವಾಜಿ ಮೂರ್ತಿ ತೆರವು ಮಾಡಿದ ದಿನದಿಂದ ಆರಂಭವಾಗಿರೋ ಹಿಂದೂಪರ ಸಂಘಟನೆಗಳ ಹೋರಾಟದ ಹಿನ್ನೆಲೆಯಲ್ಲಿ ಇಂದು ಬಾಗಲಕೋಟೆ ಬಂದ್ ಗೆ ಕರೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಬೆಳಗಿನಿಂದಲೇ ಬಹುತೇಕ ಅಂಗಡಿ ಮುಂಗಟ್ಟುಗಳೆಲ್ಲ ಬಂದ್ ಆಗಿದ್ದವು, ವ್ಯಾಪಾರ ವಹಿವಾಟುಗಳೆಲ್ಲಾ ಸ್ಥಗಿತಗೊಂಡಿದ್ದವು.
ಸ್ಟಾಲಿನ್-ಡಿಕೆಶಿ ಒಳಒಪ್ಪಂದದಿಂದ ತಮಿಳುನಾಡಿಗೆ ನೀರು: ಅಶ್ವಥ್ ನಾರಾಯಣ್ ಆರೋಪ
ಬೆಳಿಗ್ಗೆ 11 ಗಂಟೆ ಸುಮಾರಿಗೆ ನಗರದ ಬಸವೇಶ್ವರ ವೃತ್ತದ ಬಳಿ ಜಮಾಯಿಸಿದ ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ಮುಖಂಡರು ಪ್ರತಿಭಟನಾ ಮೆರವಣಿಗೆಯನ್ನ ಆರಂಭಿಸಿದ್ರು, ಹಿಂದೂಪರ ಸಂಘಟನೆಗಳ ಮುಖಂಡರು ಸೇರಿದಂತೆ ಬಿಜೆಪಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾಜಿ ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ದಾರಿಯುದ್ದಕ್ಕೂ ಶಿವಾಜಿ ಪರ ಘೋಷಣೆಗಳನ್ನ ಕೂಗುತ್ತಾ ಬೃಹತ್ ಪ್ರತಿಭಟನಾ ಯಾತ್ರೆಯನ್ನ ನಡೆಸಲಾಯಿತು. ಅಂತಿಮವಾಗಿ ಬಸವೇಶ್ವರ ವೃತ್ತದ ಬಳಿ ಹಿಂದೂ ಜಾಗರಣ ವೇದಿಕೆ ,ಉತ್ತರ ಪ್ರಾಂತ ಸಹ ಸಂಚಾಲಕ ಶ್ರೀಕಾಂತ ಹೊಸಕೇರಿ ನೇತೃತ್ವದಲ್ಲಿ ಬೃಹತ್ ಬಹಿರಂಗ ಸಮಾವೇಶವನ್ನ ನಡೆಸಲಾಯಿತು.
ಹಿಂದೂಪರ ಸಂಘಟನೆಗಳಿಂದ ಡೆಡ್ ಲೈನ್: ನಗರದಲ್ಲಿ ಇಂದು ಬಂದ್ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಬಹುತೇಕವಾಗಿ ನಗರದಾದ್ಯಂತ ಹೆಚ್ಚುವರಿ ಪೋಲಿಸ ಭದ್ರತೆಯೊಂದಿಗೆ ಕಟ್ಟೆಚ್ಚರ ವಹಿಸಲಾಗಿತ್ತು. ಅತ್ತ ಬೃಹತ್ ಪ್ರತಿಭಟನಾ ಮೆರವಣಿಗೆ ಮುಗಿದು ಬಸವೇಶ್ವರ ವೃತ್ತಕ್ಕೆ ಆಗಮಿಸಿದಾಗ ಬಹಿರಂಗ ಸಮಾವೇಶ ಆರಂಭಗೊಂಡಿತು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಹಿಂದೂಗಳ ಆರಾಧ್ಯ ದೈವ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯನ್ನ ಜಿಲ್ಲಾಡಳಿತ ಏಕಾಏಕಿ ತೆರವುಗೊಳಿಸಿದ್ದನ್ನ ಖಂಡಿಸುತ್ತೇವೆ, ಈ ಕೂಡಲೇ ಜಿಲ್ಲಾಡಳಿತ ತೆರವುಗೊಳಿಸಿದ ಮೂರ್ತಿಯನ್ನ ತಕ್ಷಣ ಆ ಸ್ಥಳಕ್ಕೆ ತಂದು ಮರಳಿ ಪ್ರತಿಷ್ಠಾಪಿಸಬೇಕು, ಈ ಸಂಭಂದ ಅಗಸ್ಟ 25ರವರೆಗೆ ಗಡುವು ನೀಡಲಾಗುವುದು. ಒಂದೊಮ್ಮೆ ಅಷ್ಟರೊಳಗೆ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಮಾಡದೇ ಹೋದರೆ ಹಿಂದೂ ಪ್ರಮುಖ ಜಗದೀಶ ಕಾರಂತ ಜಿ ಅವರನ್ನ ಕರೆತಂದು ಉಗ್ರ ಹೋರಾಟಕ್ಕೆ ಮುಂದಾಗಲಾಗುವುದು ಎಂದು ಹಿಂದೂ ಜಾಗರಣ ವೇದಿಕೆ ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ಕಮಿಷನ್ ಆರೋಪ ಮಾಡಿದ ಗುತ್ತಿಗೆದಾರರಿಗೆ ಸರ್ಕಾರದಿಂದ ಬೆದರಿಕೆ: ಪ್ರಲ್ಹಾದ್ ಜೋಶಿ
ಮುಚ್ಚಿದ ಅಂಗಡಿ ಮುಂಗಟ್ಟುಗಳು: ಬಾಗಲಕೋಟೆ ಬಂದ್ ಕರೆ ಹಿನ್ನೆಲೆಯಲ್ಲಿ ಬೆಳಗಿನಿಂದಲೇ ಬಹುತೇಕ ಅಂಗಡಿ ಮುಂಗಟ್ಟುಗಳೆಲ್ಲ ಬಂದ್ ಆಗಿದ್ದು ಕಂಡು ಬಂದು, ವ್ಯಾಪಾರ ವಹಿವಾಟು ಸಂಪೂರ್ಣ ನಿಂತು ಹೋಗಿತ್ತು. ಇನ್ನು ನಿತ್ಯ ಜನಜಂಗುಳಿಯಿಂದ ಕೂಡಿರುತ್ತಿದ್ದ ರಸ್ತೆಗಳೆಲ್ಲಾ ಬಿಕೋ ಎನ್ನುತ್ತಿದ್ದವು. ಒಟ್ಟಿನಲ್ಲಿ ಬಾಗಲಕೋಟೆಯಲ್ಲಿ ಶಿವಾಜಿ ಮೂರ್ತಿ ತೆರವುಗೊಳಿಸಿರುವ ಹಿನ್ನೆಲೆಯಲ್ಲಿ ಹಿಂದೂಪರ ಸಂಘಟನೆಗಳು ಮತ್ತು ಬಿಜೆಪಿ ಜಿಲ್ಲಾ ಘಟಕ ಇಂದು ಕರೆ ನೀಡಿದ್ದ ಬಂದ್ ಕರೆ ಯಶಸ್ವಿಯಾಗಿದ್ದು, ಇದೀಗ ಮರಳಿ ಶಿವಾಜಿ ಮೂರ್ತಿ ಪ್ರತಿಷ್ಠಾಪನೆಗಾಗಿ ಅಗಸ್ಟ್ 25ರ ಗಡುವು ನೀಡಿವೆ. ಇಷ್ಟಕ್ಕೂ ಬಾಗಲಕೋಟೆ ಜಿಲ್ಲಾಡಳಿತ ಇನ್ಮುಂದೆ ಯಾವ ನಿರ್ಧಾರ ತಳೆಯುತ್ತೇ ಅಂತ ಕಾದು ನೋಡಬೇಕಿದೆ.