ಉಪನಗರ ರೈಲು ಯೋಜನೆಯ ವ್ಯಾಪ್ತಿಯಲ್ಲಿ ಭೂಸ್ವಾಧೀನಕ್ಕೆ ಸಂಬಂಧಪಟ್ಟಂತೆ ಇರುವ ಸಣ್ಣಪುಟ್ಟ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಬೇಕು: ಸಚಿವ ಎಂ.ಬಿ.ಪಾಟೀಲ್‌ 

ಬೆಂಗಳೂರು(ಜು.25):  ಬೆಂಗಳೂರಿನ ಸುತ್ತಮುತ್ತಲ ನಗರಗಳಿಗೆ ಉಪನಗರ ರೈಲು ಯೋಜನೆಯನ್ನು ವಿಸ್ತರಿಸಲು ಅನುಕೂಲವಾಗುವಂತೆ ಕಾರ್ಯಸಾಧ್ಯತಾ ವರದಿ ಕೈಗೆತ್ತಿಕೊಳ್ಳಲು ಅನುಮತಿ ನೀಡುವಂತೆ ಕೋರಿ ರೈಲ್ವೆ ಸಚಿವಾಲಯಕ್ಕೆ ಪತ್ರ ಬರೆಯಲಾಗಿದೆ ಎಂದು ಬೃಹತ್‌ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್‌ ತಿಳಿಸಿದ್ದಾರೆ.

ಉಪನಗರ ರೈಲು ಯೋಜನೆಯ ಪ್ರಗತಿ ಕುರಿತು ಸೋಮವಾರ ನಗರದಲ್ಲಿ ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತದ (ಕೆ-ರೈಡ್‌) ಉನ್ನತ ಅಧಿಕಾರಿಗಳೊಂದಿಗೆ ಅವರು ಸೋಮವಾರ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು. ರಾಜಧಾನಿಯಲ್ಲಿನ ಸಂಚಾರ ದಟ್ಟಣೆ ನಿವಾರಣೆಯ ಗುರಿಯೊಂದಿಗೆ ಕೈಗೆತ್ತಿಕೊಂಡಿರುವ ಉಪನಗರ ರೈಲು ಯೋಜನೆಯನ್ನು ಸುತ್ತಮುತ್ತಲಿನ ಮೈಸೂರು, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಮಾಗಡಿ, ಗೌರಿಬಿದನೂರು, ಬಂಗಾರಪೇಟೆಗೆ ವಿಸ್ತರಿಸಲು ಅನುಕೂಲವಾಗುವಂತೆ ಕಾರ್ಯಸಾಧ್ಯತಾ ವರದಿ ಕೈಗೆತ್ತಿಕೊಳ್ಳಲು ರೈಲ್ವೆ ಸಚಿವಾಲಯವು ಅನುಮತಿ ನೀಡಬೇಕೆಂದು ಕೋರಿ ನೈಋುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.

Bengaluru: ಸಬ್‌ಅರ್ಬನ್‌ ರೈಲಿಗೆ ಬೋಗಿ: 3 ಕಂಪನಿಗಳು ಬಿಡ್‌

ಹಂತ-1ರಲ್ಲಿ ಉಪನಗರ ರೈಲು ಯೋಜನೆ ಕಾಮಗಾರಿ (148.17 ಕಿ.ಮೀ.) ನಡೆಯುತ್ತಿದೆ. ಇದರಲ್ಲಿ ಒಟ್ಟು ನಾಲ್ಕು ಕಾರಿಡಾರ್‌ಗಳಿವೆ. ಬೆಂಗಳೂರು ನಗರ ರೈಲು ನಿಲ್ದಾಣದಿಂದ ದೇವನಹಳ್ಳಿ (41.4 ಕಿ.ಮೀ), ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣಾವರ (25.01 ಕಿ.ಮೀ), ಕೆಂಗೇರಿಯಿಂದ ವೈಟ್‌ಫೀಲ್ಡ್‌ (35.32 ಕಿ.ಮೀ) ಮತ್ತು ಹೀಳಲಿಗೆಯಿಂದ ರಾಜಾನುಕುಂಟೆವರೆಗೆ (46.25 ಕಿ.ಮೀ) ಉದ್ದವಿದೆ. ಇದನ್ನು ಎರಡನೇ ಹಂತದಲ್ಲಿ ದೇವನಹಳ್ಳಿಯಿಂದ ಕೋಲಾರ (107 ಕಿ.ಮೀ.), ಚಿಕ್ಕಬಾಣಾವರದಿಂದ ಡಾಬಸ್‌ಪೇಟೆ ಮೂಲಕ ತುಮಕೂರು (55 ಕಿ.ಮೀ), ಚಿಕ್ಕಬಾಣಾವರದಿಂದ ಮಾಗಡಿ (45 ಕಿ.ಮೀ), ಕೆಂಗೇರಿಯಿಂದ ಮೈಸೂರು (125 ಕಿ.ಮೀ), ವೈಟ್‌ಫೀಲ್ಡ್‌ನಿಂದ ಬಂಗಾರಪೇಟೆ (45 ಕಿ.ಮೀ), ಹೀಳಲಿಗೆಯಿಂದ ತಮಿಳುನಾಡಿನ ಹೊಸೂರು (23 ಕಿ.ಮೀ) ಮತ್ತು ರಾಜಾನುಕುಂಟೆಯಿಂದ ದೊಡ್ಡಬಳ್ಳಾಪುರದ ಮಾರ್ಗವಾಗಿ ಗೌರಿಬಿದನೂರಿನವರೆಗೆ (52 ಕಿ.ಮೀ) ವಿಸ್ತರಿಸಬೇಕೆಂಬ ಚಿಂತನೆ ನಡೆದಿದೆ ಎಂದರು.

ಈ ಸಂಬಂಧ ಜೂನ್‌ 6ರಂದು ಸಭೆ ನಡೆಸಲಾಗಿತ್ತು. ಕೆ-ರೈಡ್‌ ಈ ಪ್ರಸ್ತಾವನೆಗೆ ಅಂದು ತಾತ್ತ್ವಿಕ ಒಪ್ಪಿಗೆಯನ್ನೂ ನೀಡಿತ್ತು. ಹಂತ-2ಅನ್ನು 452 ಕಿ.ಮೀ.ಗಳಿಗೆ ವಿಸ್ತರಿಸಲು ಯೋಚಿಸಿದ್ದು, ಇದಕ್ಕೆ ಈಗಿನಿಂದಲೇ ಅಗತ್ಯ ಉಪಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ನಿಯಮಗಳ ಪ್ರಕಾರ ರಾಜ್ಯ ಸರ್ಕಾರದ ಸಂಸ್ಥೆಯು ಕಾರ್ಯಸಾಧ್ಯತಾ ವರದಿ ತಯಾರಿಸಲು ಸಾಧ್ಯವಿಲ್ಲ. ಇದನ್ನು ರೈಲ್ವೆ ಮಂಡಳಿಯೇ ಮಾಡಬೇಕಿದೆ ಎಂದು ತಿಳಿಸಿದರು.

ಸಭೆಯಲ್ಲಿ ಕೆ-ರೈಡ್‌ ವ್ಯವಸ್ಥಾಪಕ ನಿರ್ದೇಶಕ ಗೌರವ್‌ ಗುಪ್ತ, ಕೆ- ರೈಡ್‌ ಯೋಜನಾ ನಿರ್ದೇಶಕ ರಾಜೇಂದ್ರಕುಮಾರ್‌ ಸಿಂಗ್‌ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Bengaluru: ಸಮೂಹ ಸಾರಿಗೆ ವಿಚಾರದಲ್ಲಿ ಬೆಂಗಳೂರಿಗೆ ಪಾಠವಾಗಬೇಕು ಟೋಕಿಯೋ, ಮುಂಬೈ!

‘ಭೂವ್ಯಾಜ್ಯ ಬಗೆಹರಿಸಿಕೊಳ್ಳಿ’

ಉಪನಗರ ರೈಲು ಯೋಜನೆಯ ವ್ಯಾಪ್ತಿಯಲ್ಲಿ ಭೂಸ್ವಾಧೀನಕ್ಕೆ ಸಂಬಂಧಪಟ್ಟಂತೆ ಇರುವ ಸಣ್ಣಪುಟ್ಟ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಬೇಕು. ಈ ಯೋಜನೆಗೆ 177.22 ಎಕರೆ ಭೂಮಿ ಅಗತ್ಯವಿತ್ತು. ಈ ಪೈಕಿ ಈಗಾಗಲೇ 164 ಎಕರೆಯ ಸ್ವಾಧೀನ ಮುಗಿದಿದೆ. ಉಳಿದ 12.39 ಎಕರೆ ಭೂಮಿ ರಕ್ಷಣಾ ಇಲಾಖೆ ಮತ್ತು ಸರ್ಕಾರದ್ದಾಗಿದ್ದು ಸ್ವಲ್ಪ ಕಗ್ಗಂಟಾಗಿದೆ. ಕೆ-ರೈಡ್‌ ಅಧಿಕಾರಿಗಳು ಸಂಬಂಧಿಸಿದವರ ಜತೆ ಮಾತುಕತೆ ನಡೆಸಿ, ಇದನ್ನು ಬೇಗನೆ ಬಗೆಹರಿಸಬೇಕು. ಯೋಜನೆಯ ಭಾಗವಾಗಿ ಸೋಲದೇವನಹಳ್ಳಿ ಮತ್ತು ದೇವನಹಳ್ಳಿಯಲ್ಲಿ ಎರಡು ಡಿಪೋ ನಿರ್ಮಿಸಲಾಗುವುದು ಎಂದು ಸಚಿವ ಎಂ.ಬಿ.ಪಾಟೀಲ್‌ ತಿಳಿಸಿದರು.

ಎಲ್ಲೇಲ್ಲಿಗೆ ವಿಸ್ತರಣೆ

ಬೆಂಗಳೂರಿನಿಂದ ಮೈಸೂರು, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಮಾಗಡಿ, ಗೌರಿಬಿದನೂರು, ಬಂಗಾರಪೇಟೆ ವರೆಗೆ