Asianet Suvarna News Asianet Suvarna News

ಬೆಂಗಳೂರು ವಿವಿ ವಿದ್ಯಾರ್ಥಿನಿ ಮೇಲೆ ಹರಿದ ಬಿಎಂಟಿಸಿ ಬಸ್‌: ಸ್ಥಿತಿ ಗಂಭೀರ, ಮುಂದುವರಿದ ಪ್ರತಿಭಟನೆ

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ನಡೆದಿದ್ದ ಘಟನೆ 

Students Continuing Protest of Accident Case in Bangalore University Campus grg
Author
First Published Oct 11, 2022, 12:56 PM IST | Last Updated Oct 11, 2022, 12:56 PM IST

ಬೆಂಗಳೂರು(ಅ.11):   ಬಿಎಂಟಿಸಿ ಬಸ್‌ ಹತ್ತುವಾಗ ಏಕಾಏಕಿ ಬಸ್‌ ಮುಂದೆ ಚಲಿಸಿದ್ದರಿಂದ ಆಯತಪ್ಪಿ ರಸ್ತೆಗೆ ಬಿದ್ದ ವಿದ್ಯಾರ್ಥಿನಿ ಮೇಲೆ ಬಸ್‌ನ ಹಿಂಬದಿ ಚಕ್ರ ಹರಿದು ಆಕೆ ಗಂಭೀರವಾಗಿ ಗಾಯಗೊಂಡಿರುವ ಘಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಇಂದೂ(ಮಂಗಳವಾರ) ಕೂಡ ಪ್ರತಿಭಟನೆ ನಡೆಸುತ್ತಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ದಾಖಲಾಗಿರುವ ವಿದ್ಯಾರ್ಥಿನಿ ಶಿಲ್ಪಾಶ್ರೀ ಸ್ಥಿತಿ ಗಂಭೀರವಾಗಿದೆ ಅಂತ ತಿಳಿದು ಬಂದಿದೆ.

ಏನಿದು ಪ್ರಕರಣ?

ಬಿಎಂಟಿಸಿ ಬಸ್‌ ಹತ್ತುವಾಗ ಏಕಾಏಕಿ ಬಸ್‌ ಮುಂದೆ ಚಲಿಸಿದ್ದರಿಂದ ಆಯತಪ್ಪಿ ರಸ್ತೆಗೆ ಬಿದ್ದ ವಿದ್ಯಾರ್ಥಿನಿ ಮೇಲೆ ಬಸ್‌ನ ಹಿಂಬದಿ ಚಕ್ರ ಹರಿದು ಆಕೆ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ನಿನ್ನೆ(ಸೋಮವಾರ) ನಡೆದಿದೆ. ಕೋಲಾರ ಮೂಲದ ಶಿಲ್ಪಾಶ್ರೀ (22) ಗಾಯಗೊಂಡಿರುವ ವಿದ್ಯಾರ್ಥಿನಿ. ಸದ್ಯ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸೊಂಟದ ಬಳಿ ಗಂಭೀರವಾಗಿ ಗಾಯಗೊಂಡಿರುವುದರಿಂದ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಮರೂಪಿ ಬಿಎಂಟಿಸಿ, ಸಾವು ಬದುಕಿನ ನಡುವೆ ವಿದ್ಯಾರ್ಥಿನಿ ಹೋರಾಟ!

ಗಾಯಾಳು ಶಿಲ್ಪಾಶ್ರೀ ಬೆಂಗಳೂರು ವಿಶ್ವವಿದ್ಯಾಲಯದ ಎಂಎಸ್ಸಿ ಗಣಿತ ವಿಷಯದ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಬೆಳಗ್ಗೆ 10.30ರ ಸುಮಾರಿಗೆ ಜ್ಞಾನಭಾರತಿ ಕ್ಯಾಂಪಸ್‌ನ ಮುಖ್ಯರಸ್ತೆಯಲ್ಲಿ ಬಿಎಂಟಿಸಿ ಬಸ್‌ಗಾಗಿ ಕಾಯುತ್ತಿದ್ದರು. ಈ ವೇಳೆ ಬಸ್‌ ಬಂದಿದ್ದು, ಶಿಲ್ಪಾಶ್ರೀ ಬಸ್‌ನ ಮಧ್ಯದ ಬಾಗಿಲಿನಲ್ಲಿ ಬಸ್‌ ಏರಲು ಮುಂದಾಗಿದ್ದಾರೆ. ಈ ವೇಳೆ ಬಸ್‌ ಏಕಾಏಕಿ ಮುಂದೆ ಚಲಿಸಿದ್ದರಿಂದ ಶಿಲ್ಪಾಶ್ರೀ ಆಯತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಬಸ್‌ನ ಎಡಭಾಗದ ಹಿಂಬದಿ ಚಕ್ರ ಶಿಲ್ಪಾಶ್ರೀಯ ಸೊಂಟದ ಎಡ ತೊಡೆಯ ಮೇಲೆ ಉರುಳಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಶಿಲ್ಪಾಶ್ರೀಯನ್ನು ವಿದ್ಯಾರ್ಥಿಗಳು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆಯ ಸುದ್ದಿ ತಿಳಿದು ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು ಹಾಗೂ ಜ್ಞಾನಭಾರತಿ ಠಾಣೆ ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ. ಘಟನೆ ಬಳಿಕ ಬಿಎಂಟಿಸಿ ಬಸ್‌ ಚಾಲಕ ಸುರೇಶ್‌, ಸ್ಥಳದಲ್ಲೇ ಬಸ್‌ ಬಿಟ್ಟು ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಬಸ್‌ ಜಪ್ತಿ ಮಾಡಲಾಗಿದೆ. ಚಾಲಕ ಸುರೇಶ್‌ನನ್ನು ಪತ್ತೆಹಚ್ಚಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂ.ವಿವಿ ಕ್ಯಾಂಪಸ್‌ ಒಳಗೆ ವಾಹನ ನಿಷೇಧಕ್ಕೆ ವಿದ್ಯಾರ್ಥಿಗಳ ಬಿಗಿ ಪಟ್ಟು

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಸೋಮವಾರ ಬೆಳಗ್ಗೆ ವಿದ್ಯಾರ್ಥಿನಿ ಮೇಲೆ ಬಿಎಂಟಿಸಿ ಬಸ್‌ ಹರಿದು ಗಂಭೀರ ಗಾಯಗೊಂಡ ಹಿನ್ನೆಲೆ ಕ್ಯಾಂಪಸ್‌ ರಸ್ತೆ ಬಂದ್‌ ಮಾಡಿ ವಿದ್ಯಾರ್ಥಿಗಳು ಅಹೋರಾತ್ರಿ ಪ್ರತಿಭಟನೆಗೆ ಮುಂದಾಗಿದ್ದರು. 

ಘಟನೆ ಬೆನ್ನಲ್ಲೇ ಕ್ಯಾಂಪಸ್‌ನ ಪ್ರಮುಖ ರಸ್ತೆಯಲ್ಲಿ ಜಮಾವಣೆಗೊಂಡ ಸಾವಿರಾರು ವಿದ್ಯಾರ್ಥಿಗಳು ಅಪಘಾತಕ್ಕೆ ಕಾರಣವಾದ ಬಿಎಂಟಿಸಿ ಚಾಲಕನನ್ನು ಕೂಡಲೇ ಬಂಧಿಸಬೇಕು. ವಿದ್ಯಾರ್ಥಿನಿ ಶಿಲ್ಪಾಶ್ರೀ ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ವಿದ್ಯಾರ್ಥಿನಿಯ ಕಾಲು, ಸೊಂಟದ ಮೇಲೆ ಚಕ್ರ ಹರಿದಿರುವುದರಿಂದ ಮುಂದೆ ಸಹಜ ಜೀವನ ಕಷ್ಟವಾದ್ದರಿಂದ ಆಕೆಯ ಆರೈಕೆಗಾಗಿ ಕುಟುಂಬಕ್ಕೆ ಸೂಕ್ತ ಪರಿಹಾರ ಕಲ್ಪಿಸಬೇಕು. ಜೊತೆಗೆ ಕ್ಯಾಂಪಸ್‌ನೊಳಗೆ ಸಾರ್ವಜನಿಕ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿರುವುದರಿಂದ ಇಂತಹ ಅಪಘಾತಗಳು ಮರುಕಳಿಸುತ್ತಿವೆ. ವಿದ್ಯಾರ್ಥಿಗಳ ಭಯಭೀತಿಯಿಂದ ಓಡಾಡುವಂತಾಗಿದೆ. ಹಾಗಾಗಿ ಸರ್ಕಾರ ಸಾರ್ವಜನಿಕ ವಾಹನಗಳಿಗೆ ಕ್ಯಾಂಪಸ್‌ ರಸ್ತೆಯಲ್ಲಿ ಸಂಚಾರ ನಿಬಂರ್‍ಧಿಸಬೇಕು ಎಂದು ಒತ್ತಾಯಿಸಿದ್ದರು. 

ವಿದ್ಯಾರ್ಥಿಗಳ ಪ್ರತಿಭಟನೆ ಬೆನ್ನಲ್ಲೇ ವಿವಿಯ ಕುಲಪತಿ ಡಾ. ಜಯಕರ ಅವರು ವಿವಿಧ ಸಿಂಡಿಕೇಟ್‌ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಸ್ಥಳಕ್ಕಾಗಮಿಸಿ ವಿದ್ಯಾರ್ಥಿಗಳ ಅಹವಾಲು ಆಲಿಸಿದರು. ವಿದ್ಯಾರ್ಥಿನಿಯ ಚಿಕಿತ್ಸಾ ವೆಚ್ಚವನ್ನು ವಿವಿಯಿಂದಲೇ ಭರಿಸಲಾಗುವುದು. ತಮ್ಮ ಬೇಡಿಕೆಯಂತೆ ಕ್ಯಾಂಪಸ್‌ ರಸ್ತೆಯಲ್ಲಿ ಸಾರ್ವಜನಿಕ ವಾಹನಗಳ ಸಂಚಾರ ನಿಷೇಧಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದ್ದರು.

ಇದೇ ವೇಳೆ, ಬಿಎಂಟಿಸಿ, ಬಿಬಿಎಂಪಿ ಅಧಿಕಾರಿಗಳು ಕೂಡ ಸ್ಥಳಕ್ಕಾಗಮಿಸಿ ಅವರ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿ ಮನವೊಲಿಸುವ ಪ್ರಯತ್ನ ನಡೆಸಿದರು. ಆದರೆ, ತಮ್ಮ ಬೇಡಿಕೆ ಈಡೇರುವವರೆಗೆ ಶತಾಯಗತಾಯ ಹೋರಾಟ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಿರುವ ವಿದ್ಯಾರ್ಥಿಗಳು, ಸೋಮವಾರ ಸಂಜೆ ಸುರಿದ ಮಳೆಯನ್ನೂ ಲೆಕ್ಕಸಿದೆ ಆಹೋರಾತ್ರಿ ಪ್ರತಿಭಟನೆಗೆ ಮುಂದಾದರು. 

ಚಿಕಿತ್ಸಾ ವೆಚ್ಚ ಭರಿಸಲು ಬಿಎಂಟಿಸಿ ಒಪ್ಪಿಗೆ

ವಿದ್ಯಾರ್ಥಿಗಳ ಪ್ರತಿಭಟನೆ ಬೆನ್ನಲ್ಲೇ ಸ್ಥಳಕ್ಕೆ ದೌಡಾಯಿಸಿದ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಶ್ರೀನಾಥ್‌ ಅವರು ವಿದ್ಯಾರ್ಥಿನಿ ಶಿಲ್ಪಾ ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಬಿಎಂಟಿಸಿಯೇ ಭರಿಸುವುದಾಗಿ ಭರವಸೆ ನೀಡಿದರು. ಈಗಾಗಲೇ ನಮ್ಮ ಸಂಸ್ಥೆಯ ಅಧಿಕಾರಿಗಳನ್ನು ವಿದ್ಯಾರ್ಥಿನಿ ದಾಖಲಾಗಿರುವ ಆಸ್ಪತ್ರೆಗೆ ಕಳುಹಿಸಿದ್ದು, ಅವರು ಆಸ್ಪತ್ರೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಸೂಕ್ತ ಚಿಕಿತ್ಸೆಗೆ ಕ್ರಮ ವಹಿಸಿದ್ದಾರೆ ಎಂದು ತಿಳಿಸಿದರು.

Bangalore University: ಜ್ಞಾನಭಾರತಿ ಜಾಗ ರಕ್ಷಣೆಗೆ ವಿವಿ ನಿರ್ಧಾರ!

ಇನ್ನಷ್ಟು ಹಂಪ್‌ ನಿರ್ಮಾಣ: ಪಾಲಿಕೆ

ಸ್ಥಳಕ್ಕಾಗಮಿಸಿದ ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತ ನಾಗರಾಜ್‌ ಅವರು, ಕ್ಯಾಂಪಸ್‌ನ ರಸ್ತೆಯಲ್ಲಿ ವಾಹನಗಳ ವೇಗದ ಸಂಚಾರ ನಿಯಂತ್ರಣಕ್ಕೆ ಈಗಿರುವ ಹಂಪ್‌ಗಳ ಜೊತೆಗೆ ಇನ್ನು ಕೆಲವೆಡೆ ಹಂಪ್‌ಗಳನ್ನು ನಿರ್ಮಿಸಲಾಗುವುದು. ಕ್ಯಾಂಪಸ್‌ ಒಳಗೆ ಸಾರ್ವಜನಿಕ ವಾಹನಗಳನ್ನು ನಿಷೇಧಿಸಬೇಕೆಂಬ ವಿದ್ಯಾರ್ಥಿಗಳ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಈ ಬಗ್ಗೆ ಬಿಬಿಎಂಪಿ, ಅರಣ್ಯ, ಉನ್ನತ ಶಿಕ್ಷಣ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳ ನೇತೃತ್ವದ ಸಭೆ ನಡೆಸಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಉನ್ನತ ಶಿಕ್ಷಣ ಸಚಿವರ ಗಮನಕ್ಕೆ ಈ ವಿಷಯ ತಂದು ಬೇಡಿಕೆ ಈಡೇರಿಕೆ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಬೆಂ.ವಿವಿಯಿಂದ 5 ಲಕ್ಷ ಪರಿಹಾರ?

ಘಟನೆ ನಡೆದ ಬೆನ್ನಲ್ಲೇ ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಡಾ. ಜಯಕರ ಅವರ ನೇತೃತ್ವದಲ್ಲಿ ವಿವಿಯ ಅಧಿಕಾರಿಗಳು ಸಭೆ ನಡೆಸಿ ವಿದ್ಯಾರ್ಥಿನಿಯ ಚಿಕಿತ್ಸಾ ವೆಚ್ಚಕ್ಕಾಗಿ .5 ಲಕ್ಷ ನೀಡಲು ತೀರ್ಮಾನಿಸಿದ್ದರು. ಆದರೆ, ನಂತರ ಬಂದ ಬಿಎಂಟಿಸಿ ಅಧಿಕಾರಿಗಳು ತಾವೇ ಚಿಕಿತ್ಸಾ ವೆಚ್ಚ ಭರಿಸುವ ಭರವಸೆ ನೀಡಿದ್ದರಿಂದ ಈಗ ಆ ಪರಿಹಾರ ಮೊತ್ತವನ್ನು ಯಾವ ರೀತಿ ಉಪಯೋಗಿಸಬಹುದೆಂಬ ಬಗ್ಗೆ ಮಂಗಳವಾರ ಮತ್ತೊಮ್ಮೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದರು.
 

Latest Videos
Follow Us:
Download App:
  • android
  • ios