ಮಂಗಳೂರು(ಏ.05): ಕೊರೋನಾ ಲಾಕ್‍ಡೌನ್ ಸಂಕಟದ ಸಂದರ್ಭ ಮಂಗಳೂರು ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಮೊಟ್ಟೆ, ಮ್ಯಾಗಿಗೆ ಪ್ರಧಾನಿ ಕಾರ್ಯಾಲಯಕ್ಕೆ ಟ್ವೀಟ್ ಮಾಡಿರುವ ವಿದ್ಯಮಾನ ನಡೆದಿದೆ.

ನಗರದ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಉತ್ತರ ಭಾರತ ಮೂಲದ ಸೌಮ್ಯಾ ಸಿಂಗ್ ಟ್ವೀಟ್ ಮಾಡಿದಾಕೆ. ಲಾಕ್‍ಡೌನ್‍ನಿಂದ ಹಾಸ್ಟೆಲ್‍ನಲ್ಲಿ ಇರುವ ಈ ವಿದ್ಯಾರ್ಥಿನಿಯರಿಗೆ ಪ್ರಧಾನಿ ಮೊಟ್ಟೆ, ಮ್ಯಾಗಿ ನೀಡುವಂತೆ ಮಾ.31ರಂದು ಟ್ವೀಟ್ ಮಾಡಿದ್ದರು.

ಮಾಸ್ಕ್ ಧರಿಸದೇ ಸ್ಯಾನಿಟೈಸರ್ ವಿತರಿಸಿದ ಶ್ರೀರಾಮುಲು; ಆರೋಗ್ಯ ಸಚಿವರೇ ಹೀಗ್ಮಾಡಿದ್ರೆ ಹೇಗೆ?

ಈ ಟ್ವೀಟ್, ರಾಜ್ಯದ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಗಮನಕ್ಕೆ ಬಂದಿದ್ದು, ಮಂಗಳೂರು ಸಂಸದ ನಳಿನ್ ಕುಮಾರ್ ಅವರ `ವಾರ್ ರೂಂ'ನ ಮೇಲ್ವಿಚಾರಕರ ಗಮನಕ್ಕೆ ತಂದಿದ್ದಾರೆ.

ಕಾರ್ಯಪ್ರವೃತ್ತವಾದ ತಂಡ, ವಿದ್ಯಾರ್ಥಿನಿಯನ್ನು ಸಂಪರ್ಕಿಸಿದಾಗ `1 ಡಜನ್ ಮೊಟ್ಟೆ ಮತ್ತು 7 ಪ್ಯಾಕೇಟ್ ಮ್ಯಾಗಿ'ಗೆ ಆಕೆ ಬೇಡಿಕೆ ಸಲ್ಲಿಸಿದ್ದಳು. ಸ್ವಯಂಸೇವಕರು ಆಕೆ ಬೇಡಿಕೆ ಸಲ್ಲಿಸಿದ 30 ನಿಮಿಷದಲ್ಲೇ ರೂಮಿಗೆ 1 ಡಜನ್ ಮೊಟ್ಟೆ ಹಾಗೂ 7 ಪ್ಯಾಕೆಟ್ ಮ್ಯಾಗಿ ಹಾಗೂ ಬಿಸ್ಕೆಟ್‍ಗಳನ್ನು ತಲುಪಿಸಿದ್ದಾರೆ. ಆಕೆಗೆ ಆಹಾರ ವಸ್ತುಗಳನ್ನು ಉಚಿತವಾಗಿ ತಲುಪಿಸಲಾಗಿದೆ.