ಬಸ್ ಅಪಘಾತ: ಮೃತ ವಿದ್ಯಾರ್ಥಿನಿಯ ಅಂಗಾಂಗ ದಾನ
ಶಾಲಾ ಪ್ರವಾಸ ಹಿನ್ನೆಲೆಯಲ್ಲಿ ಬೆಳಗ್ಗಿನ ಜಾವ ಶೃಂಗೇರಿಗೆ ಆಗಮಿಸುತ್ತಿದ್ದ ವೇಳೆ ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನ ಸೌತಿಕೆರೆ ಗ್ರಾಮದ ಬಳಿ ಬಸ್ ಪಲ್ಟಿಯಾಗಿದೆ. ಘಟನೆಯಲ್ಲಿ ಓರ್ವ ವಿದ್ಯಾರ್ಥಿನಿ ಮೃತಳಾಗಿದ್ದು, 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.
ಚಿಕ್ಕಮಗಳೂರು[ನ.10]: ಶಾಲಾ ಪ್ರವಾಸ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಲ್ಲಿ ಓರ್ವ ವಿದ್ಯಾರ್ಥಿನಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ. ಆದರೆ ಅಪಘಾತದಲ್ಲಿ ಕೊನೆಯುಸಿರೆಳೆದ ಬಾಲಕಿಯ ಪೋಷಕರು ತಮ್ಮ ಮಗಳ ಅಂಗಾಂಗ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪೂರ್ಣಪ್ರಜ್ಞಾ ಶಾಲಾ ಬಸ್ ಇದಾಗಿದ್ದು, ಮೃತ ಬಾಲಕಿಯನ್ನು ಹತ್ತನೇ ತರಗತಿಯ ದಿಯಾ ಎಂದು ಗುರುತಿಸಲಾಗಿದೆ. ಶಾಲಾ ಪ್ರವಾಸ ಹಿನ್ನೆಲೆಯಲ್ಲಿ ಬೆಳಗ್ಗಿನ ಜಾವ ಶೃಂಗೇರಿಗೆ ಆಗಮಿಸುತ್ತಿದ್ದ ವೇಳೆ ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನ ಸೌತಿಕೆರೆ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ. ಗಾಯಾಳು ವಿದ್ಯಾರ್ಥಿಗಳನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎನ್ ಆರ್. ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿನಿಯ ಅಂಗಾಂಗ ದಾನ: ಮಾನವೀಯತೆ ಮೆರೆದ ಪೋಷಕರು
ಮೃತ ವಿದ್ಯಾರ್ಥಿನಿ ದಿಯಾ ತಂದೆ ನಿವೃತ್ತ ಕರ್ನಲ್ ರಾಜೇಂದ್ರ ಸಿಂಗ್ ಶೇರಾವತ್ ಅಪಘಾತದಲ್ಲಿ ಮೃತಪಟ್ಟ ಮಗಳ ಕಣ್ಣು ಸೇರಿದಂತೆ ಅಂಗಾಂಗಗಳನ್ನು ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಗೆ ದಾನ ಮಾಡಿದ್ದಾರೆ. ಈ ಮೂಲಕ ಮಗಳನ್ನು ಅಗಲಿರುವ ದುಃಖದ ನಡುವೆಯೂ ಮಾನವೀಯತೆ ಮೆರೆದಿದ್ದಾರೆ.