ಶೌಚಗೃಹಕ್ಕೆ 20 ರೂ ಕೊಡಲಾಗದೇ ನದಿಗಿಳಿದ ವಿದ್ಯಾರ್ಥಿ ಸಾವು
ತುಂಗಾನದಿಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು | ಪ್ರವಾಸಕ್ಕೆಂದು ಬಂದಿದ್ದ ವೇಳೆ ದುರ್ಘಟನೆ |
ಚಿಕ್ಕಮಗಳೂರು (ನ. 05): ದೇವಾಲಯದ ಶೌಚಗೃಹದಲ್ಲಿ ಸ್ನಾನಕ್ಕೆ 20 ರೂಪಾಯಿ ಕೇಳಿದರೆಂದು ತುಂಗಾ ನದಿಯಲ್ಲಿ ಸ್ನಾನ ಮಾಡುವಾಗ ಪ್ರವಾಸಕ್ಕೆ ಬಂದಿದ್ದ 9 ನೇ ತರಗತಿ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರೋ ಘಟನೆ ಶೃಂಗೇರಿ ತಾಲೂಕಿನ ತುಂಗಾ ನದಿಯಲ್ಲಿ ನಡೆದಿದೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹಲಸೂರು ಪ್ರಿಯದರ್ಶಿನಿ ಪ್ರೌಢಶಾಲೆಯ ತರುಣ್ ಗೌಡ ಮೃತ ವಿದ್ಯಾರ್ಥಿ. ಶಾಲೆಯಿಂದ ಸುಮಾರು 60 ವಿದ್ಯಾರ್ಥಿಗಳು ಶೃಂಗೇರಿಗೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಮಕ್ಕಳು ಸ್ನಾನಕ್ಕೆ ಬಂದಾಗ ಶೌಚಗೃಹದವರು ಒಬ್ಬರಿಗೆ 20 ರೂಪಾಯಿ ಕೇಳಿದ್ದಾರೆ. ಹಣ ಜಾಸ್ತಿಯಾಯಿತೆಂದು ಎಲ್ಲರೂ ತುಂಗಾ ನದಿಗೆ ಸ್ನಾನಕ್ಕೆ ಹೋದಾಗ ಈ ದುರ್ಘಟನೆ ಸಂಭವಿಸಿದೆ.
ಸ್ಥಳಿಯರು ಹಾಗೂ ಪೊಲೀಸರ ಸಹಕಾರದಿಂದ ಸುಮಾರು ಒಂದು ಗಂಟೆಯ ಬಳಿಕ ವಿದ್ಯಾರ್ಥಿಯ ಮೃತದೇಹವನ್ನ ನೀರಿನಿಂದ ಮೇಲೆತ್ತಿದ್ದಾರೆ. ಶೃಂಗೇರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.