ಭದ್ರಾ ಜಲಾಶಯದಿಂದ ಬಲದಂಡೆ ನಾಲೆಯಿಂದ ಕಾಲುವೆಗೆ ನೀರು ಹರಿಸುವ ವೇಳೆ ಎಲ್ಲಾ ಅನಧಿಕೃತ ಪಂಪ್‌ಸೆಟ್‌ಗಳನ್ನು ತೆರವು ಮಾಡಿಸಿ, ಅಚ್ಚುಕಟ್ಟು ಕೊನೆಯ ಭಾಗದ ರೈತರಿಗೆ ನೀರು ಕೊಡುವಂತೆ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು.

ದಾವಣಗೆರೆ (ಮಾ.04): ಭದ್ರಾ ಜಲಾಶಯದಿಂದ ಬಲದಂಡೆ ನಾಲೆಯಿಂದ ಕಾಲುವೆಗೆ ನೀರು ಹರಿಸುವ ವೇಳೆ ಎಲ್ಲಾ ಅನಧಿಕೃತ ಪಂಪ್‌ಸೆಟ್‌ಗಳನ್ನು ತೆರವು ಮಾಡಿಸಿ, ಅಚ್ಚುಕಟ್ಟು ಕೊನೆಯ ಭಾಗದ ರೈತರಿಗೆ ನೀರು ಕೊಡುವಂತೆ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು. ತಾಲೂಕಿನ ದೊಡ್ಡಬಾತಿ ಗ್ರಾಮದಲ್ಲಿ ಭಾನುವಾರ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಭದ್ರಾ ಜಲಾಶಯದಿಂದ ಬಲದಂಡೆ ಕಾಲುವೆಗಳಿಗೆ ಫೆ.16ರಿಂದ 28ರವರೆಗೆ ನೀರು ಹರಿಸಿದ ವೇಳೆ ಕಾಲುವೆಯಲ್ಲಿ ಅನಧಿಕೃತ ಪಂಪ್‌ಸೆಟ್‌ಗಳ ಹಾವಳಿಯಿಂದಾಗಿ ಕೊನೆಯ ಭಾಗಕ್ಕೆ ನೀರು ತಲುಪಲು ಸಾಧ್ಯವಾಗಿಲ್ಲ ಎಂದರು.

ಅನಧಿಕೃತ ಪಂಪ್‌ಸೆಟ್‌ಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಕೈಗೊಂಡು, ನೀರು ತಲುಪಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಕಾಲುವೆಗೆ ನೀರು ಹರಿಸುವ ವೇಳೆ ಎಲ್ಲಾ ಅನಧಿಕೃತ ಪಂಪ್‌ ಸೆಟ್ ಗಳನ್ನು ತೆರವು ಮಾಡಿ, ಕೊನೆಯ ಭಾಗದ ರೈತರಿಗೆ ನೀರು ಕೊಡುವಂತೆ ಜಿಲ್ಲಾಡಳಿತಕ್ಕೆ ಆದೇಶಿಸಿದರು. ಅನಧಿಕೃತ ಪಂಪ್‌ ಸೆಟ್‌ ತೆರವು ಕಾರ್ಯಾಚರಣೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ಯಾವುದೇ ಮುಲಾಜಿಗೆ ಮಣಿಯದೇ, ನೀರಿನ ಸೋರಿಕೆಗೆ ಕಡಿವಾಣ ಹಾಕುವ ಮೂಲಕ ಕೊನೆಯ ಭಾಗದ ರೈತರಿಗೆ ನೀರು ತಲುಪಿಸುವ ಜವಾಬ್ಧಾರಿ ನಮ್ಮದು. ಭದ್ರಾ ಜಲಾಶಯದಿಂದ ನಾಲೆಗೆ ನೀರು ಹರಿಸುತ್ತಿದ್ದಂತೆ ಜಿಲ್ಲಾಡಳಿತವು ಅನಧಿಕೃತ ಪಂಪ್‌ ಸೆಟ್‌ ತೆರವಿಗೆ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ದೇಶದ ಪ್ರತಿ ಮನೆಗೂ ನೀರು ನೀಡಲು ಜಲಜೀವನ್‌ ಯೋಜನೆ: ಸಂಸದ ಪ್ರಜ್ವಲ್‌ ರೇವಣ್ಣ

ಮುಂಗಾರು, ಹಿಂಗಾರು ಮಳೆ ಕೊರತೆ ಮತ್ತು ಜಲಾಶಯದಲ್ಲಿ ನೀರಿನ ಸಂಗ್ರಹದ ಕೊರತೆಯ ಕಾರಣದಿಂದ ಸುಡು ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಅಗತ್ಯವಿದ್ದರೆ ಹೊಸ ಕೊಳವೆ ಬಾವಿಗಳನ್ನು ಕೊರೆಸಲು ಹಾಗೂ ಬಾಡಿಗೆ ಆದಾರದಲ್ಲಿ ಕೊಳವೆ ಬಾವಿಗಳನ್ನು ಪಡೆದು, ಬೇಸಿಗೆ ದಿನಗಳನ್ನು ನಿರ್ವಹಣೆ ಮಾಡಬೇಕಾಗಿದೆ ಎಂದು ತಿಳಿಸಿದರು. ದಾವಣಗೆರೆ ಜಿಲ್ಲೆಯ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ, ಅಭಾವ ಇರುವ ಬಗ್ಗೆ ಯಾವುದೇ ದೂರುಗಳು ಬರಬಾರದು. ಚನ್ನಗಿರಿ, ಜಗಳೂರು ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ತಕ್ಷಣವೇ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿ, ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅಧಿಕಾರಿಗಳಿಗೆ ಸೂಚನೆ ನೀಡಿದರು.