ದೇಶದ ಪ್ರತಿ ಮನೆಗೂ ನೀರು ನೀಡಲು ಜಲಜೀವನ್ ಯೋಜನೆ: ಸಂಸದ ಪ್ರಜ್ವಲ್ ರೇವಣ್ಣ
ದೇಶದ ಪ್ರತಿ ಮನೆಗೂ ನೀರು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಲ ಜೀವನ್ ಮಿಷನ್ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು.
ಆಲೂರು (ಮಾ.04): ದೇಶದ ಪ್ರತಿ ಮನೆಗೂ ನೀರು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಲ ಜೀವನ್ ಮಿಷನ್ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು. ಕಣತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿ ಪರಿಶೀಲನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ಪ್ರತಿಯೊಬ್ಬ ನಾಗರಿಕರಿಗೂ ಶುದ್ಧ ಕುಡಿಯುವ ನೀರು ಸಿಗಬೇಕು ಎಂಬ ಉದ್ದೇಶದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜಲ ಜೀವನ್ ಮಿಷನ್ ಯೋಜನೆ ಜಾರಿಗೆ ತಂದು ಪ್ರತಿ ಹಳ್ಳಿ, ಪ್ರತಿ ಮನೆ ಅಂಗಳಗಳಲ್ಲಿ ನಲ್ಲಿ ಅಳವಡಿಸಿ ನೀರು ನೀಡಬೇಕು ಎನ್ನುವ ಉದ್ದೇಶ ಹೊಂದಿದ್ದಾರೆ.
ಇದು ಸಾಕಾರಗೊಳ್ಳಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು. ಕೇಂದ್ರದ ಯಾವುದೇ ಸರ್ಕಾರಗಳು ಇದುವರೆವಿಗೂ ನೀರಾವರಿಗಾಗಿ ಯಾವುದೇ ಮಂತ್ರಿಗಳನ್ನು ನೇಮಿಸಿಕೊಂಡಿರಲಿಲ್ಲ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವ ಸ್ಥಾನವನ್ನು ಸೃಷ್ಟಿಸಿ ನದಿ ಜೋಡಣೆ ಮತ್ತು ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಮುಂದಾಗಿದ್ದಾರೆ. ಮಾಜಿ ಪ್ರಧಾನ ಮಂತ್ರಿ ದೇವೇಗೌಡ ಮತ್ತು ರೇವಣ್ಣ ಅವರ ಸಹಕಾರದಿಂದ ಹಾಸನ ಜಿಲ್ಲೆಗೆ 4,970 ಕೋಟಿ ರು. ಹಾಗೂ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಡೂರಿಗೆ 822 ಕೋಟಿ ರು. ಅನುದಾನ ತಂದು ನೀರಿನ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಹೇಳಿದರು.
ಸರ್ಕಾರದ ಸೌಲಭ್ಯದಿಂದ ಜನರ ಕುಂದು ಕೊರತೆ ನಿವಾರಣೆ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ
ಆಲೂರು ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಇದೆ. ಹಾಸನ ಜಿಲ್ಲೆ ಸೇರಿದಂತೆ ಇಡೀ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಎದುರಿಸುವಂತಾಗಿದೆ. ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಹಣ ಲೂಟಿ ಮಾಡುತ್ತಿದೆಯೇ ಹೊರತು ಕೇವಲ ನಾಲ್ಕು ಗಂಟೆ ವಿದ್ಯುತ್ ನೀಡಲು ಸಾದ್ಯವಾಗುತ್ತಿಲ್ಲ. ಹಿಂದೆ ಜೆಡಿಎಸ್ ನೇತೃತ್ವದ ಸರ್ಕಾರ ರೇವಣ್ಣ ಅವರು ಇಂಧನ ಸಚಿವರಾಗಿದ್ದಾಗ ಅಗ್ಗದ ದರದಲ್ಲಿ ರೈತರಿಗೆ ವಿದ್ಯುತ್ ಟಿ.ಸಿ.ಗಳನ್ನು ಅಳವಡಿಸಿಕೊಡಲಾಗುತ್ತಿತ್ತು. ಅದರೆ ರೈತರಿಂದ 25 ಸಾವಿರ ರು. ಹಣ ಕಟ್ಟಿಸಿಕೊಂಡರು, ರೈತರು ಕಚೇರಿ ಅಲೆಯುವುದು ತಪ್ಪಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಂದು ಎಂಜಿನಿಯರ್ ಸೀಟಿಗೆ ಎರಡ್ಮೂರು ಲಕ್ಷ ರು. ಹಣ ಕಟ್ಟಿ ಓದಿಸಬೇಕಿತ್ತು. ಕೇವಲ ಶ್ರೀಮಂತರ ಮಕ್ಕಳಿಗೆ ಮಾತ್ರ ಮೀಸಲಾಗಿತ್ತು. ರೇವಣ್ಣ ಸಚಿವರಾದ ನಂತರ ಜಿಲ್ಲೆಗೆ ಹೆಚ್ಚು ಎಂಜಿನಿಯರ್ ಕಾಲೇಜ್ ತರುವ ಮೂಲಕ ಕೇವಲ 7 ಸಾವಿರ ರು.ಗೆ ಸೀಟು ನೀಡುವುದರ ಜತೆಗೆ ಪ್ರತಿ ಮನೆಯಲ್ಲಿ ಎಂಜಿನಿಯರ್ ಮಾಡಿರುವ ವಿದ್ಯಾರ್ಥಿಗಳಿದ್ದಾರೆ ಎಂದು ಹೇಳಿದರು. ‘ನನ್ನ ಲೋಕಸಭಾ ವ್ಯಾಪ್ತಿಯಲ್ಲಿ ಸುಮಾರು 4984 ಗ್ರಾಮಗಳಿದ್ದು 5 ವರ್ಷದ ಅವದಿಯಲ್ಲಿ ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಲು ಸಾದ್ಯವಾಗದೇ ಇರಬಹುದು, ಜಿಲ್ಲೆಯ 371 ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಜಾತಿ, ಪಕ್ಷ ಎನ್ನದೇ ಜನಸಾಮಾನ್ಯರಿಗೆ ಸ್ಪಂದಿಸಿ ಕಷ್ಟ-ಸುಖ ಆಲಿಸಿದ್ದೇನೆ.
ಪೂರ್ವ ತಯಾರಿ ಇಲ್ಲದೇ ಕಾಂಗ್ರೆಸ್‌ನಿಂದ ಜಾತಿ ಗಣತಿ ವರದಿ: ಪ್ರಲ್ಹಾದ್ ಜೋಶಿ
ದೇವೇಗೌಡರ ಸಹಕಾರದಿಂದ ಕೇಂದ್ರ ಸರ್ಕಾರದಿಂದ ಸಾಧ್ಯವಾದಷ್ಟು ಹಣ ತಂದು ಜಿಲ್ಲೆಯ ಅಭಿವೃದ್ಧಿ ಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದರು. ಜೆಡಿಎಸ್ ಅಧ್ಯಕ್ಷ ಕೆ.ಎಸ್.ಮಂಜೇಗೌಡ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ನಿರ್ದೇಶಕ ರವಿ, ಕಣತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಲಿಂಗರಾಜು, ತಾಪಂ ಮಾಜಿ ಸದಸ್ಯ ನಟರಾಜು ನಕಲಗೂಡು, ಗ್ರಾಪಂ ಸದಸ್ಯ ಪೃಥ್ವಿ ರಾಂ, ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಕೇಶವಮೂರ್ತಿ, ಪಿಡಿಒ ಪುರುಷೋತ್ತಮ, ಉಪಾಧ್ಯಕ್ಷೆ ರಾಧ, ಮಡಬಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜೇಶ್ವರಿ, ರೈತ ಸಂಘ ಒಕ್ಕೂಟಗಳ ತಾಲೂಕು ಅಧ್ಯಕ್ಷ ಧರ್ಮರಾಜ್, ದಲಿತ ಸಂಘಟನೆ ಹಿರಿಯ ಮುಖಂಡ ಬಸವರಾಜ್ ಗೇಕರವಳ್ಳಿ, ಸದಸ್ಯರಾದ ಕೃಷ್ಣೇಗೌಡ, ಡೇಗರಾಜು, ಪದ್ಮ ಇದ್ದರು.