ರೇಷನ್ ಕಾರ್ಡ್ ಕಡ್ಡಾಯದಿಂದ ಬೀದಿ ಬದಿ ವ್ಯಾಪಾರಿಗಳಿಗೆ ಸಂಕಷ್ಟ!
ಬೀದಿ ಬದಿ ವ್ಯಾಪಾರಿಗಳಿಗೆ ಸ್ಥಳೀಯ ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳಿಂದ ಆಗುತ್ತಿರುವ ಕಿರುಕುಳ ತಪ್ಪಿಸಲು 2014ರಲ್ಲಿ ಕೇಂದ್ರ ಸರ್ಕಾರ ಕಾಯ್ದೆಯನ್ನು ಜಾರಿಗೆ ತಂದಿದೆ. ಅದರ ಅಡಿಯಲ್ಲಿ ನಿಯಮಾವಳಿಗಳನ್ನು ರೂಪಿಸುವುದು, ವ್ಯಾಪಾರಿಗಳ ಸರ್ವೆ ಕಾರ್ಯ ನಡೆಸುವುದು ಮತ್ತು ಅವರ ಸ್ಥಿತಿಗತಿ ಆಧರಿಸಿ ಯೋಜನೆಗಳನ್ನು ರೂಪಿಸುವುದು, ಪಟ್ಟಣ ವ್ಯಾಪಾರ ಸಮಿತಿಗಳನ್ನು ರಚಿಸುವುದು ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ.
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು(ಜ.15): ಬರೋಬ್ಬರಿ 7 ವರ್ಷದ ಬಳಿಕ ರಾಜಧಾನಿ ಬೆಂಗಳೂರಿನ ಬೀದಿ ಬದಿಯಲ್ಲಿ ವ್ಯಾಪಾರಗಳ ಸರ್ವೇ ನಡೆಸಲಾಗುತ್ತಿದ್ದು, ಪಡಿತರ ಚೀಟಿ (ರೇಷನ್ ಕಾರ್ಡ್) ಕಡ್ಡಾಯಗೊಳಿಸಿದ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಬೀದಿ ವ್ಯಾಪಾರಿಗಳು ಸರ್ವೇಯಿಂದ ಹೊರ ಉಳಿಯುವಂತಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಬೀದಿ ಬದಿ ವ್ಯಾಪಾರಿಗಳಿಗೆ ಸ್ಥಳೀಯ ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳಿಂದ ಆಗುತ್ತಿರುವ ಕಿರುಕುಳ ತಪ್ಪಿಸಲು 2014ರಲ್ಲಿ ಕೇಂದ್ರ ಸರ್ಕಾರ ಕಾಯ್ದೆಯನ್ನು ಜಾರಿಗೆ ತಂದಿದೆ. ಅದರ ಅಡಿಯಲ್ಲಿ ನಿಯಮಾವಳಿಗಳನ್ನು ರೂಪಿಸುವುದು, ವ್ಯಾಪಾರಿಗಳ ಸರ್ವೆ ಕಾರ್ಯ ನಡೆಸುವುದು ಮತ್ತು ಅವರ ಸ್ಥಿತಿಗತಿ ಆಧರಿಸಿ ಯೋಜನೆಗಳನ್ನು ರೂಪಿಸುವುದು, ಪಟ್ಟಣ ವ್ಯಾಪಾರ ಸಮಿತಿಗಳನ್ನು ರಚಿಸುವುದು ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ.
ಆಧಾರ್ ಕಾರ್ಡ್ನಿಂದ 50 ಸಾವಿರ ಶ್ಯೂರಿಟಿ ರಹಿತ ಸಾಲ- ಏನಿದು ಪಿಎಂ ಸ್ವನಿಧಿ ಯೋಜನೆ? ಡಿಟೇಲ್ಸ್ ಇಲ್ಲಿದೆ
ಆ ಪ್ರಕಾರ ಬಿಬಿಎಂಪಿಯು 2017ರಲ್ಲಿ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿ ಸುಮಾರು 25 ಸಾವಿರ ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಿ ಬಿಬಿಎಂಪಿ ಗುರುತಿನ ಚೀಟಿ ನೀಡಲಾಗಿತ್ತು. ಆ ಬಳಿಕ ಬಿಬಿಎಂಪಿಯು ಸರ್ವೆ ಮಾಡುವುದಕ್ಕೆ ಮುಂದಾಗಿರಲಿಲ್ಲ. ಇದೀಗ ಬಿಬಿಎಂಪಿ ಮತ್ತೆ ಎಂಟು ವಲಯಗಳಿಗೆ ಪ್ರತ್ಯೇಕ ಆ್ಯಪ್ ನಲ್ಲಿ ಬೀದಿ ಬದಿ ವ್ಯಾಪಾರಿಗಳ ಸ್ಥಳ, ಫೋಟೋ, ವಿಳಾಸ ಸೇರಿದಂತೆ ಎಲ್ಲ ಮಾಹಿತಿಯನ್ನು ಆ್ಯಪ್ ನಲ್ಲಿಯೇ ದಾಖಲು ಮಾಡುವ ವ್ಯವಸ್ಥೆ ಮಾಡಿಕೊಂಡು ಸರ್ವೇ ನಡೆಸಿದೆ. ಆದರೆ, ಸರ್ವೇ ವೇಳೆ ಬೀದಿ ವ್ಯಾಪಾರಿಗಳಿಗೆ ರೇಷನ್ ಕಾರ್ಡ್ ಕಡ್ಡಾಯ ದಾಖಲೆ ಸಲ್ಲಿಸುವುದಕ್ಕೆ ತಿಳಿಸಲಾಗಿದೆ. ಇದು ಹಲವು ಬೀದಿ ವ್ಯಾಪಾರಿಗಳು ಸರ್ವೇಯಿಂದ ಹೊರ ಉಳಿಯುವುದಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಸರ್ಕಾರ ರೇಷನ್ ಕಾರ್ಡ್ ಕೊಟ್ಟಿಲ್ಲ:
ಸರ್ವೇದಾರರು ಭೇಟಿ ನೀಡಿದ ವೇಳೆ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್ ಬುಕ್, ಕುಟುಂಬ ಪಡಿತರ ಚೀಟಿ, ಕುಟುಂಬ ಸದಸ್ಯರ ಮಾಹಿತಿ, ಸ್ವಯಂ ಘೋಷಣೆ ಪ್ರಮಾಣ ಪತ್ರ ನೀಡಬೇಕೆಂದು ಬಿಬಿಎಂಪಿ ಸೂಚಿಸಿದೆ.
ಆದರೆ, ರಾಜ್ಯ ಸರ್ಕಾರವು ಕಳೆದ ಎರಡ್ಮೂರು ವರ್ಷದಿಂದ ಹೊಸದಾಗಿ ಪಡಿತರ ಚೀಟಿ ವಿತರಣೆ ಮಾಡಿಲ್ಲ. ಕೆಲವರು ತಮ್ಮ ಪಡಿತರ ಚೀಟಿ ಕಳೆದುಕೊಂಡಿದ್ದಾರೆ. ಮತ್ತೆ ಕೆಲವರು ನೆರೆಯ ರಾಜ್ಯದಿಂದ ಬೆಂಗಳೂರಿಗೆ ಬಂದು ಬೀದಿ ವ್ಯಾಪಾರ ಮಾಡುತ್ತಿದ್ದಾರೆ. ಅವರ ಬಳಿ ಕರ್ನಾಟಕದ ರೇಷನ್ ಕಾರ್ಡ್ ಇಲ್ಲ ಎಂಬ ಕಾರಣಕ್ಕೆ ಆ ಬೀದಿ ವ್ಯಾಪಾರಿಗಳನ್ನು ಸರ್ವೇಯಿಂದ ಕೈ ಬಿಡಲಾಗಿದೆ ಎಂದು ಪಟ್ಟಣ ವ್ಯಾಪಾರಿ ಸಮಿತಿಯ ಸದಸ್ಯರು ಆರೋಪಿಸಿದ್ದಾರೆ.
ಪಿಎಂ ಸ್ವನಿಧಿಯಡಿ ಸಾವಿರ ಜನರಿಗೆ ಸಾಲ:
ಕೇಂದ್ರ ಸರ್ಕಾರವು ಬೀದಿ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿ ಯೋಜನೆಯಡಿ ನಗರದ ಸುಮಾರು 80 ಸಾವಿರ ಬೀದಿ ವ್ಯಾಪಾರಿಗಳಿಗೆ ಬ್ಯಾಂಕ್ ಮೂಲಕ ಸಾಲ ನೀಡಲಾಗಿದೆ. ಆದರೆ, ಬಿಬಿಎಂಪಿಯು ಸರ್ವೇ ವೇಳೆ ಸಾಲ ಪಡೆದವರ ಅರ್ಧದಷ್ಟು ಮಂದಿಯನ್ನು ಗುರುತಿಸುವ ಕೆಲಸ ಮಾಡಿಲ್ಲ. ಹೀಗಾಗಿ, ನಗರದ ಬೀದಿ ವ್ಯಾಪಾರಿಗಳ ಸಂಖ್ಯೆ 30 ಸಾವಿರ ದಾಟಿಲ್ಲ ಎನ್ನಲಾಗಿದೆ.
ದೊಡ್ಡ ಮಾರುಕಟ್ಟೆ ಪ್ರದೇಶದಲ್ಲಿ ಮಾತ್ರ ಸರ್ವೇ:
ಬಿಬಿಎಂಪಿಯ ಅಧಿಕಾರಿಗಳು ನಗರದ ದೊಡ್ಡ ದೊಡ್ಡ ಮಾರುಕಟ್ಟೆ ಪ್ರದೇಶದಲ್ಲಿ ಮಾತ್ರ ಸರ್ವೇ ಕಾರ್ಯ ಮಾಡಿದ್ದಾರೆ. ಸಣ್ಣ-ಸಣ್ಣ ವ್ಯಾಪಾರಿ ತಾಣಗಳಲ್ಲಿ ಸರ್ವೇ ನಡೆಸಿಲ್ಲ. ಹೀಗಾಗಿ, ಹಲವು ಬೀದಿ ವ್ಯಾಪಾರಿಗಳು ಸಮೀಕ್ಷೆಗೆ ಒಳಪಟ್ಟಿಲ್ಲ. ಡಿ.20ಕ್ಕೆ ಸರ್ವೇ ಕೊನೆಗೊಳಿಸುವುದಾಗಿ ಬಿಬಿಎಂಪಿ ಹೇಳಿತ್ತು. ಯಾವುದೇ ಕಾರಣಕ್ಕೂ ಸರ್ವೇ ನಿಲ್ಲಿಸಬಾರದು. ಮುಂದುವರೆಸಬೇಕು ಎಂಬ ಬೀದಿ ಬದಿ ವ್ಯಾಪಾರಿಗಳ ಸಂಘಟನೆಯಿಂದ ಕೇಳಿ ಬಂದಿವೆ.
ಬೆಂಗಳೂರಿನ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ಮುಂದಾದ ಬಿಬಿಎಂಪಿ; ಶೀಘ್ರವೇ ಪಟ್ಟಿ ಪ್ರಕಟ
ಒಂದು ಕುಟುಂಬಕ್ಕೆ ಒಬ್ಬರಿಗೆ ಬೀದಿ ವ್ಯಾಪಾರಿ ಗುರುತಿನ ಚೀಟಿ ನೀಡುವ ನಿಯಮ ಇದೆ. ಆ ಕಾರಣಕ್ಕೆ ರೇಷನ್ ಕಾರ್ಡ್ ದಾಖಲೆ ಕಡ್ಡಾಯಗೊಳಿಸಲಾಗಿದೆ. ಕರ್ನಾಟಕದ ರೇಷನ್ ಕಾರ್ಡ್ ಹೊರತು ಪಡಿಸಿ ಯಾವುದೇ ರಾಜ್ಯದ ರೇಷನ್ ಕಾರ್ಡ್ ಕೊಟ್ಟರೂ ಪಡೆದು ದಾಖಲಾತಿ ಮಾಡಲಾಗುತ್ತದೆ ಎಂದು ಬಿಬಿಎಂಪಿ ಕಲ್ಯಾಣ ವಿಭಾಗದ Bವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.
ಈವರೆಗೆ ಗುರುತಿಸಲಾದ ಬೀದಿ ಬದಿ ವ್ಯಾಪಾರಿಗಳ ವಿವರ
ವಲಯ ವ್ಯಾಪಾರಿಗಳ ಸಂಖ್ಯೆ
ಪಶ್ಚಿಮ 6,959
ದಕ್ಷಿಣ 5,016
ಆರ್.ಆರ್ ನಗರ 4,028
ಪೂರ್ವ 3,915
ಬೊಮ್ಮನಹಳ್ಳಿ 2,223
ಮಹದೇವಪುರ 2,157
ಯಲಹಂಕ 1,789
ದಾಸರಹಳ್ಳಿ 1,517
ಒಟ್ಟು 27,604