Asianet Suvarna News Asianet Suvarna News

ಪಾತಾಳಕ್ಕೆ ಕುಸಿದ ಈರುಳ್ಳಿ ದರ: ರೈತ ಕಂಗಾಲು

2-3 ಸಾವಿರ ಇದ್ದ ಬೆಲೆ 2-3 ನೂರು ರುಪಾಯಿಗೆ ಬೆಲೆ ಕುಸಿತ| ಸಂಕಷ್ಟಕ್ಕೆ ಸಿಲುಕಿದ ಈರುಳ್ಳಿ ಬೆಳೆದ ರೈತರು| ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ತನ್ನೆಲ್ಲ ಬೆಳೆ ಕಳೆದುಕೊಂಡು ಬಂದು ಬೆಂಡಾಗಿರುವ ರೈತರಿಗೆ ಇದೀಗ ಕಂಟಕವಾಗಿ ಪರಿಣಮಿಸಿದ ಕೊರೋನಾ| 

Steep Fall in Onion Prices in Vijayapura grg
Author
Bengaluru, First Published Apr 24, 2021, 12:44 PM IST

ಮಲ್ಲಿಕಾರ್ಜುನ ಪಟ್ಟಣಶೆಟ್ಟಿ

ದೇವರಹಿಪ್ಪರಗಿ(ಏ.24): ಈ ಬಾರಿ ತಾಲೂಕಿನಲ್ಲಿ ರೈತರು ಬೆಳೆದ ಈರುಳ್ಳಿ ಬೆಲೆ ದಾಖಲೆ ಮಟ್ಟದಲ್ಲಿ ಪಾತಾಳಕ್ಕೆ ಕುಸಿದಿದೆ. ಇದರಿಂದ ಈರುಳ್ಳಿ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಾಕ್‌ಡೌನ್‌ಗಿಂತ ಮುಂಚೆ ಈರುಳ್ಳಿ ಬೆಲೆ ಗಗನಕ್ಕೇರಿದ್ದರಿಂದ ಹೆಚ್ಚಿನ ಆದಾಯ ನಿರೀಕ್ಷೆಯೊಂದಿಗೆ ತಾಲೂಕಿನ ರೈತರು ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆದಿದ್ದಾರೆ.

ಕಳೆದ ಸಾಲಿನಲ್ಲಿ ದೇವರಹಿಪ್ಪರಗಿ ತಾಲೂಕಿನ ರೈತರು 445 ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬೆಳೆಯನ್ನು ಬೆಳೆದಿದ್ದರು. ಈ ವರ್ಷದಲ್ಲಿ 375 ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿಯನ್ನು ಬೆಳೆದಿದ್ದಾರೆ. 1 ಹೆಕ್ಟೇರ್‌ ಪ್ರದೇಶದಲ್ಲಿ ಸುಮಾರು 8ರಿಂದ 10 ಟನ್‌ ಈರುಳ್ಳಿ ಬೆಳೆ ಬರುತ್ತದೆ.

ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ತನ್ನೆಲ್ಲ ಬೆಳೆಯನ್ನು ಕಳೆದುಕೊಂಡು ಬಂದು ಬೆಂಡಾಗಿರುವ ರೈತರಿಗೆ ಇದೀಗ ಕೊರೋನಾ ಮಹಾಮಾರಿ ಕಂಟಕವಾಗಿ ಪರಿಣಮಿಸಿದೆ. ರೈತರಿಗೆ ಜೀವನಾಧಾರವಾಗಿದ್ದ ಈರುಳ್ಳಿಯ ಬೆಲೆ ನೆಲಕಚ್ಚಿದ್ದರಿಂದ ಅನ್ನದಾತರಿಗೆ ಹೊಟ್ಟೆಯ ಮೇಲೆ ಬರೆ ಎಳೆದಂತಾಗಿದೆ. 2​-3 ಸಾವಿರ ಇದ್ದ ಬೆಲೆ ಈಗ 200-300 ಗಳಿಗೆ ಇಳಿದಿದೆ. ಹೀಗಾಗಿ ಕಷ್ಟಪಟ್ಟು ಈರುಳ್ಳಿ ಬೆಳೆದ ರೈತರ ಬದುಕು ದುಸ್ತರವಾಗಿದೆ. ರೈತ ಬೆಳೆದ ಬೆಳೆ ಹೊಲದಲ್ಲಿ ಮಣ್ಣು ಪಾಲಾಗುತ್ತಿದೆ ಎಂದು ಜೆಡಿಎಸ್‌ ಪಕ್ಷದ ಜಿಲ್ಲಾ ಮುಖಂಡ ರಾಜುಗೌಡ ಪಾಟೀಲ ಕುದುರಿ ಸಾಲವಾಡಗಿ ಸರ್ಕಾರ ತಕ್ಷಣವೇ ರೈತರ ನೆರವಿಗೆ ಬರಬೇಕು ತೊಗರಿ, ಕಡಲೆಗೆ ಬೆಂಬಲ ಬೆಲೆ ಘೋಷಿಸಿದಂತೆ ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ಘೋಷಿಸಬೇಕು ಇಲ್ಲವಾದಲ್ಲಿ ಸರ್ಕಾರವೇ ಖರೀದಿಸಬೇಕು ಎಂದು ಆಗ್ರಹಿಸಿದ್ದಾರೆ.

ಈರುಳ್ಳಿ ಬೆಲೆ ಭಾರೀ ಇಳಿಕೆ : ಗ್ರಾಹಕರಲ್ಲಿ ಸಂತಸ

ಕೆಲ ರೈತರು ಸಾಲಸೋಲ ಮಾಡಿ ಈರುಳ್ಳಿ ಬೆಳೆಯನ್ನು ಬೆಳೆದಿದ್ದಾರೆ. ಅವರ ಹೊಲದಲ್ಲಿ ಈರುಳ್ಳಿ ಬೆಳೆಯು ಚೆನ್ನಾಗಿ ಬಂದಿದೆ. ಆದರೆ ಉತ್ತಮ ದರ ಸಿಗದೆ ಆ ರೈತರು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿದ್ದಾರೆ. ಆದ್ದರಿಂದ ಸರ್ಕಾರ ದರ ಕುಸಿತವನ್ನು ನಿಯಂತ್ರಿಸಬೇಕು ಅಥವಾ ದರ ಕುಸಿದರೂ ಅಂತಹ ಸಂದರ್ಭದಲ್ಲಿ ರೈತರನ್ನು ಕಾಪಾಡುವತ್ತ ಕ್ರಮ ಕೈಗೊಳ್ಳಬೇಕು ಎಂಬುದು ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ.

ಈ ಬಾರಿ ಈರುಳ್ಳಿ ಬೆಲೆ ಕುಸಿತದಿಂದ ಮಾರುಕಟ್ಟೆಗೆ ಕಳಿಸದೆ ನಮ್ಮ ಜಮೀನಿನಲ್ಲಿ ಹಾಕಿಕೊಂಡು ಕುಂತಿವಿ, ಬೆಳೆದ ಬೆಳೆಗೆ ಬೆಲೆ ಇಲ್ಲದೆ ರೈತರ ಬದುಕು ದುಸ್ತರವಾಗಿದೆ. ದೇಶಕ್ಕೆ ಅನ್ನ ನೀಡುವ ರೈತರ ಬೆನ್ನಿಗೆ ಸರ್ಕಾರಗಳು ನಿಂತು ಬೆಂಬಲ ಬೆಲೆ ಘೋಷಿಸಬೇಕು. ಇಲ್ಲ ಸರ್ಕಾರ ಮಧ್ಯ ಪ್ರವೇಶಿಸಿ ಈರುಳ್ಳಿ ಖರೀದಿಸಬೇಕು ಎಂದು ದೇವರ ಹಿಪ್ಪರಗಿ ಈರುಳ್ಳಿ ಬೆಳೆಗಾರ ಸುಭಾಷ ತಾಂಬೆ (ಹಳ್ಳದಮನಿ) ತಿಳಿಸಿದ್ದಾರೆ.

ಸರ್ಕಾರಕ್ಕೆ ಈ ವಿಷಯದ ಕುರಿತು ಪ್ರಸ್ತಾಪ ಮಾಡಿದ್ದೇನೆ. ನಮ್ಮ ಜಿಲ್ಲೆಯಲ್ಲಿ ಈರುಳ್ಳಿ ಹೆಚ್ಚು ಬೆಳೆಯುವ ಬಾಗೇವಾಡಿ, ಕೋಲಾರ, ದೇವರಹಿಪ್ಪರಗಿ ತಾಲೂಕಿನ ರೈತರು ಆತಂಕಪಡುವ ಅವಶ್ಯಕತೆ ಇಲ್ಲ, ಶೀಘ್ರದಲ್ಲಿ ಸರ್ಕಾರ ಈರುಳ್ಳಿ ಖರೀದಿ ಕೇಂದ್ರಗಳನ್ನು ತೆರೆಯಲಿದೆ ಎಂದು ವಿಜಯಪುರ ಜಿಲ್ಲಾ ತೋಟಗಾರಿಕಾ ಡಿ.ಡಿ. ಸಿದ್ರಾಮಯ್ಯ ಬರಗಿಮಠ ಹೇಳಿದ್ದಾರೆ. 

ಕಳೆದ ಸಾಲಿನಲ್ಲಿ ದೇವರಹಿಪ್ಪರಗಿ ತಾಲೂಕಿನ ರೈತರು 445 ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬೆಳೆಯನ್ನು ಬೆಳೆದಿದ್ದರು. ಈ ವರ್ಷದಲ್ಲಿ 375 ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿಯನ್ನು ಬೆಳೆದಿದ್ದಾರೆ. 1 ಹೆಕ್ಟೇರ್‌ ಪ್ರದೇಶದಲ್ಲಿ ಸುಮಾರು 8ರಿಂದ 10 ಟನ್‌ ಈರುಳ್ಳಿ ಉತ್ಪನ್ನ ಬರುತ್ತದೆ ಎಂದು ಸಿಂದಗಿ ತೋಟಗಾರಿಕೆ ಇಲಾಖೆ ತಾಂತ್ರಿಕ ವಿಭಾಗ ನಿರ್ದೇಶಕ ರಾಘವೇಂದ್ರ ಬಗಲಿ ತಿಳಿಸಿದ್ದಾರೆ.
 

Follow Us:
Download App:
  • android
  • ios