ಬೆಂಗಳೂರು (ಏ.03):  ರಾಜ್ಯಕ್ಕೀಗ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಆಗುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆ ಕಾಯ್ದುಕೊಂಡಿದ್ದು, ಗ್ರಾಹಕರ ಮೊಗದಲ್ಲಿ ಸಂತಸ ಮೂಡಿಸಿದೆ.

ಈ ವರ್ಷ ಮಹಾರಾಷ್ಟ್ರದಲ್ಲಿ ಈರುಳ್ಳಿ ಫಸಲು ಉತ್ತಮವಾಗಿದೆ. ಹಾಗೇ ವಿಜಯಪುರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಬೆಳೆ ಚೆನ್ನಾಗಿ ಬಂದಿದೆ. ಹೀಗಾಗಿ ರಾಜ್ಯದ ಮಾರುಕಟ್ಟೆಗಳಿಗೆ ಬೇಡಿಕೆಗೆ ತಕ್ಕಷ್ಟುಬರುತ್ತಿರುವುದರಿಂದ ಬೆಲೆ ಕಡಿಮೆಯಿದೆ.

ಹಾಪ್‌ಕಾಮ್ಸ್‌ಗಳಲ್ಲಿ ದಪ್ಪ ಈರುಳ್ಳಿ ಕೆ.ಜಿ. 27 ರು.ಗೆ ಮಾರಾಟವಾಗುತ್ತಿದೆ. ಇನ್ನು ಬೆಂಗಳೂರು ನಗರದ ಸಗಟು ಮಾರುಕಟ್ಟೆಯಲ್ಲಿ ಗುಣಮಟ್ಟಕ್ಕೆ ಆಧರಿಸಿ ಕೆ.ಜಿ.ಗೆ 5 ರು.ನಿಂದ 16 ರು.ವರೆಗೆ ಬೆಲೆ ನಿಗದಿಯಾಗಿದೆ. ಚಿಲ್ಲರೆ ಮಾರುಕಟ್ಟೆಗಳಲ್ಲಿ ಕೆ.ಜಿ. ಈರುಳ್ಳಿ 15 ರು.ನಿಂದ. 25 ರು.ವರೆಗೆ ಖರೀದಿಯಾಗುತ್ತಿದೆ.

ಕುಡಿಯೊಡೆದ ಈರುಳ್ಳಿ, ಬೆಳ್ಳುಳ್ಳಿ ಎಸೆಯೋ ಮುನ್ನ ಪ್ಲೀಸ್ ಇಲ್ ಕೇಳಿ .

ರಾಜ್ಯದಲ್ಲಿ ಎರಡನೇ ಬೆಳೆ ಬಂದಿದೆ. ಮಹಾರಾಷ್ಟ್ರದಿಂದಲೂ ಸಾಕಷ್ಟುಈರುಳ್ಳಿ ಬರುತ್ತಿದೆ. ಹೀಗಾಗಿ ಒಂದರಿಂದ ಎರಡು ತಿಂಗಳು ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗುವುದಿಲ್ಲ. ಪೂರೈಕೆ ಕಡಿಮೆಯಾದರೆ ಮಾತ್ರ ಬೆಲೆ ಹೆಚ್ಚಾಗಲಿದೆ ಎಂದು ಎಪಿಎಂಸಿ ಆಲೂಗಡ್ಡೆ ಮತ್ತು ಈರುಳ್ಳಿ ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ಉದಯಶಂಕರ್‌ ಹೇಳುತ್ತಾರೆ.

ಯಶವಂತಪುರ ಮಾರುಕಟ್ಟೆಗೆ 50,718 ಬ್ಯಾಗ್‌ಗಳು, ದಾಸನಪುರ ಮಾರುಕಟ್ಟೆಗೆ 1,365 ಬ್ಯಾಗ್‌ಗಳು ಸೇರಿದಂತೆ ಒಟ್ಟಾರೆ ಶುಕ್ರವಾರ 260 ಟ್ರಕ್‌ಗಳಲ್ಲಿ 52,083 ಬ್ಯಾಗ್‌ ಈರುಳ್ಳಿ ಬಂದಿದೆ. ಮಹಾರಾಷ್ಟ್ರದ ಅತ್ಯುತ್ತಮ ಗುಣಮಟ್ಟದ ಈರುಳ್ಳಿ 1,300-1,400 ರು., ಉತ್ತಮ 1,200-1,300 ರು., ಮಧ್ಯಮ 1,000ದಿಂದ 1,100 ರು. ಇದೆ. ರಾಜ್ಯದ ಈರುಳ್ಳಿ ಕ್ವಿಂಟಲ್‌ಗೆ 500 ರು. ನಿಂದ 1,600 ರು.ವರೆಗೆ ಬೆಲೆ ನಿಗದಿಯಾಗಿದೆ. ಆಲೂಗಡ್ಡೆ 100 ಕೆ.ಜಿ.ಗೆ 800ರಿಂದ 1400 ರು.ವರೆಗೆ ಬೆಲೆ ಇದೆ.