ಬಿಜೆಪಿಯ ಕೆಲವು ಅತೃಪ್ತ ಶಾಸಕರು ಒಟ್ಟಾಗಿ ನಡೆಸಿದ ಸಭೆ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಪಕ್ಷಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದಿದ್ದಾರೆ.

ಮಂಗಳೂರು(ಮೇ 31): ಬಿಜೆಪಿಯ ಕೆಲವು ಅತೃಪ್ತ ಶಾಸಕರು ಒಟ್ಟಾಗಿ ನಡೆಸಿದ ಸಭೆ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಪಕ್ಷಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದಿದ್ದಾರೆ.

ಸರ್ಕಾರದಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡುತ್ತಿದ್ದಾರೆ. ಯಡಿಯೂರಪ್ಪ ನಾಯಕತ್ವದಲ್ಲಿ ಬಿಜೆಪಿ ಮುಂದುವರಿಯುತ್ತದೆ. ಅಭಿವೃದ್ಧಿ ದೃಷ್ಟಿಯಿಂದ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಾಸಕರು ಸಭೆ ನಡೆಸಿ ತಮ್ಮ ಕ್ಷೇತ್ರದ ಅಭಿವೃದ್ದಿ ಕಾರ್ಯ, ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಅದರಲ್ಲಿ ತಪ್ಪೇನೂ ಇಲ್ಲ, ಹಾಗೆಂದು ಪಕ್ಷಕ್ಕೆ ತನ್ನದೇ ಆದ ಶಿಸ್ತು ಇದೆ. ಇದನ್ನು ಉಲ್ಲಂಘಿಸಿದರೆ ಪಕ್ಷದ ವರಿಷ್ಠರ ಗಮನಕ್ಕೆ ತಂದು ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.

ಕಮಲ ಪಾಳಯದಲ್ಲಿ ಅಸಮಾಧಾನ: 'ವಲಸಿಗರಿಂದ ಮೂಲ ಬಿಜೆಪಿಗರಿಗೆ ಅನ್ಯಾಯ, ಜಾರಕಿಹೊಳಿ

ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ಆಗಿದೆ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಗಲುಗನಸು ಕಾಣುತ್ತಿದ್ದಾರೆ. ಆದರೆ ಸರ್ಕಾರ ಪೂರ್ಣಾವಧಿಯನ್ನು ಯಶಸ್ವಿಯಾಗಿ ಪೂರೈಸುತ್ತದೆ. ಯಡಿಯೂರಪ್ಪನವರೇ ಪೂರ್ಣಾವಧಿ ಸಿಎಂ ಆಗಿರುತ್ತಾರೆ ಎಂದು ನಳಿನ್‌ ಕುಮಾರ್‌ ಹೇಳಿದರು.

ವಿದೇಶದಲ್ಲಿರುವ ಕನ್ನಡಿಗರನ್ನು ಕರೆತರುವ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದ ಅವರು, ಕ್ವಾರಂಟೈನ್‌ ಕೇಂದ್ರದಲ್ಲಿ ತೊಂದರೆ, ಅವ್ಯವಸ್ಥೆಗಳಿದಲ್ಲಿ ತಕ್ಷಣ ಸರಿಪಡಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು.