ಮೈಸೂರು(ಜು.24): ಕರ್ನಾಟಕ ರಾಜ್ಯ ಪುರೋಹಿತರ ಹಾಗೂ ಜ್ಯೋತಿಷಿಗಳ ಕ್ರಿಕೆಟ್‌ ಅಸೋಸಿಯೇಷನ್‌ ವತಿಯಿಂದ ಜು.27ರಿಂದ 29ರವರೆಗೆ ಕ್ರಿಕೆಟ್ ಪಂದ್ಯ ನಡೆಯಲಿದೆ.

ಮೈಸೂರಿನ ಎಚ್‌.ಡಿ. ಕೋಟೆ- ಮಾನಂದವಾಡಿ ರಸ್ತೆಯಲ್ಲಿರುವ ರೈಲ್ವೆ ಕಾರ್ಯಾಗಾರದ ಆಟದ ಮೈದಾನದಲ್ಲಿ ಕರ್ನಾಟಕ ರಾಜ್ಯ ಪುರೋಹಿತರ ಹಾಗೂ ಜ್ಯೋತಿಷಿಗಳ ಕ್ರಿಕೆಟ್‌ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಡಾ. ಮೂಗೂರು ಮಧುದೀಕ್ಷಿತ್‌ ತಿಳಿಸಿದರು.

ನೃತ್ಯ ಪ್ರದರ್ಶನ ಕಾರ್ಯಕ್ರಮ:

ಜು.27ರ ಬೆಳಗ್ಗೆ 8.45ರಿಂದ 10 ಗಂಟೆಯವರೆಗೆ ಕರ್ನಾಟಕದ ಬೇರೆ ಬೇರೆ ಜಿಲ್ಲೆಯ ವೀರಗಾಸೆ ಕಲಾವಿದರಿಂದ ನೃತ್ಯ ಪ್ರದರ್ಶನ ನಡೆಯಲಿದೆ. ಬೆಳಗ್ಗೆ 10ಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಟಗಾರ ಜಾವಗಲ್‌ ಶ್ರೀನಾಥ್‌ ಪಂದ್ಯಾವಳಿ ಉದ್ಘಾಟಿಸುವರು. ಚಂದ್ರವನ ಆಶ್ರಮದ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ಕುಪ್ಪೂರು ಸುಕ್ಷೇತ್ರ ಗದ್ದಿಗೆ ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ನಿವೃತ್ತ ಡಿಜಿಪಿ ಬಿ.ಜಿ. ಜ್ಯೋತಿಪ್ರಕಾಶ್‌ ಮಿರ್ಜಿ ಅಧ್ಯಕ್ಷತೆ ವಹಿಸುವರು ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೆಎಎಸಿಎ ಸಂಸ್ಥೆ ಲೋಗೋವನ್ನು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್‌, ಟೈಸ್‌ ಬೋರ್ಡ್‌ ಅನ್ನು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ. ಮಹೇಂದ್ರ ಬಿಡುಗಡೆಗೊಳಿಸುವರು. ಬೆಳಗ್ಗೆ 11ಕ್ಕೆ ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಜ್ಯೋತಿಷಿಗಳ ಕ್ರಿಕೆಟ್‌ ಅಸೋಸಿಯೇಷನ್‌ ಸಂಸ್ಥೆಗಳ ನಡುವೆ ಸ್ನೇಹಪೂರ್ವಕ ಉದ್ಘಾಟನಾ ಪಂದ್ಯ ನಡೆಯಲಿದೆ ಎಂದು ಅವರು ವಿವರಿಸಿದರು.

ಕರ್ನಾಟಕ ದೋಸ್ತಿ ಸರ್ಕಾರಕ್ಕೆ ‘ಗ್ರಹಣ’ ಜ್ಯೋತಿಷಿ SK ಜೈನ್ ಕೊಟ್ಟ ಕಾರಣ

ಸಂಘದ ಉಪಾಧ್ಯಕ್ಷ ಕೆ.ಪಿ. ಶಾಂತಮಹದೇವ ಪ್ರಸಾದ್‌ ಮಾತನಾಡಿ, ಜು.29ರ ಮಧ್ಯಾಹ್ನ 2ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶಾಸಕ ಎಸ್‌.ಎ. ರಾಮದಾಸ್‌, ಮೈಸೂರು ವಿವಿ ಕುಲಪತಿ ಪ್ರೊ. ಹೇಮಂತಕುಮಾರ್‌ ಬಹುಮಾನ ವಿತರಿಸುವರು. ಮಧ್ಯಾಹ್ನ 2ಕ್ಕೆ ಡೊಳ್ಳು ಕುಣಿತ ಹಾಗೂ ನ್ಯಾಟ್ಯಾಸ್‌ ತಂಡದಿಂದ ನೃತ್ಯ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.

ವಿಜೇತ ತಂಡಕ್ಕೆ 50,000 ನಗದು ಬಹುಮಾನ:

ಈ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ 50 ಸಾವಿರ ಹಾಗೂ ದ್ವಿತೀಯ ಬಹುಮಾನವಾಗಿ .25 ಸಾವಿರ ಹಣ ಹಾಗೂ ಟ್ರೋಫಿ ನೀಡಲಾಗುವುದು. ಪಂದ್ಯದ ಪ್ರವೇಶ ಶುಲ್ಕ .5 ಸಾವಿರ ನಿಗದಿಪಡಿಸಲಾಗಿದೆ. ಈ ಪಂದ್ಯಾವಳಿಯಲ್ಲಿ 16 ಜಿಲ್ಲೆಗಳಿಂದ 16 ತಂಡಗಳು ಭಾಗವಹಿಸಲಿವೆ ಎಂದು ಅವರು ವಿವರಿಸಿದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಂಘದ ಪ್ರಧಾನ ಕಾರ್ಯದರ್ಶಿ ಎಸ್‌.ಎಂ. ಪ್ರಸಾದ್‌ ಹಲಗೂರು, ಕಾರ್ಯದರ್ಶಿ ಬಿ.ಆರ್‌. ಉಮೇಶ್‌ಕುಮಾರ್‌, ಖಜಾಂಚಿ ಎಂ.ಆರ್‌. ಮಂಜುನಾಥ ಗುಪ್ತ, ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ದೀಪಕ್‌ಕುಮಾರ್‌ ಇದ್ದರು.