'ಪರಿಹಾರ ಸಿಗದೆ ಸಂತ್ರಸ್ಥರು ರಾಜ್ಯ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ'
ಅತಿವೃಷ್ಟಿಯಿಂದ ತೀವ್ರ ಸಂಕಷ್ಟದಲ್ಲಿ ಸಿಲುಕಿರುವ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಪರಿಹಾರ ನೀಡಿಲ್ಲ ಎಂದ ಕೆಪಿಸಿಸಿ ವಕ್ತಾರ ಕೆ. ದಿವಾಕರ್| ರಾಜ್ಯದಲ್ಲಿ ಅತಿವೃಷ್ಟಿಯಿಂದ ಸಾಕಷ್ಟು ಹಾನಿಯಾಗಿದೆ| ಸಂತ್ರಸ್ಥರು ನೆರವು ಸಿಗದೆ ಶಾಪ ಹಾಕುತ್ತಿದ್ದಾರೆ| ಸಂತ್ರಸ್ತರ ಕಣ್ಣೀರು ಒರೆಸುವ ಶಕ್ತಿಯನ್ನು ರಾಜ್ಯ ಸರ್ಕಾರ ಕಳೆದುಕೊಂಡಿದೆ| ಇತ್ತ ಕೇಂದ್ರ ಸರ್ಕಾರದ ನೆರವು ದೊರಕದಿರುವುದು ದುರಂತವೇ ಸರಿ|
ಶಿವಮೊಗ್ಗ(ಸೆ.27) ಅತಿವೃಷ್ಟಿಯಿಂದ ತೀವ್ರ ಸಂಕಷ್ಟದಲ್ಲಿ ಸಿಲುಕಿರುವ ಕರ್ನಾಟಕಕ್ಕೆ ಇದುವರೆಗೆ ಪರಿಹಾರವನ್ನೇ ನೀಡದ ಕೇಂದ್ರ ಸರ್ಕಾರದ ನೀತಿ ಒಕ್ಕೂಟ ವ್ಯವಸ್ಥೆಯ ಅಣಕದಂತಿದೆ ಎಂದು ಕೆಪಿಸಿಸಿ ವಕ್ತಾರ ಕೆ. ದಿವಾಕರ್ ವ್ಯಂಗ್ಯವಾಡಿದ್ದಾರೆ.
ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅತಿವೃಷ್ಟಿಯಿಂದ ಸಾಕಷ್ಟು ಹಾನಿಯಾಗಿದೆ. ಸಂತ್ರಸ್ಥರು ನೆರವು ಸಿಗದೆ ಶಾಪ ಹಾಕುತ್ತಿದ್ದಾರೆ. ಸಂತ್ರಸ್ತರ ಕಣ್ಣೀರು ಒರೆಸುವ ಶಕ್ತಿಯನ್ನು ರಾಜ್ಯ ಸರ್ಕಾರ ಕಳೆದುಕೊಂಡಿದೆ. ಇತ್ತ ಕೇಂದ್ರ ಸರ್ಕಾರದ ನೆರವು ದೊರಕದಿರುವುದು ದುರಂತವೇ ಸರಿ ಎಂದು ದೂರಿದ್ದಾರೆ.
ನೆರೆ ಉಂಟಾದ ಹಾನಿ ವೀಕ್ಷಣೆಗೆ ಕೇಂದ್ರದ ಸಚಿವೆ ನಿರ್ಮಲಾ ಸೀತಾರಾಮನ್, ಅಮಿತ್ ಶಾ ಭೇಟಿ ನೀಡಿ ಹೋದರು. ಕೇಂದ್ರದ ಅಧಿಕಾರಿಗಳ ತಂಡವೇ ವೈಮಾನಿಕ ಸಮೀಕ್ಷೆ ನಡೆಸಿತು. ಇಷ್ಟಾದರೂ ಕೇಂದ್ರದಿಂದ ಬಿಡಿಗಾಸು ಸಿಗಲಿಲ್ಲ. ಒಕ್ಕೂಟ ವ್ಯವಸ್ಥೆಯ ಅಣಕವಿದು. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಗಳನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸ್ವತಃ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿದರು ಕೂಡ ಸಂತ್ರಸ್ತರ ಬಗ್ಗೆ ಒಂದು ಮಾತೂ ಹೇಳಲಿಲ್ಲ. ಇಸ್ರೋ ಅಧ್ಯಕ್ಷರನ್ನು ತಬ್ಬಿಕೊಂಡಿದ್ದು ತಪ್ಪಲ್ಲ. ಆದರೆ ನೆರೆ ಪರಿಹಾರವನ್ನು ಘೋಷಣೆ ಮಾಡಬೇಕಿತ್ತು. ರಾಜ್ಯದ ಮುಖ್ಯಮಂತ್ರಿಯನ್ನು ಕನಿಷ್ಟ ನೋಡುವ, ಭೇಟಿಯಾಗುವ ಸೌಜನ್ಯವನ್ನು ಪ್ರಧಾನಿ ಮಾಡುತ್ತಿಲ್ಲ. ಇವರ ಆಂತರಿಕ ಜಗಳದಲ್ಲಿ ಕಣ್ಣೀರು ಹಾಕುತ್ತಿರುವವರು ಮಾತ್ರ ರಾಜ್ಯದ ನೆರೆ ಸಂತ್ರಸ್ತರರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರಿಹಾರ ಬಿಡುಗಡೆ ಮಾಡಲಿ
ಅತಿ ವೃಷ್ಟಿಯಿಂದಾಗಿ ರಾಜ್ಯದ ಜನತೆ ಸಂಕಷ್ಟಕ್ಕೆ ಈಡಾಗಿರುವ ಸಂದರ್ಭದಲ್ಲಿ ಹೆಚ್ಚಿನ ಪರಿಹಾರ ನೀಡುವಂತೆ ಸರ್ವಪಕ್ಷಗಳ ನಿಯೋಗವನ್ನು ಕೇಂದ್ರ ಸರ್ಕಾರದ ಬಳಿ ಕೊಂಡೊಯ್ಯಲಿ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಾಜ್ಯದ ಸರ್ವಪಕ್ಷಗಳ ನಿಯೋಗ ಕೇಂದ್ರ ಸರ್ಕಾರವನ್ನು ಭೇಟಿ ಮಾಡಬೇಕಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಪಿಎಂ ಎಚ್.ಡಿ. ದೇವೇಗೌಡ, ಮಾಜಿ ಸಿಎಂಗಳಾದ ಎಸ್.ಎಂ.ಕೃಷ್ಣ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸರ್ವಪಕ್ಷಗಳ ಹಿರಿಯರು ನಿಯೋಗದಲ್ಲಿ ದೆಹಲಿಗೆ ತೆರಳಿ ಕೇಂದ್ರ ಸರ್ಕಾರದೊಂದಿಗೆ ಚರ್ಚೆ ನಡೆಸಬೇಕು. ನೆರೆ ಪರಿಹಾರ ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.
ನರೇಂದ್ರ ಮೋದಿ ಸರ್ಕಾರದ ಆಡಳಿತವೆ ದಿಕ್ಕು ತಪ್ಪುತ್ತಿದೆ. ವಿದೇಶಾಂಗ ನೀತಿ ಇಲ್ಲವಾಗಿದೆ. ಆರ್ಥಿಕ ಕುಸಿತದ ಬಗ್ಗೆ ಎಚ್ಚರಿಕೆ ವಹಿಸುತ್ತಿಲ್ಲ. ಅಮೆರಿಕವನ್ನು ಬಿಗಿ ದಪ್ಪಿಕೊಳ್ಳುತ್ತಾರೆ. ಅಮೆರಿಕಕ್ಕೆ ಹೋಗುವುದು ತಪ್ಪಲ್ಲ. ಆದರೆ ಅವರ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದು, ಚುನಾವಣಾ ಪ್ರಚಾರ ಮಾಡುವುದು ಎಷ್ಟರ ಮಟ್ಟಿಗೆ ಸರಿ. ಇದು ಭಾರತೀಯರಿಗೆ ಮಾಡಿದ ಘೋರ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿನ ರಾಜ್ಯ ಸರ್ಕಾರದ ಕಥೆಯೇ ಬೇರೆ. ಮುಖ್ಯಮಂತ್ರಿ ಯಡಿಯೂರಪ್ಪ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಉಪಚುನಾವಣೆ, ಅನರ್ಹ ಶಾಸಕರ ವಿಷಯ ಅವರನ್ನು ಅವರನ್ನು ಕಾಡುತ್ತಿವೆ. ಈ ಮೊದಲು ರಾಜೀನಾಮೆ ನೀಡಿದ ಶಾಸಕರಿಗೂ ನಮಗೂ ಸಂಬಂಧವಿಲ್ಲ. ಯಡಿಯೂರಪ್ಪನವರು ಇದೀಗ ಅನರ್ಹ ಗೊಂಡಿರುವ ಶಾಸಕರನ್ನು ಕೈ ಬಿಡುವುದಿಲ್ಲ ಎನ್ನುತ್ತಿದ್ದಾರೆ. ಜನತೆ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ಸರ್ಕಾರ ತಾತ್ಕಾಲಿಕ ಬಹುಮತದ ಪಕ್ಷವಾಗಿದೆ ಎಂದು ಟೀಕಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕುರಿತಂತೆ ಸಚಿವ ಕೆ. ಎಸ್. ಈಶ್ವರಪ್ಪ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಈಶ್ವರಪ್ಪ ಎಷ್ಟೇ ಟೀಕಿಸಿದರೂ ಹಿಂದುಳಿದ ವರ್ಗದ ನಾಯಕರಾಗಲು ಅವರಿಗೆ ಸಾಧ್ಯವೇ ಇಲ್ಲ. ಅಲ್ಲದೇ ಅಲ್ಪಸಂಖ್ಯಾತರ ಕುರಿತಂತೆ ಈಶ್ವರಪ್ಪ ಹೇಳುತ್ತಿರುವ ಮಾತುಗಳು ಶೋಭೆ ತರುವಂತದ್ದಲ್ಲ ಎಂದು ತಿಳಿಸಿದ್ದಾರೆ.