ಮುಂಡಗೋಡಕ್ಕೂ ಚೀನಾ ಹಣ: ಆಂತರಿಕ ವಿಚಾರಣೆ ಆರಂಭ
ಹಣ ಪಡೆದಿದ್ದಾರೆ ಎನ್ನಲಾದ ಬೌದ್ಧ ಭಿಕ್ಕುಗಳ ವಿರುದ್ಧ ಆಂತರಿಕ ವಿಚಾರಣೆ ಆರಂಭ| ದಲೈ ಲಾಮಾ ಆಂತರಿಕ ಚಲನವಲನಗಳ ಬಗ್ಗೆ ಬೇಹುಗಾರಿಕೆ| ಇಬ್ಬರ ಬಗ್ಗೆ ಸ್ಥಳೀಯವಾಗಿ ಯಾವುದೇ ಪ್ರಕರಣ ದಾಖಲಾಗಿಲ್ಲ|
ಸಂತೋಷ ದೈವಜ್ಞ
ಮುಂಡಗೊಡ(ಸೆ.26): ಬೌದ್ಧ ಧರ್ಮಗುರು ದಲೈ ಲಾಮಾ ಅವರ ಆಂತರಿಕ ಚಲನವಲನಗಳ ಬಗ್ಗೆ ಬೇಹುಗಾರಿಕೆ ನಡೆಸಲು ಮುಂಡಗೋಡ ಟಿಬೇಟಿಯನ್ ಕಾಲನಿಯ ಬೌದ್ಧಭಿಕ್ಕುಗಳಿಗೆ ಚೀನಿಯರು ಹಣ ಸಂದಾಯ ಮಾಡುತ್ತಿದ್ದಾರೆ ಎಂಬ ಸುದ್ದಿ ಈಗ ಕೇವಲ ಟಿಬೆಟಿಯನ್ ಕಾಲನಿ ಮಾತ್ರವಲ್ಲದೇ ದೇಶದಲ್ಲೇ ಆತಂಕ ಸೃಷ್ಟಿಸಿದೆ.
ಇತ್ತೀಚೆಗೆ ದೆಹಲಿಯಲ್ಲಿ ಬಂಧನಕ್ಕೊಳಗಾದ ಚೀನಾ ವ್ಯಕ್ತಿ ಚಾರ್ಲಿ ಪೆಂಗ್ ಮುಂಡಗೋಡ ಟಿಬೇಟಿಯನ್ ಕಾಲನಿಯ ಡ್ರೆಪುಂಗ್ ಲೋಸಲಿಂಗ್ ಮೊನೆಸ್ಟ್ರಿಯಲ್ಲಿ ಧಾರ್ಮಿಕ ವ್ಯಾಸಂಗ ಮಾಡುತ್ತಿರುವ ಇಬ್ಬರು ಟಿಬೇಟಿಯನ್ ಸನ್ಯಾಸಿಗಳ ಖಾತೆಗೆ ಲಕ್ಷಾಂತರ ರುಪಾಯಿ ವರ್ಗಾವಣೆ ಮಾಡಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹರಡಿದೆ. ಆದರೆ ಈವರೆಗೂ ಆ ಇಬ್ಬರ ಬಗ್ಗೆ ಸ್ಥಳೀಯವಾಗಿ ಯಾವುದೇ ಪ್ರಕರಣ ದಾಖಲಾಗಿಲ್ಲ.
ಮೊದಲಿನಿಂದಲೂ ಟಿಬೇಟಿಯನ್ ಧರ್ಮಗುರು ದಲೈ ಲಾಮಾ ಅವರಿಗೆ ಚೀನಾ ಸಾಂಪ್ರದಾಯಿಕ ವೈರಿ. ದಲೈ ಲಾಮಾ ವಿರುದ್ಧ ಬೇಹುಗಾರಿಕೆ ನಡೆಸುತ್ತಿರುವ ವಿಷಯ ಹೊಸದೇನಲ್ಲ. ಚೀನಿಯ ನುಸುಳುಕೋರನೇ ಈ ರೀತಿ ದಲೈ ಲಾಮಾ ಬಗ್ಗೆ ಬೇಹುಗಾರಿಕೆ ನಡೆಸಲು ಲಕ್ಷಾಂತರ ರುಪಾಯಿ ಹಣ ನೀಡಿರುವ ಸುದ್ದಿ ಭಾರಿ ಸದ್ದು ಮಾಡುತ್ತಿದ್ದಂತೆ ಕಾಲನಿಯ ಆಯಾ ಬೌದ್ಧ ಮಠಗಳಲ್ಲಿ ಆಂತರಿಕ ವಿಚಾರಣೆ ನಡೆಸಲಾರಂಭಿಸಲಾಗಿದ್ದು, ಬ್ಯಾಂಕ್ ಖಾತೆ ದಾಖಲೆಗಳನ್ನು ಕಲೆ ಹಾಕುತ್ತಿದೆ. ಟಿಬೇಟ್‌ನಲ್ಲಿರುವ ನಮ್ಮ ಮನೆಯವರು ನಮಗೆ ಆಗಾಗ ಹಣ ಕಳುಹಿಸುತ್ತಾರೆ. ಟಿಬೇಟ್‌ನಲ್ಲಿ ನೇರವಾಗಿ ಹಣ ಕಳುಹಿಸಲು ಅವಕಾಶವಿಲ್ಲದ ಕಾರಣ ಈ ರೀತಿ ಕಂಪನಿ ಮೂಲಕ ಹಣ ರವಾನಿಸಲಾಗುತ್ತಿತ್ತು. ಚೀನಾ ಸರ್ಕಾರದಿಂದ ಯಾವುದೇ ಹಣ ಪಡೆದಿಲ್ಲ. ತಮಗೂ ಹಾಗೂ ಬಂಧಿತ ಚೀನಿಯ ವ್ಯಕ್ತಿಗೂ ಸಂಬಂಧವಿಲ್ಲ ಎಂದು ಆರೋಪಕ್ಕೊಳಗಾದವರು ಹೇಳುತ್ತಾರೆ ಎಂದಿದ್ದಾರೆ ಮೊನೆಸ್ಟ್ರಿ ಮುಖ್ಯಸ್ಥರು.
ಕಾರವಾರ: ಕಡಿದ ಹಾವನ್ನು ಹಿಡಿದು ಆಸ್ಪತ್ರೆಗೆ ತಂದ ವ್ಯಕ್ತಿ!
ಆತಂಕ
ಭಾರತ ಮತ್ತು ಚೀನಾ ನಡುವೆ ಗಡಿ ವಿವಾದ ನಡೆಯುತ್ತಿರುವಾಗಲೇ ಅಕ್ರಮ ನುಸುಳುಕೋರ ಚೀನಿ ಏಜೆಂಟ್ ಮೂಲಕ ಹಣ ಸಂದಾಯ ಮಾಡಿ ಬೇಹುಗಾರಿಕೆ ನಡೆಸುತ್ತಿರುವ ಬಗ್ಗೆ ಆಘಾತಕಾರಿ ಸುದ್ದಿ ಹೊರಬಿದ್ದಿರುವುದು ಭಾರತೀಯರಲ್ಲಿ ಆತಂಕ ಸೃಷ್ಟಿಸಿದೆ.
ಈ ಬಗ್ಗೆ ಸ್ಥಳೀಯ ಹಿರಿಯ ಟಿಬೇಟಿಯನ್ ಬಿಕ್ಕುತುಪ್ತೆನ್ ಲೋಬೋ ಅವರನ್ನುವಿಚಾರಿಸಿದಾಗ ಟಿಬೇಟಿಯನ್ನರಲ್ಲಿ ಆಂತರಿಕ ಗೊಂದಲ ಸೃಷ್ಟಿಸಿ ಅದರ ಲಾಭ ಪಡೆಯಲು ಪ್ರಯತ್ನಿಸಲಾಗುತ್ತಿದೆ. ಇದರಲ್ಲಿ ಯಾವುದೇ ಹುರುಳಿಲ್ಲ. ಇದರಿಂದ ಚೀನಾಗೆ ಯಾವ ಲಾಭಕೂಡ ಆಗುವುದಿಲ್ಲ ಎನ್ನುತ್ತಾರೆ.
ಮಾಧ್ಯಮದ ಮೂಲಕ ಈ ವಿಷಯ ತಮ್ಮ ಗಮನಕ್ಕೆ ಬಂದಿದ್ದು, ಆರೋಪಕ್ಕೊಳಗಾದವರ ವಿಚಾರಣೆ ನಡೆಸಲಾಗುತ್ತಿದೆ. ನಮ್ಮ ಮನೆಯವರು ಕಳುಹಿಸಿದ ಹಣ ಎಂದು ಹೇಳಿಕೊಂಡಿದ್ದಾರೆ. ಆದರೆ ಆ ಕುರಿತ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದ್ದು, ಬ್ಯಾಂಕ್ ಖಾತೆ ವಿವರ ಸಹ ಅತಿ ಶೀಘ್ರದಲ್ಲೇ ಲಭ್ಯವಾಗಲಿವೆ ಎಂದು ಲೋಸಲಿಂಗ್ ಮೊನೆಸ್ಟ್ರಿ ಆಡಳಿತಾಧಿಕಾರಿ ತುಪ್ತೆನ್ ಲೋದೆನ್ ತಿಳಿಸಿದ್ದಾರೆ.
ದೆಹಲಿಯಲ್ಲಿ ಚೀನಿ ವ್ಯಕ್ತಿ ಬಂಧನವಾಗಿರುವ ವಿಷಯ ಗೊತ್ತು. ಆದರೆ ಈ ಪ್ರಕರಣದಲ್ಲಿ ಸ್ಥಳೀಯರ ನಂಟು ಇರುವುದು ತಮ್ಮ ಗಮನಕ್ಕೆ ಬಂದಿಲ್ಲ. ಈ ಕುರಿತು ಯಾವುದೇ ಪ್ರಕರಣ ಸಹ ದಾಖಲಾಗಿಲ್ಲ ಎಂದು ಮುಂಡಗೋಡ ಸಿಪಿಐ ಪ್ರಭುಗೌಡ ಅವರು ಹೇಳಿದ್ದಾರೆ.