ಬೆಳಗಾವಿ(ಜ.12): ನಗರದ ಸರ್ದಾರ್ ಹೈಸ್ಕೂಲ್ ಮೈದಾನದಲ್ಲಿ ಬಿಜೆಪಿ ಆಯೋಜಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ-2019 ರ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ವೇದಿಕೆಯಿಂದ ನಿರ್ಗಮಿಸುತ್ತಿದ್ದ ವೇಳೆ ವೇದಿಕೆ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ಜರುಗಲಿಲ್ಲ. 

ಜಾಗೃತಿ ಸಮಾವೇಶವನ್ನು ಉದ್ದೇಶಿಸಿ ಸಚಿವ ಅನುರಾಗ್ ಅವರು ಅರ್ಧ ಗಂಟೆಗೂ ಹೆಚ್ಚು ಸಮಯ ಮಾತನಾಡಿದರು. ನಂತರ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಸಮಯವಾಗಿದ್ದರಿಂದ ಸಚಿವರ ಭಾಷಣ ಮುಕ್ತಾಯವಾಗುತ್ತಿದ್ದಂತೆ, ಚಿಕ್ಕೋಡಿಯತ್ತ ತೆರಳಲು ವೇದಿಕೆಯಿಂದ ಕೆಳೆಗೆ ಇಳಿಯುತ್ತಿದ್ದರು. ಈ ವೇಳೆ ಕಾರ್ಯಕರ್ತರು ಸಚಿವರೊಂದಿಗೆ ಫೋಟೊ ಹಾಗೂ ಸೆಲ್ಫಿ ತೆಗೆದುಕೊಳ್ಳಬೇಕೆಂದು ವೇದಿಕೆ ಏರಿದ್ದರಿಂದ ಹೆಚ್ಚಿನ ಭಾರ ತಡೆಯಲಾಗದೆ ಸಚಿವ ಅನುರಾಗ್ ಠಾಕೂರ ನಿಂತಿದ್ದ ವೇದಿಕೆ ಜಾಗ ಕುಸಿದಿದೆ. 

'72 ವರ್ಷದಲ್ಲಿ ಕಾಂಗ್ರೆಸ್ ಮಾಡದ್ದನ್ನು ಮೋದಿ ಮಾಡಿ ತೋರಿಸಿದ್ದಾರೆ'

ಅಷ್ಟರಲ್ಲಿ ಸುತ್ತುವರೆದಿದ್ದ ಮುಖಂಡರ ಸಮಯ ಪ್ರಜ್ಞೆಯಿಂದ ತಕ್ಷಣವೇ ಸಚಿವರ ಕೈ ಹಿಡಿದು ರಕ್ಷಣೆ ಮಾಡಿದ್ದರಿಂದ ಯಾವುದೇ ಅಹಿತರ ಘಟನೆ ಜರುಗಿಲ್ಲ. ಈ ಘಟನೆಯಿಂದ ಸ್ಥಳದಲ್ಲಿದ್ದ ಮುಖಂಡರಿಗೆ ಹಾಗೂ ಕಾರ್ಯಕರ್ತರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಡಿಟೆಕ್ಷನ್  ಸೆಂಟರ್ ಸುದ್ದಿ ತಪ್ಪು ಕಾಂಗ್ರೆಸ್ ಮುಖಂಡರೊಬ್ಬರು ಮುಸ್ಲಿಮರನ್ನು ಕೂಡಿಹಾಕಲು ಡಿಟೆಕ್ಷನ್  ಸೆಂಟರ್ ತೆಗೆದಿದ್ದಾರೆ ಎಂದು ಸುಳ್ಳು ಹೇಳುವ ಮೂಲಕ ದೇಶದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. ಆದರೆ 2019 ರಲ್ಲಿ ಅಂದಿನ ಪ್ರಧಾನಿ ಡಾ. ಮನಹೋಹನ್ ಸಿಂಗ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಸ್ಸಾಂನಲ್ಲಿ ಡಿಟೆಕ್ಷನ್ ಸೆಂಟರ್ ತೆರೆದಿದ್ದರು. ಈ ಕುರಿತು ಸತ್ಯಾಸತ್ಯತೆ ಹೊರಬರುತ್ತಿದ್ದಂತೆ ರಾಹುಲ್ ಗಾಂಧಿ ತಲೆಮರೆಸಿಕೊಂಡು ದೇಶಬಿಟ್ಟು ಹೋಗಿದ್ದಾರೆ ಎಂದು ಜರಿದರು.