ರಾಜ್ಯದಲ್ಲಿ ಸ್ಥಿರ ಸರ್ಕಾರದ ಆಡಳಿತ: ಬಸವರಾಜ ಬೊಮ್ಮಾಯಿ
ಚುನಾವಣೆಯಲ್ಲಿ ಗೆಲ್ಲುವದು ಅವಶ್ಯ ಮತ್ತು ಅನಿವಾರ್ಯವಾಗಿತ್ತು| ರಾಣಿಬೆನ್ನೂರಿನಲ್ಲಿ 5 ದಶಕಗಳಿಂದ ಗೆಲ್ಲುತ್ತಾ ಬಂದಿರುವ ಕಾಂಗ್ರೆಸನ್ನು ಒಬ್ಬ ಯುವಕ ನಿಲ್ಲಿಸಿ ಸೋಲಿಸಲಾಗಿದೆ| ನನ್ನ ಮೇಲೆ ವಿಶ್ವಾಸವಿಟ್ಟು ಈ ಜವಾಬ್ದಾರಿಯನ್ನು ಯಡಿಯೂರಪ್ಪನವರು ನನಗೆ ನೀಡಿದ್ದರು ಎಂದ ಬೊಮ್ಮಾಯಿ| ರಾಣೆಬೆನ್ನೂರಿನಲ್ಲಿ ಗೆದ್ದು ಅಲ್ಲಿ ಹೊಸ ರಾಜಕೀಯ ಮನ್ವಂತರ ಮಾಡಲಾಗಿದೆ|
ಶಿಗ್ಗಾಂವಿ(ಡಿ.12): ಇಂದು ಕರ್ನಾಟಕದಲ್ಲಿ ಒಂದು ಸ್ಥಿರ ಸರ್ಕಾರ ಆಡಳಿತಕ್ಕೆ ಬಂದಿದೆ, ಒಳ್ಳೆಯ ಆಡಳಿತ ನೀಡಲು ಎಲ್ಲ ತಯಾರಿ ನಡೆದಿದೆ. ದಣಿವರಿಯದ ನಾಯಕ ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರ ಸಹಾಯ ಹಾಗೂ ನೇತೃತ್ವದಲ್ಲಿ ಈ ಕ್ಷೇತ್ರದಲ್ಲಿ ಈ ಹಿಂದೆ 10 ವರ್ಷದಲ್ಲಿ ಆಗದಂತಹ ಅಭಿವೃದ್ಧಿ ಕಾರ್ಯಗಳನ್ನು 2020ರ ಒಂದೇ ವರ್ಷದಲ್ಲಿ ಆಗುತ್ತವೆ ಈ ವರ್ಷ ದಾಖಲೆಯ ವರ್ಷವಾಗುತ್ತದೆ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹರ್ಷ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಪುರಸಭೆ ವೃತ್ತದಲ್ಲಿ ತಾಲೂಕು ಭಾಜಪ ವತಿಯಿಂದ ಹಮ್ಮಿಕೊಂಡ ಅದ್ಧೂರಿ ಸ್ವಾಗತ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಅವರು, ನಮ್ಮ ಸರ್ಕಾರಕ್ಕೆ ಪೂರ್ಣ ಪ್ರಮಾಣದ ಬಹುಮತಕ್ಕೆ ಈ
ಚುನಾವಣೆಯಲ್ಲಿ ಗೆಲ್ಲುವದು ಅವಶ್ಯ ಮತ್ತು ಅನಿವಾರ್ಯವಾಗಿತ್ತು, ರಾಣಿಬೆನ್ನೂರಿನಲ್ಲಿ 5 ದಶಕಗಳಿಂದ ಗೆಲ್ಲುತ್ತಾ ಬಂದಿರುವ ಕಾಂಗ್ರೆಸನ್ನು ಒಬ್ಬ ಯುವಕ ನಿಲ್ಲಿಸಿ ಸೋಲಿಸಲಾಗಿದೆ, ಗುರುತರವಾದ ಜವಾಬ್ದಾರಿಯನ್ನು ನನ್ನ ಹೆಗಲಿಗೆ ಕೊಟ್ಟಿದ್ದರು, ಎಲ್ಲಿ ಅಸಾಧ್ಯವಿದೆಯೋ ಅಲ್ಲಿ ನೀನು ಸಾಧ್ಯ ಮಾಡಿ ತೊರಿಸುತ್ತಿಯಾ ಎಂದು ನನ್ನ ಮೇಲೆ ವಿಶ್ವಾಸವಿಟ್ಟು ಈ ಜವಾಬ್ದಾರಿಯನ್ನು ಯಡಿಯೂರಪ್ಪನವರು ನನಗೆ ನೀಡಿದ್ದರು, ರಾಣೆಬೆನ್ನೂರಿನಲ್ಲಿ ಗೆದ್ದು ಅಲ್ಲಿ ಹೊಸ ರಾಜಕೀಯ ಮನ್ವಂತರ ಮಾಡಲಾಗಿದೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ರಾಜ್ಯದಲ್ಲಿ ದೊಡ್ಡ ಹುದ್ದೆಗಳನ್ನು ನಿಭಾಯಿಸುವುದು ಹಾಗೂ ಚುನಾವಣೆಯಲ್ಲಿ ಗೆಲವು ಸಾಧಿಸಲು ಶಕ್ತಿ ಬಂದಿದ್ದು ಶಿಗ್ಗಾವಿ ಸವಣೂರ ಜನತೆಯಿಂದ, ಎಲ್ಲ ಶ್ರೇಯಸ್ಸು ನನ್ನ ಕ್ಷೇತ್ರದ ಜನತೆಗೆ ಸಲ್ಲುತ್ತದೆ, ನನ್ನನ್ನು ಪ್ರೀತಿ ವಿಶ್ವಾಸದಿಂದ ಬೆಳೆಸಿದ್ದರಿಂದ ಕಷ್ಟ ಕಾಲದಲ್ಲಿ ಎತ್ತಿಹಿಡಿದ್ದಿರಿ, ನನ್ನ ವಿರುದ್ಧ ಅಪಪ್ರಚಾರ ಮಾಡಿದವರಿಗೆ ತಕ್ಕ ಉತ್ತರ ಕೊಟ್ಟಿದ್ದಿರಿ, ಬೆನ್ನುತಟ್ಟಿ ಹುರಿದುಂಬಿಸಿದ್ದಿರಿ, ಇಡಿ ಕರ್ನಾಟಕವನ್ನು ನಿಯಂತ್ರಣ ತೆಗೆದುಕೊಳ್ಳುವ ಶಕ್ತಿ ನನ್ನ ಕ್ಷೇತ್ರದ ಜನತೆ ನನಗೆ ಕೊಟ್ಟಿದೆ, ನಾನು ಕ್ಷೇತ್ರದ ಜನತೆಯ ಋಣದಲ್ಲಿದ್ದೇನೆ ನಾನು ಎಷ್ಟೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿದರೂ ಆ ಋಣವನ್ನು ತೀರಿಸಲು ಆಗುವುದಿಲ್ಲ, ದೊಡ್ಡ ಜವಾಬ್ದಾರಿ ಹೊತ್ತಿರುವ ಸಂದರ್ಭದಲ್ಲಿ ರಾಜ್ಯ ಮಟ್ಟದಲ್ಲಿ ನನ್ನ ಸಮಯವನ್ನು ಕಳೆಯುವದು ಅನಿವಾರ್ಯವಾಗಿರುವುದರಿಂದ ಈ ಕ್ಷೇತ್ರದ ಅಭಿವೃದ್ಧಿ ಮರೆಯುವುದಿಲ್ಲ, ಜನತೆಯ ದುಃಖ ದುಮ್ಮಾನಗಳನ್ನು ಮರೆಯುವುದಿಲ್ಲ, ನನ್ನ ಶಕ್ತಿ ಈ ಕ್ಷೇತ್ರದ ಕಟ್ಟಕಡೆಯ ವ್ಯಕ್ತಿಯ ಬೆಳವಣಿಗೆಗೆ ಇರುತ್ತದೆ ಎಂದು ಹೇಳಿದರು.
ಈ ನಾಡನ್ನು ಸುಭಿಕ್ಷೆಯ ನಾಡನ್ನಾಗಿ ಮಾಡಬೇಕಿದೆ, ಈ ದೇಶದಲ್ಲಿ ಬದಲಾವಣೆ ಯುವಕರಿಂದ ಮಾತ್ರ ಸಾಧ್ಯ, ಈ ತಾಲೂಕನ್ನು ಜಿಲ್ಲೆಯಲ್ಲಿಯೇ ಮಾದರಿ ಮಾಡಿದ್ದೇನೆ ರಾಜ್ಯದಲ್ಲಿಯೂ ಮಾದರಿ ತಾಲೂಕನ್ನಾಗಿ ಮಾಡುತ್ತೆನೆ. ರಾಣಿಬೆನ್ನೂರಿನ ವಿಜಯ ನನ್ನ ಶಕ್ತಿಯನ್ನು ಇಮ್ಮಡಿ ಮಾಡಿದೆ ಇನ್ನೂ ಮೂರುವರೆ ವರ್ಷ ರಾಜಾಹುಲಿ ಆಡಳಿತವಿರುತ್ತದೆ ನಿಮ್ಮ ಸಂಪೂರ್ಣ ರಕ್ಷಣೆ ಮತ್ತು ಅಭಿವೃದ್ಧಿ ಮಾಡುವ ಗುರಿ ನಮ್ಮದು ಎಂದರು.
ರಾಣಿಬೆನ್ನೂರ ನೂತನ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ದೇಶಕ್ಕೆ ಅಮಿತ್ ಶಾ ಅವರು ಚಾಣಾಕ್ಷರಾದರೇ ಕರ್ನಾಟಕಕ್ಕೆ ಬಸವರಾಜ ಬೊಮ್ಮಾಯಿ ಚಾಣಾಕ್ಷ, ನಾನು ಒಬ್ಬ ಸಾಮಾನ್ಯ ಕಾರ್ಯಕರ್ತ ನನ್ನನ್ನು ಶಾಸಕನನ್ನಾಗಿ ಮಾಡಿದ ಬೊಮ್ಮಾಯಿ ಅಣ್ಣನಿಗೆ ಮಾನಸ ಸುಪುತ್ರನಾಗಿ ಕಾರ್ಯ ನಿರ್ವಹಿಸುತ್ತೆನೆ ಅವರು ತೊರಿಸುವ ಕೆಲಸವನ್ನು ತಲೆ ಮೇಲೆ ಇಟ್ಟುಕೊಂಡು ಕಾರ್ಯ ನಿರ್ವಹಿಸುತ್ತೆನೆ, 15 ದಿನಗಳ ಕಾಲ ಕ್ಷೇತ್ರವನ್ನು ಬಿಟ್ಟು ಬಂದು ಜೊತೆಗೆ ಕ್ಷೇತ್ರದ ಜನರನ್ನು ಕರೆತಂದು ಸಹಾಯ ಸಹಕಾರಿ ನೀಡಿ ನನ್ನನ್ನು ಶಾಸಕನನ್ನಾಗಿ ಮಾಡಿದವರು ಬೊಮ್ಮಾಯಿಯವರು, ಗೃಹ ಮಂತ್ರಿ ಎನ್ನುವುದನ್ನು ಮರೆತು ರಾತ್ರಿ ೩ಗಂಟೆಗಳ ವರೆಗೆ ಕೆಲಸ ಮಾಡಿದ್ದಾರೆ, ಬೊಮ್ಮಾಯಿವರು ನುಡಿದಂತೆ ನಡೆಯುತ್ತಾರೆ ಎನ್ನುವದಕ್ಕೆ ನಾನೇ ಸಾಕ್ಷಿ, ನೀರಾವರಿ ಸಚಿವರಾಗಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿದವರು, ಶಿಗ್ಗಾವಿ-ಸವಣೂರ ಜನತೆ ಬೊಮ್ಮಾಯಿವರ ಜತೆಗೆ ತಮ್ಮ ಸ್ವಂತ ಖರ್ಚಿನಲ್ಲಿ ಬಂದು ನನ್ನನ್ನು ಗೆಲ್ಲಿಸಿದ್ದಾರೆ ಅವರಿಗೆ ನಾನು ಅಭಾರಿಯಾಗಿದ್ದಾನೆ, ಸಾಮಾನ್ಯ ಮನುಷ್ಯನನ್ನು ಶಾಸಕನನ್ನಾಗಿ ಮಾಡಿದ ಬೊಮ್ಮಾಯಿಯರನ್ನು ಇಂದು ಇಡಿ ರಾಜ್ಯದ ಜನತೆ ನೊಡುತ್ತಿದ್ದಾರೆ, ರಾಣಿಬೆನ್ನೂರಿನ ಜನತೆ ಬೊಮ್ಮಾಯಿಯವರ ಮೇಲೆ ವಿಶ್ವಾಸವಿಟ್ಟು ನನ್ನನ್ನು ಗೆಲ್ಲಿಸಿದ್ದಾರೆ ಅವರ ವಿಶ್ವಾಸವನ್ನು ಉಳಿಸಿಕೊಂಡು ಹೊಗುತ್ತೆನೆ ಎಂದರು.
ಕಾರ್ಯಕ್ರಮದಲ್ಲಿ ಭಾಜಪ ತಾಲೂಕು ಅಧ್ಯಕ್ಷ ದೇವಣ್ಣ ಚಾಕಲಬ್ಬಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಮ್ಯಾಗೇರಿ, ಪುರಸಭೆ ಸದಸ್ಯ ಶ್ರೀಕಾಂತ ಬುಳ್ಳಕ್ಕನವರ, ಭೋವಿ ಸಮಾಜ ತಾಲೂಕು ಅಧ್ಯಕ್ಷ ಅರ್ಜುನ ಹಂಚಿನಮನಿ, ಡಾ. ಮಲ್ಲೇಶಪ್ಪ ಹರಿಜನ ಸೇರಿದಂತೆ ತಾಲೂಕಿನ ಭಾಜಪ ಮುಖಂಡರು ಪದಾಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು, ಬೊಮ್ಮಾಯಿ ಅಭಿಮಾನಿ ಬಳಗದವರು ಸೇರಿದಂತೆ ಅಪಾರ ಜನಸ್ತೋಮ ಸ್ವಾಗತ ಕಾರ್ಯಕ್ರಮದಲ್ಲ ಭಾಗಿಯಾಗಿದ್ದರು. ಅದ್ಧೂರಿ ಸ್ವಾಗತ ಕಾರ್ಯಕ್ರಮದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ
ಬೊಮ್ಮಾಯಿಗೆ ರಾಣಿಬೆನ್ನೂರು ಗೆಲುವಿನ ಶ್ರೇಯಸ್ಸು
ಸಾಮಾನ್ಯ ಕಾರ್ಯಕರ್ತನನ್ನು ಶಾಸಕನನ್ನಾಗಿ ಮಾಡುವುದು ಸಾಮಾನ್ಯ ಕೆಲಸವಲ್ಲ. ಅದರ ಶ್ರೇಯಸ್ಸು ಸಂಪೂರ್ಣವಾಗಿ ನಮ್ಮ ಉತ್ತರ ಕರ್ನಾಟಕದ ರಾಜಾಹುಲಿ ಎಂದೇ ಬಿಂಬಿತವಾದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲುತ್ತದೆ ಎಂದು ರಾಣಿಬೆನ್ನೂರು ನೂತನ ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ಹಿರೇಕೆರೂರು ಮತ್ತು ರಾಣಿಬೆನ್ನೂರು ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಪಟ್ಟಣದ ಸವಣೂರು ವೃತ್ತದಲ್ಲಿ ಸ್ವಾಗತ ಕೋರಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಗೃಹಮಂತ್ರಿಯಾಗಿದ್ದರೂ ರಾಣಿಬೆನ್ನೂರು ಕ್ಷೇತ್ರದಲ್ಲಿ ಹದಿನೈದು ದಿನ ಹಗಲಿರುಳು ಶ್ರಮಿಸಿದರು. ಕ್ಷೇತ್ರದ ಮತದಾರರ ಮನೆ ಮನೆಗೆ ತೆರಳಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡರು. ಅವರ ಈ ಋಣವನ್ನು ಎಂದಿಗೂ ತೀರಿಸಲು ಆಗುವುದಿಲ್ಲ. ಶಿಗ್ಗಾಂವಿಯ ಯುವಪಡೆ ಸಹ ನನ್ನ ಗೆಲುವಿಗೆ ಶ್ರಮಿಸಿದೆ. ಆದ್ದರಿಂದ ಶಿಗ್ಗಾಂವಿ ಕ್ಷೇತ್ರದ ಜನರನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.
ನನ್ನ ಕ್ಷೇತ್ರದ ಜನತೆ ನನ್ನ ಬಗ್ಗೆ ವಿಶ್ವಾಸವಿಟ್ಟಿದ್ದಾರೆ. ಇಲ್ಲಿಯ ಅಭಿವೃದ್ಧಿ ಕನಸು ಕಂಡಿದ್ದಾರೆ. ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಆಡಳಿತ ಇನ್ನೂ ಮೂರುವರೆ ವರ್ಷ ರಾಜ್ಯದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯ ನಡೆಸಲಿದೆ. ಮಾದರಿ ರಾಜ್ಯ ಮಾಡಲು ರೂಪುರೇಷೆ ತಯಾರಿಸಲಾಗುತ್ತಿದೆ ಎಂದರು.
ವಿಜಯೋತ್ಸವ ಸಂದರ್ಭದಲ್ಲಿ ದೇವಣ್ಣಾ ಚಾಕಲಬ್ಬಿ, ಶಿವಾನಂದ ಮ್ಯಾಗೇರಿ, ಅರ್ಜುನ ಹಂಚಿನಮನಿ, ಶ್ರೀಕಾಂತ ಬುಳ್ಳಕ್ಕನವರ, ಸುಭಾಷ ಚವ್ಹಾಣ, ದಯಾನಂದ ಅಕ್ಕಿ, ಸಿದ್ಧಾರ್ಥಗೌಡ ಪಾಟೀಲ, ರಮೇಶ ವನಹಳ್ಳಿ, ಆನಂದ ಸುಭೇದಾರ, ಮಂಜುನಾಥ ಬ್ಯಾಹಟ್ಟಿ, ಪ್ರತೀಕ ಕೊಳೆಕರ, ಗುರು ಅಣ್ಣಿಗೇರಿ, ಸಂಜನಾ ರಾಯ್ಕರ್, ಭಾರತಿ ಪುರಾಣಿಕಮಠ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.