ಮೈಸೂರು (ಅ.27):  ಆರ್‌.ಆರ್‌. ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್‌ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಟೀಕಿಸಿದರು.

ಮೈಸೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್‌ ಮಾತನ್ನು ಸಿದ್ದರಾಮಯ್ಯ ಕೇಳುವುದಿಲ್ಲ. ಅವರ ಮಾತಿಗೆ ಹೆಚ್ಚು ಮಹತ್ವ ಕೊಡುವ ಅಗತ್ಯವಿಲ್ಲ ಎಂದರು.

ನಾನು, ಮುನ್ನಿರತ್ನ, ಭೈರತಿ ಬಸವರಾಜು ನಿಷ್ಠಾವಂತ ಕಾರ್ಯಕರ್ತರು. ನಾವು ಪಕ್ಷ ತೊರೆಯುವಾಗ ಇವರೆಲ್ಲಾ ಎಲ್ಲಿಗೆ ಹೋಗಿದ್ದರು. ಆಗ ಎಲ್ಲ ವಿಚಾರವನ್ನು ನಾವು ಇವರಿಗೆ ತಿಳಿಸಿರಲಿಲ್ಲವೇ? ಆರ್‌.ಆರ್‌. ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಕಾರ್ಯಕರ್ತರೇ ಇಲ್ಲ. ಎಲ್ಲರೂ ಮುನ್ನಿರತ್ನ ಹಿಂದೆ ಬಂದಿದ್ದಾರೆ ಎಂದು ಅವರು ಹೇಳಿದರು.

'ಸಿದ್ದರಾಮಯ್ಯ ಧಮ್‌, ಆಡಳಿತ ಎರಡನ್ನೂ ನೋಡಿದ್ದೇನೆ' ...

ಕಾಂಗ್ರೆಸ್‌ನವರು ಹೊರಗಿನಿಂದ ಜನರನ್ನು ಕರೆ ತಂದು ಭಿತ್ತಿಪತ್ರ ಹಂಚಿಸುತ್ತಿದ್ದಾರೆ. ಇದನ್ನೇ ನಮ್ಮ ಅಭ್ಯರ್ಥಿ ಭಯದ ವಾತಾವರಣ ಇದೆ ಎಂದು ಹೇಳಿರುವುದು. ಮುನ್ನಿರತ್ನ ಕಳೆದ ಆರು ವರ್ಷಗಳಲ್ಲಿ ಸಾಕಷ್ಟುಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅಭಿವೃದ್ಧಿ ವಿಚಾರ ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೇವೆ. ಹೀಗಾಗಿ, ನಮ್ಮ ಅಭ್ಯರ್ಥಿ ನೂರಕ್ಕೆ ನೂರರಷ್ಟುಗೆದ್ದೇ ಗೆಲ್ಲುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.