ಧಾರವಾಡ(ಏ.29): ಇಲ್ಲಿನ ಜೆಎಸ್‌ಎಸ್‌ ಸೆಂಟ್ರಲ್‌ ಶಾಲೆಯ 10ನೇ ತರಗತಿ ವಿದ್ಯಾರ್ಥಿಯೊಬ್ಬ ‘ಕೋವಿಶೀಲ್ಡ್‌’ ಎಂಬ ಆ್ಯಪ್‌ ರಚಿಸಿ ಗಮನ ಸೆಳೆದಿದ್ದಾನೆ.

ಮನೋಜ ಶಿರಹಟ್ಟಿ ಎಂಬಾತನೇ ಈ ಆ್ಯಪ್‌ ರಚಿಸಿದ್ದು, ಯಾರು ಈ ಆ್ಯಪ್‌ ಅಳವಡಿಸಿಕೊಂಡು ಕ್ಯೂಆರ್‌ ಕೋಡ್‌ ಮೂಲಕ ತಾವು ಹೋದ ಸ್ಥಳದಲ್ಲಿ ಕ್ಯೂಆರ್‌ ಕೋಡ್‌ ಬಳಸಿದರೆ ಹೋದ ವ್ಯಕ್ತಿಯ ಟ್ರಾವೆಲ್‌ ಹಿಸ್ಟರಿ ಕಂಡು ಹಿಡಿಯಬಹುದು. ಆತ ಎಲ್ಲಿಗೆ ಹೋಗಿದ್ದ, ಆತನೊಂದಿಗೆ ಸಂಪರ್ಕ ಹೊಂದಿರುವವರು ಹಾಗೂ ಆತ ಭೇಟಿ ನೀಡಿದ ಸ್ಥಳಗಳ ಕುರಿತು ಮಾಹಿತಿಯನ್ನು ಪತ್ತೆ ಹಚ್ಚಬಹುದು ಎನ್ನುತ್ತಾನೆ ಮನೋಜ್‌.
ಆ್ಯಪ್‌ ಸಿದ್ಧಪಡಿಸುವ ಕುರಿತು ಆನ್‌ಲೈನ್‌ನಲ್ಲಿ ತರಬೇತಿ ಪಡೆಯುತ್ತಿದ್ದಾಗ, ಕೊರೋನಾ ವೈರಸ್‌ ಹರಡುವಿಕೆ ತಗಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದ ಲಾಕ್‌ಡೌನ್‌ ಅವಧಿಯನ್ನು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಆ್ಯಪ್‌ ಆವಿಷ್ಕಾರ ಚಿಂತಿಸಿದ್ದನು. ಅದರಂತೆ 2 ವಾರಗಳಲ್ಲಿ ಈ ಆ್ಯಪ್‌ ರಚಿಸಿದ್ದಾನೆ.

ಬಡವರ ಪಾಲಿಗೆ ಇವರೇ ದೇವರು: ಹಣ ಪಡೆಯದೆ ವೈದ್ಯನಿಂದ ಉಚಿತ ಚಿಕಿತ್ಸೆ

ಸಾರ್ವಜನಿಕರು ಸೇರುವ ಸ್ಥಳಗಳಾದ ಆಸ್ಪತ್ರೆ, ಅಂಗಡಿ, ಕಚೇರಿ ಸೇರಿದಂತೆ ಇತರ ಪ್ರದೇಶಗಳಲ್ಲಿ ‘ಕೋವಿಶೀಲ್ಡ್‌’ ಆ್ಯಪ್‌ನ ಕ್ಯೂಆರ್‌ ಕೋಡ್‌ ಅಂಟಿಸಬೇಕು. ಈ ಕೋಡ್‌ ಸ್ಕ್ಯಾನ್‌ ಮಾಡಿದಾಗ ವ್ಯಕ್ತಿಯ ಮಾಹಿತಿ ಸಂಗ್ರಹವಾಗಿ ಆ್ಯಪ್‌ ಅಡ್ಮಿನ್‌ಗೆ ಲಭ್ಯವಾಗಲಿದೆ. ಹೀಗೆ ಸೋಂಕಿತ ವ್ಯಕ್ತಿ ಯಾವ ಪ್ರದೇಶಗಳಲ್ಲಿ, ಯಾವ ದಿನಾಂಕದಂದು ಓಡಾಡಿದ್ದಾನೆ ಎಂಬ ಎಲ್ಲ ಮಾಹಿತಿ ಲಭ್ಯವಾಗಲಿದೆ. ಪ್ರಾಯೋಗಿಕವಾಗಿ ಸಿದ್ಧಪಡಿಸಿ ಈ ಆ್ಯಪ್‌ನ ಕಾರ್ಯವೈಖರಿ ಕುರಿತ ಮಾಹಿತಿಯನ್ನು ಪ್ರಧಾನ ಮಂತ್ರಿ ಕಚೇರಿಗೆ ಕಳಿಸಲಾಗಿದೆ.

ಆ್ಯಪ್‌ ಬಳಕೆ ಮಾಡುವ ಕುರಿತು ಹಾಗೂ ಅಭಿವೃದ್ಧಿ ಮಾಡುವ ಕುರಿತು ಪ್ರಧಾನಮಂತ್ರಿ ಕಚೇರಿಗೆ ಮಾಹಿತಿ ನೀಡಲಾಗಿದೆ. ಆದರೆ ಅವರಿಂದ ಈವರೆಗೂ ಯಾವುದೇ ಪ್ರತ್ಯುತ್ತರ ಬಂದಿಲ್ಲ ಎಂದು ಮನೋಜ್‌ ತಂದೆ ಅರುಣಕುಮಾರ ತಿಳಿಸಿದರು.