Asianet Suvarna News Asianet Suvarna News

ಬಡವರ ಪಾಲಿಗೆ ಇವರೇ ದೇವರು: ಹಣ ಪಡೆಯದೆ ವೈದ್ಯನಿಂದ ಉಚಿತ ಚಿಕಿತ್ಸೆ

ಲಾಕ್‌ ಡೌನ್‌ ವೇಳೆ ವೈದ್ಯನಿಂದ ಉಚಿತ ಸೇವೆ| ಆಪರೇಶನ್‌, ಕೆಲವರಿಗೆ ಉಚಿತವಾಗಿ ಔಷಧ ಒದಗಿಸಿದ್ದಾರೆ ಡಾ. ಮಹಾಂತೇಶ ಎಸ್‌ ಹಳೇಮನಿ|ತಿಂಗಳಿಂದ ಹಣ ಪಡೆಯದೆ ಚಿಕಿತ್ಸೆ ನೀಡುತ್ತಿರುವ ರೈತನ ಮಗ| ಗಂಭೀರ ಪ್ರಕರಣಗಳನ್ನು ವಿವೇಕಾನಂದ ಆಸ್ಪತ್ರೆ ಹಾಗೂ ಸೆಕ್ಯುರ್‌ ಹಾಸ್ಪಿಟಲ್‌ನಲ್ಲಿ ಕನಿಷ್ಠ ವೆಚ್ಚದಡಿ ಆಪರೇಶನ್‌ ಮಾಡಿಸಿದ ವೈದ್ಯ|

Dr Mahantesh S Halemani Free Treatment to Poor Peoople in Hubballi due to LockDown
Author
Bengaluru, First Published Apr 29, 2020, 9:31 AM IST

ಮಯೂರ ಹೆಗಡೆ

ಹುಬ್ಬಳ್ಳಿ(ಏ.29):  ಕೊರೋನಾ ಲಾಕ್‌ಡೌನ್‌ ಆರಂಭದಿಂದ ಇಲ್ಲೊಬ್ಬ ವೈದ್ಯರು ಉಚಿತ ಸೇವೆ ನೀಡುತ್ತಿದ್ದಾರೆ. ಆಪರೇಶನ್‌ ಕೂಡ ಒಂದು ರು. ತೆಗೆದುಕೊಳ್ಳದೆ ನಿರ್ವಹಿಸಿದ ಇವರು, ಕೆಲ ಬಡವರಿಗೆ ಔಷಧವನ್ನೂ ಒದಗಿಸಿದ್ದಾರೆ.

ಎಲುಬು ಮತ್ತು ಕೀಲು ತಜ್ಞರಾದ ಡಾ. ಮಹಾಂತೇಶ ಎಸ್‌. ಹಳೇಮನಿ ಕಳೆದ ಒಂದು ತಿಂಗಳಿಂದ ಈ ಪುಣ್ಯದ ಕಾರ್ಯದಲ್ಲಿ ತೊಡಗಿದ್ದಾರೆ. ನಗರದ ಹಳೆ ಕೋರ್ಟ್‌ ವೃತ್ತದ ಬಳಿಯ ಕುಂದಗೋಳ ಕಾಂಪ್ಲೆಕ್ಸ್‌ನಲ್ಲಿ ಇವರ ಆಸ್ಪತ್ರೆಯಿದೆ. ಲಾಕ್‌ಡೌನ್‌ ಬಳಿಕ ಪರವಾನಗಿ ಪಡೆದು ಬೆಳಗ್ಗೆ 6.30ರಿಂದ 10.30ರವರೆಗೆ ಉಚಿತ ಸೇವೆ ಒದಗಿಸುತ್ತಿದ್ದಾರೆ. ಇವರ ಪತ್ನಿ ಡಾ. ಸುಧಾ ಕೂಡ ಈ ಉಚಿತ ಸೇವೆಯಲ್ಲಿ ಸಾಥ್‌ ಕೊಟ್ಟಿದ್ದಾರೆ.

ಅಜ್ಜಿ ಮನೆಗೆ ಬಂದು ಕೊರೋನಾ ಸೋಂಕು ಅಂಟಿಸಿಕೊಂಡ ಬಾಲಕಿ

ಪ್ರತಿದಿನ 10ರಿಂದ 15 ರೋಗಿಗಳು ಅಂದರೆ ಬಿದ್ದು ಬಂದವರು, ಅಪಘಾತಕ್ಕೆ ಒಳಗಾದವರನ್ನು ನೋಡುತ್ತಿರುವ ಡಾ. ಮಹಾಂತೇಶ, ಇಲ್ಲಿವರೆಗೆ 150ಕ್ಕೂ ಅಧಿಕ ಜನತೆಗೆ ಉಚಿತವಾಗಿ ಚಿಕಿತ್ಸೆ ನೀಡಿದ್ದಾರೆ. ನಾಲ್ಕು-ಐದು ಆಪರೇಶನ್‌ಗಳನ್ನು ಉಚಿತವಾಗಿ ನಿರ್ವಹಣೆ ಮಾಡಿದ್ದು, ಗಂಭೀರ ಪ್ರಕರಣಗಳನ್ನು ವಿವೇಕಾನಂದ ಆಸ್ಪತ್ರೆ ಹಾಗೂ ಸೆಕ್ಯುರ್‌ ಹಾಸ್ಪಿಟಲ್‌ನಲ್ಲಿ ಕನಿಷ್ಠ ವೆಚ್ಚದಡಿ ಆಪರೇಶನ್‌ ಮಾಡಿದ್ದಾರೆ. ಔಷಧ ತೆಗೆದುಕೊಳ್ಳಲು ಸಲಹೆ ನೀಡುವ ಇವರು, ಕೆಲ ಬಡವರಿಗೆ ಅದನ್ನೂ ಉಚಿತವಾಗಿ ಒದಗಿಸಿದ್ದಾರೆ.

ಆಸ್ಪತ್ರೆಯಲ್ಲಿ ಒಟ್ಟು 7 ಸಿಬ್ಬಂದಿ ಇದ್ದು ಅವರನ್ನು 16 ದಿನಕ್ಕೊಮ್ಮೆ ಮೂವರಂತೆ ಶಿಫ್ಟ್‌ ಮೂಲಕ ಬರಹೇಳಿ ತಮ್ಮ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ವೇಳೆ ಹಾವೇರಿ ಕಾಗಿನೆಲೆಯಿಂದ ಕೂಡ ಜನರು ಇವರ ಬಳಿ ಚಿಕಿತ್ಸೆ ಪಡೆಯಲು ಬಂದಿದ್ದಿದೆ. ಹೀಗೆ ಬರುವಾಗ ಪೊಲೀಸರಿಂದ ಥಳಿತಕ್ಕೂ ಒಳಗಾಗಿದ್ದಾರೆ. ಡಾ. ಮಹಾಂತೇಶ ಪ್ರತಿ ಭಾನುವಾರ ವೈದ್ಯರಿಲ್ಲದ ಇಂಗಳಗಿಗೆ ತೆರಳಿ ಉಚಿತ ತಪಾಸಣೆ, ಚಿಕಿತ್ಸೆ ನೀಡುತ್ತಿದ್ದರು. ಆದರೆ ಲಾಕ್‌ಡೌನ್‌ ಕಾರಣದಿಂದ ಹೋಗಲು ಸಾಧ್ಯವಾಗದ ಕಾರಣ ಅಲ್ಲಿನವರು ಪ್ರತಿದಿನ ಕಾರ್‌ ವ್ಯವಸ್ಥೆ ಮಾಡಿಕೊಂಡು ಇವರ ಬಳಿ ಚಿಕಿತ್ಸೆಗೆ ಬರುತ್ತಿದ್ದಾರೆ.

ರೈತನ ಮಗ..

ಡಾ. ಮಹಾಂತೇಶ ಅವರು ಹುಬ್ಬಳ್ಳಿ ಇಂಗಳಗಿ ಗ್ರಾಮದವರು. ರೈತನ ಮಗನಾಗಿ ಕಷ್ಟದಲ್ಲಿ ಬೆಳೆದು ಈ ಹಂತ ತಲುಪಿದ್ದಾರೆ. 2008ರಿಂದ 2013ರವರೆಗೆ ದೆಹಲಿಯಲ್ಲಿ ಆಸ್ಪತ್ರೆಯೊಂದರ ಟ್ರೂಮಾಕೇರ್‌ ಸೆಂಟರ್‌ನಲ್ಲಿ ಕಾರ್ಯನಿರ್ವಹಿಸಿ ತಮ್ಮೂರಲ್ಲಿ ವೈದ್ಯಕೀಯ ಸೇವೆ ಮಾಡಲು 2013ಕ್ಕೆ ಹುಬ್ಬಳ್ಳಿಗೆ ಬಂದು ಪ್ರಾಕ್ಟೀಸ್‌ ಆರಂಭಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಡಾ. ಮಹಾಂತೇಶ ಎಸ್‌ ಹಳೇಮನಿ ಅವರು, ನಾವು ವೈದ್ಯರಾಗುವ ಮುನ್ನ ಪ್ರತಿಜ್ಞೆ ಸ್ವೀಕಾರ ಮಾಡಿರುತ್ತೇವೆ. ಇಂತಹ ವೇಳೆಯಲ್ಲೇ ನಮ್ಮ ಸೇವೆಯ ನಿಜವಾದ ಅಗತ್ಯ ಇರುತ್ತದೆ. ಅದನ್ನು ಮನಗಂಡು ಕೈಲಾದ ಸಹಾಯ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. 
 

Follow Us:
Download App:
  • android
  • ios