ತಮಿಳುನಾಡಲ್ಲಿ ಶೃಂಗೇರಿಯ ಶಂಕಿತ ನಕ್ಸಲ್ ಶ್ರೀಮತಿ ವಶಕ್ಕೆ
ಕರ್ನಾಟಕ ಮೂಲದ ಶಂಕಿತ ಮಾವೋವಾದಿ ಶ್ರೀಮತಿ ಹಾಗೂ ಆಕೆಯ ಜತೆಗಿದ್ದ ಇನ್ನೊಬ್ಬ ಮಹಿಳೆಯನ್ನು ತಮಿಳುನಾಡಿನಲ್ಲಿ ಅರೆಸ್ಟ್ ಮಾಡಲಾಗಿದೆ.
ಕೊಯಮತ್ತೂರು/ಚಿಕ್ಕಮಗಳೂರು [ಮಾ.12]: ತಮಿಳುನಾಡಿನಲ್ಲಿ ಕರ್ನಾಟಕ ಮೂಲದ ಶಂಕಿತ ಮಾವೋವಾದಿ ಶ್ರೀಮತಿ ಹಾಗೂ ಆಕೆಯ ಜತೆಗಿದ್ದ ಇನ್ನೊಬ್ಬ ಮಹಿಳೆಯನ್ನು ಬುಧವಾರ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಕೇರಳ-ತಮಿಳುನಾಡು ಗಡಿಯ ಅಣೈಕಟ್ಟಿಚೆಕ್‌ಪೋಸ್ಟ್ ಸನಿಹ ಇವರನ್ನು ಬುಧವಾರ ನಸುಕಿನ 5.30ಕ್ಕೆ ವಶಕ್ಕೆ ತೆಗೆದುಕೊಳ್ಳಲಾಗಿದೆ. ಇವರು ದಿನದ ಮೊದಲಿನ ಬಸ್ ಹತ್ತಿ ಕೊಯಮತ್ತೂರಿಗೆ ಆಗಮಿಸುತ್ತಿದ್ದಾಗ ಖಚಿತ ಸುಳಿವಿನ ಮೇರೆಗೆ ಬಸ್ಸನ್ನು ಪೊಲೀಸ್ ಜೀಪ್‌ನಲ್ಲಿ ಬೆನ್ನಟ್ಟಲಾಯಿತು. ಇಬ್ಬರನ್ನೂ ವಶಕ್ಕೆ ಪಡೆಯಲಾಯಿತು ಎಂದು ಉಗ್ರ ಚಟುವಟಿಕೆಗಳ ಮೇಲೆ ನಿಗಾ ಇಡುವ ತಮಿಳುನಾಡಿನ ‘ಕ್ಯು’ ಬ್ರ್ಯಾಂಚ್ ಪೊಲೀಸ್ ಮೂಲಗಳು ಹೇಳಿವೆ.
27 ವರ್ಷದ ಶ್ರೀಮತಿ, ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನವಳು. ಕೇರಳ, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಮಾವೋವಾದಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪೊಲೀಸರಿಗೆ ಬೇಕಾಗಿದ್ದಳು. ಇವರನ್ನು ವಶಕ್ಕೆ ತೆಗೆದುಕೊಂಡಿರುವ ‘ಕ್ಯು’ ಬ್ರ್ಯಾಂಚ್ ಪೊಲೀಸರು, ಕೊಯಮತ್ತೂರಿನಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
ದೇವಾಲಯದಲ್ಲಿ ಮದುವೆಯಾದ್ರೆ ವಧುವಿಗೆ ಸಿಗುತ್ತೆ 55 ಸಾವಿರ.
ಕಳೆದ ವರ್ಷ ನವೆಂಬರ್‌ನಲ್ಲಿ ಕೇರಳ ರಾಜ್ಯದ ಪಾಲಕ್ಕಾಡ್ ಜಿಲ್ಲೆಯ ಅಗಳಿ ಗ್ರಾಮದ ಮಂಚಕಟ್ಟಿಅರಣ್ಯ ಪ್ರದೇಶದಲ್ಲಿ ‘ಥಂಡರ್‌ಬೋಲ್ಟ್’ ನಕ್ಸಲ್ ನಿಗ್ರಹ ಪಡೆ ನಡೆಸಿದ ಎನ್‌ಕೌಂಟರ್‌ನಲ್ಲಿ ಶ್ರೀಮತಿ ಹಾಗೂ ಸುರೇಶ್ ಎಂಬವರು ಹತ್ಯೆಯಾಗಿದ್ದರೆಂದು ಹೇಳಲಾಗಿತ್ತು. ಆದರೆ, ನಂತರದಲ್ಲಿ ನಿರಾಕರಿಸಿ, ಮೃತಪಟ್ಟನಾಲ್ವರು ಕೇರಳ ರಾಜ್ಯದವರು ಎಂದು ಗುರುತು ಪತ್ತೆ ಹಚ್ಚಲಾಗಿತ್ತು.
ಈ ಎನ್‌ಕೌಂಟರ್‌ನಲ್ಲಿ ಶ್ರೀಮತಿ ಮತ್ತು ಇನ್ನೊಬ್ಬ ನಕ್ಸಲ್ ನಾಯಕ ದೀಪಕ್ ಪರಾರಿಯಾಗಿದ್ದರು. ದೀಪಕ್ ಅಣೈಕಟ್ಟಿನ.9ರಂದು ಬಂಧಿತನಾಗಿದ್ದ.
ಮಾಹಿತಿ ಖಚಿತವಾಗಿಲ್ಲ- ಎಸ್‌ಪಿ: ಆದರೆ ಶ್ರೀಮತಿಯನ್ನು ವಶಕ್ಕೆ ತೆಗೆದುಕೊಂಡ ಬಗ್ಗೆ ಖಚಿತವಾಗಿ ಯಾವುದೇ ಮಾಹಿತಿ ಇಲ್ಲ ಎಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠ ಹರೀಶ್ ಪಾಂಡೆ ತಿಳಿಸಿದ್ದಾರೆ.
ಬೆಳಗೋಡಿನವಳು: ಶ್ರೀಮತಿ ಶೃಂಗೇರಿ ತಾಲೂಕಿನ ಬೆಳಗೋಡು ಕೂಡಿಗೆ ಗ್ರಾಮದವಳು. 2008ರಲ್ಲಿ ನಕ್ಸಲ್ ಸಂಘಟನೆಗೆ ಸೇರಿದ್ದು, ಆಕೆಯ ವಿರುದ್ಧ 9 ಪ್ರಕರಣಗಳಿವೆ. ಕೆಲವು ವರ್ಷಗಳಿಂದ ಭೂಗತರಾಗಿದ್ದಾಳೆ.