ಕೆಂಡಪ್ರದಿ

ತಾತ ಮತ್ತು ತಂದೆಯಿಂದ ಬಂದ ವರ ಸಂಗೀತ. ಇದನ್ನೇ ಅನ್ನದ ದಾರಿಯನ್ನಾಗಿ ಮಾಡಿಕೊಳ್ಳುವುದರ ಜೊತೆಗೆ ನಾನೂ ಸಂಗೀತ ಕಲಿಯುವೆ ಎಂದು ಆಸಕ್ತಿಯಿಂದ ಬಂದ ಬಡ ಮಕ್ಕಳಿಗೆ ಉಚಿತವಾಗಿ ಅನ್ನ ನೀಡಿ, ಇರುವುದಕ್ಕೆ ಜಾಗ ನೀಡಿ ಸಂಗೀತವನ್ನೂ ಹೇಳಿಕೊಡುತ್ತಿದ್ದಾರೆ ಕೋಲಾರ ಮೂಲದ ಡಾ. ಎಸ್.ಜಿ. ಬಾಲಸುಬ್ರಮಣಿ ಅವರು. ಹುಟ್ಟಿ ಬೆಳೆದದ್ದೆಲ್ಲಾ ಕೋಲಾರದ ಬಂಗಾರಪೇಟೆ ತಾಲೂಕಿನ ಸೂಲಿಕುಂಟೆ. ತಾತನೂ ಸಂಗೀತ ಕ್ಷೇತ್ರದಲ್ಲಿ ಇದ್ದವರೇ. ತಂದೆ ಎಸ್. ಎಲ್. ಗೋಪಾಲಪ್ಪನವರೂ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ನಾದ ಸ್ವರ ವಾದನ ಮಾಡುತ್ತಿದ್ದವರೇ.

ಕೆನಡಾದಲ್ಲಿ ಕನ್ನಡ ಡಿಂಡಿಮ.. ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್ ಗಾನಸುಧೆ

ಒಂದು ಕಾಲದಲ್ಲಿ ತಂದೆಯ ನಾದಸ್ವರ ವಾದನ ಕೇಳುವುದಕ್ಕಾಗಿ ಸುತ್ತಮುತ್ತಲ ಊರುಗಳಿಂದ ನಡೆದುಕೊಂಡು, ಗಾಡಿ ಕಟ್ಟಿಕೊಂಡು ಬರುತ್ತಿದ್ದ ಜನರನ್ನು ಬಾಲ್ಯದಲ್ಲಿ ಕಣ್ಣಾರೆ ಕಾಣುತ್ತಿದ್ದ ಬಾಲ ಸುಬ್ರಮಣಿ ಅವರಿಗೆ ಆಗಲೇ ನಾನೂ ತಂದೆಯ ರೀತಿಯೇ ಒಳ್ಳೆಯ ಸಂಗೀತಗಾರನಾಗಬೇಕು ಎನಿಸಿದೆ. ಅನ್ನಿಸಿದ್ದೇ ತಡ ಬಾಲ್ಯದಿಂದಲೇ ನಾದಸ್ವರ ಹಿಡಿದು ಅದರಿಂದ ಸಂಗೀತ ಹೊಮ್ಮಿಸಲು ಮುಂದಾಗಿದ್ದಾರೆ. ತಂದೆಯೂ ಮಗನ ಆಸೆಗೆ ನೀರೆರೆಯುವ ಕೆಲಸ ಮಾಡಿದ್ದಾರೆ. 

ಸಂಗೀತ ಕಲಿಯ ಬಯಸಿ ಬರುತ್ತಿದ್ದವರಿಗೆ ನಮ್ಮ ತಂದೆ ಮನೆಯಲ್ಲೇ ಉಳಿದುಕೊಳ್ಳುವ ವ್ಯವಸ್ಥೆ ಮಾಡಿ, ಅವರಿಗೆ ಸಂಗೀತ ಹೇಳಿಕೊಡುತ್ತಿದ್ದರು. ಆ ಕಾರ್ಯವನ್ನು ನಾನು ಈಗ ನನ್ನ ಕೈಲಾದಷ್ಟು ಮಟ್ಟಿಗೆ ಮುಂದುವರೆಸಿಕೊಂಡು ಹೋಗುತ್ತಿದ್ದೇನೆ ಅಷ್ಟೆ. 

ಓದಿದ್ದು ಎಂಟನೇ ಕ್ಲಾಸ್, ಆದರೂ ಗೌರವ ಡಾಕ್ಟರೇಟ್

‘ನಾನಾಗ ಎಂಟನೇ ತರಗತಿಯಲ್ಲಿ ಓದುತ್ತಿದ್ದೆ. ನಾವು ಆರು ಮಂದಿ ಮಕ್ಕಳು, ತಂದೆಯೇ ಎಲ್ಲಾ ಜವಾಬ್ದಾರಿ ಹೊತ್ತುಕೊಂಡು ಮನೆ ನಡೆಸುತ್ತಿದ್ದರು. ಇದಕ್ಕೆ ನನ್ನಮ್ಮ ರತ್ನಮ್ಮನ ನೆರವು ಇತ್ತು. ಆದರೆ ಆಗಲೇ ನಮ್ಮ ತಂದೆಯ ಆರೋಗ್ಯ ಕೆಟ್ಟಿತು. ಒಬ್ಬರೇ ಎಲ್ಲೂ ಹೋಗದಂತಹ ಪರಿಸ್ಥಿತಿಗೆ ಅವರು ಬಂದಾಗ ನಾನು ಅವರೊಂದಿಗೆ ಇದ್ದು, ಅವರಿಗೆ ನನ್ನಿಂದಾದ ಸಹಾಯ ಮಾಡುವ ನಿರ್ಧಾರಕ್ಕೆ ಬಂದೆ. ಎಲ್ಲೇ ಕಾರ್ಯಕ್ರಮ ಇದ್ದರೂ ಅವರೊಂದಿಗೆ ಹೋಗುತ್ತಿದ್ದೆ. ನಾನೂ ನಾದಸ್ವರ ನುಡಿಸುತ್ತಿದ್ದೆ. ಆಗ ಅದು ಅನಿವಾರ್ಯವೂ ಆಗಿತ್ತು. ಅಲ್ಲಿಗೆ ನನ್ನ ವಿದ್ಯಾಭ್ಯಾಸ ಎಂಟನೇ ತರಗತಿಗೆ ಮೊಟಕುಗೊಂಡು ಸಂಗೀತವೇ ನನ್ನ ಉಸಿರಾಯಿತು. ಇಂದು ನನಗೆ ನೆಮ್ಮದಿ ಮತ್ತು ಅನ್ನ ನೀಡುವ ಮಾಧ್ಯಮವೂ ಆಯಿತು’ ಎಂದು ಹೇಳುವ ಬಾಲಸುಬ್ರಮಣಿ ಅವರು ಓದಿದ್ದು ಕಡಿಮೆಯೇ ಆದರೂ ಇಂದು ಅವರಿಗೆ ನ್ಯಾಷನಲ್ ವರ್ಚುವಲ್ ಯೂನಿವರ್ಸಿಟಿ ಫಾರ್ ಪೀಸ್ ಆ್ಯಂಡ್ ಎಜುಕೇಶನ್ ವತಿಯಿಂದ ಗೌರವ ಡಾಕ್ಟರೇಟ್ ದೊರೆತಿದೆ.

ಹೆಂಡತಿ ಸಂಪಾದನೆ ಮನೆಗೆ, ಇವರ ಸಂಪಾದನೆ ಟ್ರಸ್ಟ್‌ಗೆ

ಹದಿನೈದು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಮತ್ತು ವಸತಿ, ಊಟ ನೀಡುವುದು ಸುಲಭದ ಮಾತಲ್ಲ. ಇದಕ್ಕೆ ಒಂದಷ್ಟು ಹಣ ಬೇಕು. ಅದಕ್ಕಿಂತ ಮಿಗಿಲಾಗಿ ಸೇವೆ ಮಾಡಬೇಕು ಎನ್ನುವ ಮನೋಭಾವ ಇರಬೇಕು. ಇದು ಬಾಲಸುಬ್ರಮಣಿ ಅವರ ಕುಟುಂಬಕ್ಕಿದೆ. ಹೆಂಡತಿ ಖಾಸಗಿ ಕಂಪನಿಯೊಂದರಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡು ಬಂದ ಸಂಪಾದನೆಯಲ್ಲಿ ಮನೆ ಬಾಡಿಗೆ, ಮನೆ ನಿರ್ವಹಣೆ ಮಾಡಿದರೆ ಬಾಲಸುಬ್ರಮಣಿ ಅವರು ಬೇರೆ ಬೇರೆ ಕಡೆ
ಕೊಟ್ಟ ಕಾರ್ಯಕ್ರಮದಿಂದ ಬಂದ ಸಂಪೂರ್ಣ ಹಣವನ್ನು ವಿದ್ಯಾರ್ಥಿಗಳ ಸಂಗೀತ ಶಿಕ್ಷಣಕ್ಕಾಗಿ ಬಳಕೆ ಮಾಡುತ್ತಿದ್ದಾರೆ. ಇದಕ್ಕೆ ಇವರ ಮಕ್ಕಳೂ ಜೊತೆಯಾಗಿ ನಿಂತಿದ್ದಾರೆ. ‘ನಾವು ನಮ್ಮ ಮಿತಿಯನ್ನು ಅರಿತುಕೊಂಡು ಸಂಗೀತ ಸೇವೆ ಮಾಡಿಕೊಂಡು ಬಂದಿದ್ದೇವೆ. ಅನ್ನ ಊಟ ಮಾಡಿದರೆ ಬೇಗ ಹಸಿವಾಗುತ್ತದೆ ಎನ್ನುವ ಕಾರಣಕ್ಕೆ ನಾವೆಲ್ಲಾ ಮುದ್ದೆ ಊಟ ಮಾಡುತ್ತೇವೆ. ಹೀಗೆ ಮಾಡುವುದರಿಂದ ನಮ್ಮ ಖರ್ಚು ಕಡಿಮೆಯಾಗುತ್ತದೆ. ಮಕ್ಕಳಿಗೂ ಕಷ್ಟ ಏನೆಂದು ಗೊತ್ತಾಗುತ್ತದೆ’ ಎನ್ನುವ ಬಾಲಸುಬ್ರಮಣಿ ಅವರ ಈ ಕಾರ್ಯ ನಿಜಕ್ಕೂ ಮೆಚ್ಚುಗೆಗೆ ಅರ್ಹ.

'ಸರಿಗಮಪ' ವೇದಿಕೆಯಲ್ಲೇ 'ಐಗಿರಿ ನಂದಿನಿ' ಸವಾಲ್ ಹಾಕಿದ ಮೂಡುವಡೆ ವರ್ಷ ಜ್ಞಾನ!

ತಂದೆಯೇ ತೋರಿದ ದಾರಿ

‘ಅಂದು ನಮ್ಮ ಮನೆಗೆ ಸಂಗೀತ ಕಲಿಯ ಬಯಸಿ ಬರುತ್ತಿದ್ದವರಿಗೆ ನಮ್ಮ ತಂದೆ ಮನೆಯಲ್ಲೇ ಉಳಿದುಕೊಳ್ಳುವ ವ್ಯವಸ್ಥೆ ಮಾಡಿ, ಅವರಿಗೆ ಸಂಗೀತ ಹೇಳಿಕೊಡುತ್ತಿದ್ದರು. ಆ ಕಾರ್ಯವನ್ನು ನಾನು ಈಗ ನನ್ನ ಕೈಲಾದಷ್ಟು ಮಟ್ಟಿಗೆ ಮುಂದುವರೆಸಿಕೊಂಡು ಹೋಗುತ್ತಿದ್ದೇನೆ ಅಷ್ಟೆ. ತಂದೆ ಸಾಯುವ ಒಂದು ವಾರದ ಹಿಂದೆ ನನಗೆ ಒಂದು ಮಾತು ಹೇಳಿದ್ದರು, ಅದೇ ನನ್ನನ್ನು ಇಂದು ಈಮಟ್ಟಕ್ಕೆ ತಂದು ನಿಲ್ಲಿಸಿದೆ. ‘ಜೀವನ ಎಂದಮೇಲೆ ಸಾಕಷ್ಟು ತೊಂದರೆಗಳು ಬಂದೇ ಬರುತ್ತವೆ. ಹಾಗಂತ ನೀನು ಸುಮ್ಮನೆ ಇರಬಾರದು. ನಿನಗೆ ಸಂಗೀತ ಒಲಿದಿದೆ. ಅದನ್ನೇ ವೃತ್ತಿಯಾಗಿ ಮಾಡಿಕೊಂಡು ಮುಂದೆ ಸಾಗು. ಕಲೆ ಎಂದಿಗೂ ಯಾರನ್ನೂ ಕೈಬಿಡುವುದಿಲ್ಲ. ಸ್ವಾರ್ಥವನ್ನು ಬಿಟ್ಟು ನಾಲ್ಕು ಜನಕ್ಕೆ ನೀನು ಕಲಿತ
ವಿದ್ಯೆಯನ್ನು ಕಲಿಸು’ ಎಂದಿದ್ದರು. ಆ ಮಾತಿನ ಪ್ರಕಾರವೇ ನಾನಿಂದು ನಡೆಯಲು ಪ್ರಯತ್ನಿಸುತ್ತಿರುವೆ ಎನ್ನುತ್ತಾರೆ ಬಾಲ ಸುಬ್ರಮಣಿ. ಇಂತಹ ನಿಸ್ವಾರ್ಥ ಗುರುವಿಗೆ ನಿಮ್ಮದೊಂದು ಥ್ಯಾಂಕ್ಸ್ ಹೇಳಿ.
ದೂ. 9740205968