ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಿ: ಪರಂ ತಾಕೀತು
ಜಿಲ್ಲೆಯಲ್ಲಿ ಕೈಗೆತ್ತಿಕೊಂಡಿರುವ ಹೇಮಾವತಿ ನಾಲಾ, ಎತ್ತಿನಹೊಳೆ, ಕೆಐಎಡಿಬಿ, ರಾಷ್ಟ್ರೀಯ ಹೆದ್ದಾರಿ-೨೦೬, ತುಮಕೂರು-ದಾವಣಗೆರೆ ರೈಲ್ವೆ, ತುಮಕೂರು-ರಾಯದುರ್ಗ ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ಇನ್ನಷ್ಟು ಚುರುಕುಗೊಳಿಸಿ ಕಾಮಗಾರಿಗಳಿಗೆ ವೇಗ ನೀಡಬೇಕೆಂದು ಗೃಹ ಸಚಿವ ಡಾ: ಜಿ. ಪರಮೇಶ್ವರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತುಮಕೂರು : ಜಿಲ್ಲೆಯಲ್ಲಿ ಕೈಗೆತ್ತಿಕೊಂಡಿರುವ ಹೇಮಾವತಿ ನಾಲಾ, ಎತ್ತಿನಹೊಳೆ, ಕೆಐಎಡಿಬಿ, ರಾಷ್ಟ್ರೀಯ ಹೆದ್ದಾರಿ-೨೦೬, ತುಮಕೂರು-ದಾವಣಗೆರೆ ರೈಲ್ವೆ, ತುಮಕೂರು-ರಾಯದುರ್ಗ ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ಇನ್ನಷ್ಟು ಚುರುಕುಗೊಳಿಸಿ ಕಾಮಗಾರಿಗಳಿಗೆ ವೇಗ ನೀಡಬೇಕೆಂದು ಗೃಹ ಸಚಿವ ಡಾ: ಜಿ. ಪರಮೇಶ್ವರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕರಣಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಹೇಮಾವತಿ ಹಾಗೂ ಎತ್ತಿನಹೊಳೆ ಕುಡಿವ ನೀರಿನ ಯೋಜನೆಗಾಗಿ ಸ್ವಾಧೀನಪಡಿಸಿಕೊಂಡಿರುವ ಭೂ ಮಾಲೀಕರಿಗೆ ಅವಾರ್ಡ್ ಆದ ಪರಿಹಾರ ಹಣವನ್ನು ಬಾಕಿ ಉಳಿಸಿಕೊಳ್ಳದೆ ತ್ವರಿತವಾಗಿ ನೀಡಬೇಕು ಎಂದರಲ್ಲದೆ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಯೋಜನೆಗಳು ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳದಂತಾಗಿದೆ. ಯೋಜನೆಗಳು ಜಾರಿಯಾಗಿ ಹಲವಾರು ವರ್ಷ ಕಳೆದರೂ ಕಾಮಗಾರಿಗಳು ಮಂದಗತಿಯಲ್ಲಿ ಸಾಗಲು ಕಾರಣವೇನೆಂದು ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಅನುದಾನ ಕೊರತೆ, ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿರುವುದರಿಂದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಹಿನ್ನಡೆಯಾಗಿದ್ದು, ಕಾಮಗಾರಿಗಳಿಗೆ ವೇಗ ನೀಡಲು ಅಗತ್ಯ ಕ್ರಮವಹಿಸಲಾಗುವುದೆಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.
ಹೇಮಾವತಿ ನಾಲಾ ವಲಯದ ವಿಶೇಷ ಭೂಸ್ವಾಧೀನಾಧಿಕಾರಿ ಮಂಜುನಾಥ ಮಾತನಾಡಿ, ಹೇಮಾವತಿ ನಾಲಾ ಯೋಜನೆಯಡಿ ಗುಬ್ಬಿ ತಾಲೂಕಿನ ಬಿಕ್ಕೆಗುಡ್ಡ ಕುಡಿಯುವ ನೀರಿನ ಮೊದಲ ಹಂತದ ಕಾಮಗಾರಿಗಾಗಿ 21.14 ಎಕರೆ ಭೂಸ್ವಾಧೀನಪಡಿಸಿಕೊಳ್ಳಲಾಗಿದ್ದು, 381೧ ಖಾತೆದಾರರಿಗೆ ಅವಾರ್ಡ್ ಅನುಮೋದನೆಯಾಗಿ ಭೂ ಪರಿಹಾರ ಪಾವತಿಸಲಾಗುತ್ತಿದೆ. ಈ ಪೈಕಿ 278 ರೈತರ ಖಾತೆಗೆ 9.94ಕೋಟಿ ರು.ಗಳನ್ನು ಪಾವತಿಸಲಾಗಿದ್ದು, ಉಳಿದಂತೆ 2.94 ಕೋಟಿ ರು. ಪಾವತಿಯಾಗಬೇಕಾಗಿದೆ. ಅನುದಾನ ಬಿಡುಗಡೆಯಾದ ಕೂಡಲೇ ಪಾವತಿಗೆ ಕ್ರಮಕೈಗೊಳ್ಳಲಾಗುವುದೆಂದು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿ, ಹೇಮಾವತಿ ಕುಡಿವ ನೀರಿನ ಯೋಜನೆ ಕಾಮಗಾರಿ ಕೈಗೊಂಡಿರುವ ಗುಬ್ಬಿ ತಾಲೂಕಿನ ಜೀಗನಹಳ್ಳಿ, ಚಾಕೇನಹಳ್ಳಿ, ಮಡೇನಹಳ್ಳಿ, ಇಂಗಳದ ಕಾವಲ್ ಗ್ರಾಮಗಳ ಭೂ ಮಾಲೀಕರಿಗೆ ಪರಿಹಾರ ನೀಡಲು ಅನುಮೋದನೆ ನೀಡಿದ್ದರೂ ಅವಾರ್ಡ್ ನೊಟೀಸ್ ಇದುವರೆಗೂ ಜಾರಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು ಕೂಡಲೇ ಅನುಮೋದನೆಯಾಗಿರುವ ಅವಾರ್ಡ್ ಮೊತ್ತವನ್ನು ಮಾಲೀಕರಿಗೆ ನೀಡಬೇಕೆಂದು ನಿರ್ದೇಶನ ನಿಡಿದರು.
ನಂತರ ಮಾತನಾಡಿದ ಗೃಹ ಸಚಿವರು, 2015ರಲ್ಲೇ ಬಿಕ್ಕೆಗುಡ್ಡ ಕುಡಿವ ನೀರಿನ ಯೋಜನೆಗೆ ಅನುಮೋದನೆಯಾಗಿದ್ದರೂ, ಈವರೆಗೂ ಯೋಜನೆ ಪೂರ್ಣಗೊಂಡಿಲ್ಲ. ಬಾಕಿ ಇರುವ ಭೂಸ್ವಾಧೀನ ಪ್ರಕ್ರಿಯೆಯನ್ನು ರೈತರ ಮನವೊಲಿಸಿ ಆದಷ್ಟು ಶೀಘ್ರ ಕೈಗೊಂಡು ನವೆಂಬರ್ ಮಾಹೆಯೊಳಗೆ ಯೋಜನೆಯನ್ನು ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಎತ್ತಿನಹೊಳೆ, ಹೇಮಾವತಿ ನಾಲಾ ಕುಡಿವ ನೀರಿನ ಯೋಜನೆಯ ಮುಖ್ಯ ಇಂಜನಿಯರ್ ಎಂ. ವರದಯ್ಯ ಅವರು ಗುಬ್ಬಿ ತಾಲೂಕಿನ ಹಾಗಲವಾಡಿ, ಚಿಕ್ಕನಾಯಕನಹಳ್ಳಿ-ತಿಪಟೂರು ಹಾಗೂ ಕುಣಿಗಲ್ ತಾಲೂಕಿನ ಶ್ರೀರಂಗ ಏತ ಕುಡಿವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಪ್ರಗತಿ ವಿವರವನ್ನು ಸಭೆಗೆ ನೀಡಿದರು.
ಎತ್ತಿನಹೊಳೆ ಕುಡಿವ ನೀರಿನ ಯೋಜನೆಗೆ ಸಂಬಂಧಿಸಿದಂತೆ ತಿಪಟೂರು ತಾಲೂಕಿನಗ 31 ಗ್ರಾಮಗಳು 921.23 ಎಕರೆ ಪ್ರದೇಶ ಭೂಸ್ವಾಧೀನಕ್ಕೆ ಒಳಪಟ್ಟಿದ್ದು, ಪರಿಹಾರ ನೀಡಲು 100 ಕೋಟಿ ರು. ಮಾತ್ರ ಬಿಡುಗಡೆಯಾಗಿದ್ದು, 273.43 ಕೋಟಿ ರು. ಬಿಡುಗಡೆಯಾಗಬೇಕಾಗಿದೆ. ಚಿಕ್ಕನಾಯಕನಹಳ್ಳಿಯ11 ಗ್ರಾಮಗಳ 184.36 ಎಕರೆ ಭೂಸ್ವಾಧೀನಕ್ಕೊಳಪಟ್ಟಿದ್ದು, 81.35 ಕೋಟಿ ರು. ಅಗತ್ಯವಿದೆ ಎಂದು ಮಾಹಿತಿ ನೀಡುತ್ತಾ, ಗುಬ್ಬಿ, ತುರುವೇಕೆರೆ, ತುಮಕೂರು ಗ್ರಾಮಾಂತರ, ಕೊರಟಗೆರೆ, ಮಧುಗಿರಿ, ಪಾವಗಡ ತಾಲೂಕುಗಳಲ್ಲಿ ಸ್ವಾಧೀನಪಡಿಸಿಕ್ಕೊಳಪಟ್ಟಿರುವ ಭೂ ವಿಸ್ತ್ರೀರ್ಣ ಹಾಗೂ ಅಗತ್ಯವಿರುವ ಅನುದಾನದ ಬಗ್ಗೆ ವಿವರಣೆ ನೀಡಿದರು.
ತುಮಕೂರು-ರಾಯದುರ್ಗ ರೈಲ್ವೆ ಯೋಜನೆ ಹಾಗೂ ತುಮಕೂರು-ದಾವಣಗೆರೆ ರೈಲ್ವೆ ಯೋಜನೆಯ ಪ್ರಗತಿ ಮಾಹಿತಿ ನೀಡಿದ ವಿಶೇಷ ಭೂಸ್ವಾಧೀನಾಧಿಕಾರಿ ಜಂಬಗಿ ರೇಣುಕಾ ಪ್ರಸಾದ್ ದಿಲೀಪ್ ಒಟ್ಟು 205.77 ಕಿ.ಮೀ. ಅಂತರವಿರುವ ತುಮಕೂರು-ರಾಯದುರ್ಗ ರೈಲ್ವೆ ಯೋಜನೆಯು ತುಮಕೂರಿನಿಂದ ನಾಗಲಾಪುರದವರೆಗಿನ 102.60 ಕಿ.ಮೀ. ಅಂತರ ರಾಜ್ಯದ ವ್ಯಾಪ್ತಿಗೊಳಪಡಲಿದ್ದು, ಈ ರೈಲು ಮಾರ್ಗ ನಿರ್ಮಾಣಕ್ಕೆ 1394.01ಎಕರೆ ಪ್ರದೇಶವನ್ನು ಭೂಸ್ವಾಧೀನಪಡಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ತುಮಕೂರು, ಕೊರಟಗೆರೆ, ಮಧುಗಿರಿ ಹಾಗೂ ಪಾವಗಡ ಸೇರಿ 77 ಗ್ರಾಮಗಳು ತುಮಕೂರು-ರಾಯದುರ್ಗ ರೈಲ್ವೆ ಯೋಜನೆಗೊಳಪಟ್ಟಿದ್ದು, ಈವರೆಗೂ 1289.10 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ದಿಬ್ಬೂರು, ಮರಳೇನಹಳ್ಳಿ, ವೀರಸಾಗರ, ಕುಚ್ಚಂಗಿ, ಹೊನ್ನೇನಹಳ್ಳಿಯಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಈಗಾಗಲೇ ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.
ತುಮಕೂರು-ದಾವಣಗೆರೆ ರೈಲ್ವೆ ಯೋಜನೆಯಡಿ ತುಮಕೂರು ಹಾಗೂ ಶಿರಾ ತಾಲೂಕಿನ 668.25 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅವಾರ್ಡ್ ತಯಾರಿಸಿ ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಉಳಿದಂತೆ 183.19 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ತುಮಕೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 206 ರಸ್ತೆ ಅಗಲೀಕರಣ ಯೋಜನೆಯ ಭೂಸ್ವಾಧೀನಕ್ಕಾಗಿ 801.51 ಕೋಟಿ ರೂ.ಗಳ ಅನುದಾನವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅನುಮೋದನೆ ದೊರೆತಿದ್ದು, 762.18 ಕೋಟಿ ರು. ಬಿಡುಗಡೆಯಾಗಿದೆ. ಈವರೆಗೂ 747.35 ಕೋಟಿ ರು.ಗಳ ಭೂ ಪರಿಹಾರ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ನಂತರ ಗೃಹ ಸಚಿವ ಜಿ. ಪರಮೇಶ್ವರ ಅವರು ತುಮಕೂರಿನ ವಸಂತ ನರಸಾಪುರದಲ್ಲಿ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯಿಂದ ಕೈಗೊಂಡಿರುವ ಪ್ರಗತಿ ಮಾಹಿತಿಯನ್ನು ಮಂಡಳಿಯ ಮುಖ್ಯ ಇಂಜಿನಿಯರ್ ವೀರಭದ್ರಯ್ಯ ಅವರಿಂದ ಪಡೆದು ಹೊರ ರಾಜ್ಯಗಳಿಂದ ಕೈಗಾರಿಕೋದ್ಯಮಿಗಳು ತುಮಕೂರಿನತ್ತ ಆಕರ್ಷಿತರಾಗುವಂತೆ ಅಭಿವೃದ್ಧಿಪಡಿಸಬೇಕು. ಬಂಡವಾಳ ಹೂಡಿಕೆದಾರರಿಗೆ ಅನುಕೂಲವಾಗುವಂತೆ ಅಗತ್ಯ ರಸ್ತೆ, ಚರಂಡಿ, ವಿದ್ಯುತ್, ಅಗತ್ಯ ಮೂಲಸೌಕರ್ಯ ಒದಗಿಸಬೇಕು. ಸೌಲಭ್ಯಗಳನ್ನು ಕಲ್ಪಿಸಿದಾಗ ಮಾತ್ರ ಬಹು ರಾಷ್ಟ್ರೀಯ ಕಂಪನಿಗಳು ತುಮಕೂರಿನತ್ತ ಬರಲು ಉತ್ಸುಕರಾಗುತ್ತಾರೆ. ಯೋಜನೆ ಕೈಗೊಂಡು ೩ ವರ್ಷ ಕಳೆದರೂ ಸಮರ್ಪಕ ಅಭಿವೃದ್ಧಿ ಕಂಡಿಲ್ಲ. ತ್ವರಿತ ಅಭಿವೃದ್ಧಿಪಡಿಸದಿದ್ದರೆ ಕಂಪನಿಗಳು ಖಾಸಗಿ ಜಮೀನು ಕಂಡುಕೊಳ್ಳುವ ಸಾಧ್ಯತೆ ಇದೆ. ಅಧಿಕಾರಿಗಳು ಬೇಜವಾಬ್ದಾರಿ ತೋರದೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಸಭೆಯಲ್ಲಿ ನವದೆಹಲಿಯ ರಾಜ್ಯ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಶಾಸಕರಾದ ಷಡಾಕ್ಷರಿ, ಹೆಚ್.ವಿ. ವೆಂಕಟೇಶ್, ಎಸ್ಪಿ ಕೆ.ವಿ. ಅಶೋಕ್, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಇದ್ದರು.