ಎತ್ತಿನಹೊಳೆ ಯೋಜನೆ ತ್ವರಿತಗೊಳಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ

ಮುಂದಿನ ಬಜೆಟ್‌ನಲ್ಲಿ ಉಳಿದ ಹೋಬಳಿಗಳಿಗೆ ಮೊರಾರ್ಜಿ ವಸತಿ ಶಾಲೆಗಳನ್ನು ಮಂಜೂರು ಮಾಡಲಾಗುವುದು ಹಾಗೂ ಮೊರಾರ್ಜಿ ವಸತಿ ಶಾಲೆಗಳು ಸೇರಿದಂತೆ ವಿವಿಧ ಹಾಸ್ಟೆಲ್‌ಗಳ ಮೇಲುಸ್ತುವಾರಿ ಮಾಡಲು ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Speed Up Ettinahole Project Says CM Siddaramaiah At Kolar gvd

ಕೋಲಾರ (ಡಿ.28): ಮುಂದಿನ ಬಜೆಟ್‌ನಲ್ಲಿ ಉಳಿದ ಹೋಬಳಿಗಳಿಗೆ ಮೊರಾರ್ಜಿ ವಸತಿ ಶಾಲೆಗಳನ್ನು ಮಂಜೂರು ಮಾಡಲಾಗುವುದು ಹಾಗೂ ಮೊರಾರ್ಜಿ ವಸತಿ ಶಾಲೆಗಳು ಸೇರಿದಂತೆ ವಿವಿಧ ಹಾಸ್ಟೆಲ್‌ಗಳ ಮೇಲುಸ್ತುವಾರಿ ಮಾಡಲು ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿ ಇಂದು ಮೊದಲ ಬಾರಿಗೆ ಕೋಲಾರಕ್ಕೆ ಭೇಟಿ ನೀಡಿದ್ದು, ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಕೈಗೊಳ್ಳಲಾಗಿದೆ. ಕಂದಾಯ, ಸಮಾಜ ಕಲ್ಯಾಣ, ಕಾನೂನು, ಕುಡಿಯುವ ನೀರು, ಬರಗಾಲ ಹೀಗೆ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯ ೬ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ, ಟ್ಯಾಂಕರ್ ಮೂಲಕ ನೀರು ನೀಡುವ ಪರಿಸ್ಥಿತಿ ಇನ್ನೂ ಉದ್ಭವಿಸಿಲ್ಲ, ಕುಡಿಯುವ ನೀರಿನ ಸಮಸ್ಯೆ ಇಡೀ ಜಿಲ್ಲೆಯಲ್ಲಿ ಇಲ್ಲ, ಕುಡಿಯುವ ನೀರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಹಾಗೂ ಸಿಇಓಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ, ಅದಕ್ಕೆ ಬೇಕಾಗುವ ಅನುದಾನ ಸರ್ಕಾರ ಪೂರೈಸಲಿದೆ. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಹೊಸ ಬೋರ್‌ವೆಲ್‌ಗಳನ್ನು ಕೊರೆಸಬಹುದೆಂದು ಸೂಚಿಸಲಾಗಿದೆ ಎಂದು ಹೇಳಿದರು.

ಜನತೆ ಎಚ್ಚೆತ್ತುಕೊಳ್ಳದಿದ್ದರೆ ಪ್ರಜಾಪ್ರಭುತ್ವ ಧ್ವಂಸ: ಸಿಎಂ ಸಿದ್ದರಾಮಯ್ಯ

ಕೆಸಿವ್ಯಾಲಿ ನಂತರ ಕೆರೆಗಳಿಗೆ ನೀರು ತುಂಬಿ, ಭೂಮಿಯ ಅಂತರ್ಜಲ ಮಟ್ಟ ಸುಧಾರಿಸಿದೆ, ಇದರಿಂದ ವ್ಯವಸಾಯ, ಕುಡಿಯುವ ನೀರಿಗೆ ಅನುಕೂಲವಾಗಿದೆ, ಮೇವಿನ ಕೊರತೆ ಇಲ್ಲ, ೧೮ ವಾರಗಳಿಗೆ ಪೂರೈಸಬಹುದಾದಷ್ಟು ಮೇವಿನ ಲಭ್ಯತೆ ಇದೆ, ಮೇವು ಕಿಟ್ ಖರೀದಿಗೆ ವ್ಯವಸ್ಥೆ ಕಲ್ಪಿಸಲಾಗಿದೆ, ನರೇಗಾ ಯೋಜನೆಯಡಿ ಮಾನವ ದಿನಗಳನ್ನು ೧೦೦ ರಿಂದ ೧೫೦ ದಿನಗಳಿಗೆ ಹೆಚ್ಚಿಸಲು ಕೇಂದ್ರ ಸರ್ಕಾರದ ಅನುಮತಿ ಬೇಕಿರುತ್ತದೆ, ರಾಜ್ಯ ಸರ್ಕಾರ ಮನವಿ ಸಲ್ಲಿಸಿ ಮೂರು ತಿಂಗಳು ಕಳೆದರೂ, ಈ ಬಗ್ಗೆ ಕೇಂದ್ರದಿಂದ ಸ್ಪಂದನೆ ದೊರೆತಿಲ್ಲ, ಜನರ ಗುಳೆ ಹೋಗುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಈ ಮನವಿ ಮಾಡಿತ್ತು ಎಂದು ತಿಳಿಸಿದರು.

ಎಲ್ಲಾ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು ಹಾಗೂ ತಹಸೀಲ್ದಾರರಿಗೆ ಬಾಕಿಯಿರುವ ಕೇಸುಗಳನ್ನು ವಿಲೇವಾರಿ ಮಾಡಲು ಸೂಚಿಸಲಾಗಿದೆ. ಅಸಿಸ್ಟೆಂಟ್ ಕಮೀಷನರ್‌ನ ಬಳಿ ೩೯೯೫ ಕೇಸುಗಳು ಬಾಕಿಯಿದ್ದು, ಅಭಿಯಾನದ ರೀತಿ ಕಾರ್ಯನಿರ್ವಹಿಸಿ, ಕೇಸುಗಳನ್ನು ಮುಗಿಸಲು ಸೂಚಿಸಲಾಗಿದೆ, ಖಾತೆ, ಸರ್ವೇ, ಪೋಡಿಗಳು ಸರಿಯಾಗಿ ಆಗದಿರುವ ಕಾರಣ ಸಹಾಯಕ ಆಯುಕ್ತರು, ತಹಸೀಲ್ದಾರರ ಬಳಿ ಪ್ರಕರಣಗಳು ಬಾಕಿ ಉಳಿದಿರುತ್ತವೆ, ಆದ್ದರಿಂದ ಗ್ರಾಮ ಲೆಕ್ಕಿಗರು, ಕಂದಾಯ ಅದಿಕಾರಿಗಳು, ತಹಸೀಲ್ದಾರರು, ಸಹಾಯಕ ಆಯುಕ್ತರು ತಮ್ಮ ಹಂತದಲ್ಲಿ ಕೆಲಸ ಮಾಡಬೇಕು. ಜನರ ಕೈಗೆ ಅಧಿಕಾರಿಗಳು ಸಿಗದಿರುವುದು ಸಮಸ್ಯೆಯಾಗಿದ್ದು, ಜನರ ಭೇಟಿಗೆ ಸಮಯ ನಿಗದಿಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ತಹಸೀಲ್ದಾರರ ಕಚೇರಿಯಲ್ಲಿ ತಾಲೂಕುವಾರು ಸರ್ಕಾರಿ ಜಮೀನು ಒತ್ತುವರಿ ಆಗಿರುವ ಮತ್ತು ತೆರವುಗೊಳಿಸಿರುವ ಬಗ್ಗೆ ಮಾಹಿತಿ ನೀಡಬೇಕು, ಎಷ್ಟೇ ಪ್ರಭಾವಿಗಳಿದ್ದರೂ ಅವರಿಂದ ಒತ್ತುವರಿಯಾಗಿರುವ ಕೆರೆ ಮತ್ತು ಸರ್ಕಾರಿ ಭೂಮಿಯನ್ನು ತೆರವುಗೊಳಿಸಲು ಸೂಚಿಸಲಾಗಿದೆ. ಅರಣ್ಯ ಇಲಾಖೆಯವರೊಂದಿಗೆ ಸಂಯೋಜಿಸಿ ಸರ್ಕಾರಿ ಭೂಮಿ ಮತ್ತು ಅರಣ್ಯ ಭೂಮಿಯ ಬಗ್ಗೆ ಜಂಟಿ ಸರ್ವೇ ನಡೆಸಿ, ವರದಿ ನೀಡಲು ಜಿಲ್ಲಾಧಿಕಾರಿಗೆ ಸೂಚಿಸಿದೆ ಎಂದು ತಿಳಿಸಿದರು.

ಎತ್ತಿನಹೊಳೆ ಯೋಜನೆ ತ್ವರಿತಗೊಳಿಸಲು ಸೂಚನೆ: ಕೆಸಿವ್ಯಾಲಿ ಮೂರನೇ ಹಂತದ ಶುದ್ಧೀಕರಣ ಯೋಜನೆ ಇನ್ನೂ ಚರ್ಚೆಯ ಹಂತದಲ್ಲಿದೆ. ಎರಡನೇ ಹಂತ ಶುದ್ದೀಕರಣ ಮಾಡಲಾಗುತ್ತಿದ್ದು, ಕೆರೆ ತುಂಬಿಸಲು ನೀರು ಬಳಸಲಾಗುವುದು. ಎತ್ತಿನಹೊಳೆ ಯೋಜನೆಯು ಕುಡಿಯುವ ನೀರಿನ ಯೋಜನೆಯಾಗಿದ್ದು, ಕೋಲಾರ-ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಅರಸೀಕರೆಗಳಿಗೆ ಕುಡಿಯಲು ನೀರು ಪೂರೈಸಲಾಗುತ್ತದೆ. ಕಾಮಗಾರಿಗಳನ್ನು ತ್ವರಿತಗೊಳಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಕೆಡಿಪಿ ಸಭೆ ಮ್ಯಾಚ್ ಫಿಕ್ಸಿಂಗ್: ಸಂಸದ ಮುನಿಸ್ವಾಮಿ

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ಅಪ್ರಾಪ್ತ ಹೆಣ್ಣುಮಕ್ಕಳ ಮದುವೆ ತಪ್ಪಿಸಬೇಕು, ಇಂತಹ ಪ್ರಕರಣಗಳು ನಿಲ್ಲದಿದ್ದರೆ ಸಂಬಂಧಪಟ್ಟವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು. ಇದು ಪೊಲೀಸರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಮಾಜ ಕಲ್ಯಾಣ ಇಲಾಖೆ ಜವಾಬ್ದಾರಿಯಾಗಿದೆ. ತಪ್ಪಿತಸ್ಥರ ವಿರುದ್ಧ ಎಫ್. ಐ. ಆರ್. ದಾಖಲಿಸಲು ಹಾಗೂ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದೆ ಎಂದರು.

Latest Videos
Follow Us:
Download App:
  • android
  • ios