ಶಿವಮೊಗ್ಗ(ಮೇ.10): ಕೊರೋನಾ ಎನ್ನುವ ಮದ್ದಿಲ್ಲದ ಮಹಾಮಾರಿ ಇದೀಗ ಜಾಗತಿಕ ಪಿಡುಗಾಗಿ ಪರಿಣಮಿಸಿದೆ. ಇದಕ್ಕೆ ಭಾರತ ಕೂಡಾ ಹೊರತಾಗಿಲ್ಲ. ದೇಶದಲ್ಲೂ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಹೆಚ್ಚುತ್ತಲೇ ಸಾಗುತ್ತಿದೆ. ಹೀಗಿರುವಾಗಲೇ ಮುಖ್ಯಮಂತ್ರಿ ತವರು ಜಿಲ್ಲೆ ಶಿವಮೊಗ್ಗದಲ್ಲಿ ವಿಶೇಷಚೇತನರು ಕೊರೋನಾದಿಂದ ದೇಶವನ್ನು ಮುಕ್ತಗೊಳಿಸುವಂತೆ ದೇವರ ಮೊರೆ ಹೋದ ಘಟನೆ ನಡೆದಿದೆ.

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ‌ ಕೆಂಚೇನಹಳ್ಳಿ ಗ್ರಾಮದ ದೇವಸ್ಥಾನದಲ್ಲಿ ಗ್ರಾಮದ ರಾಮದೇವರಿಗೆ ವಿಶೇಷ ಚೇತನರು ವಿಶೇಷ ಪೂಜೆ ನೇರವೇರಿಸಿದರು. ಕೊರೋನಾ ಎನ್ನುವ ಪಿಡುಗು ದೇಶದಿಂದ ತೊಲಗಲಿ, ದೇಶ ಸಮೃದ್ಧವಾಗಿರಲಿ ಎಂದು ಗ್ರಾಮದ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. 

ಹ್ಯಾಟ್ಸಾಫ್ ಕೊರೋನಾ ವಾರಿಯರ್..!9 ತಿಂಗ್ಳು ತುಂಬು ಗರ್ಭಿಣಿಯಾಗಿದ್ದರೂ ಆರೋಗ್ಯ ಸೇವೆ..!

 ನಂತರ ಈ ವಿಶೇಷಚೇತನರಿಗೆ ಹಾಗೂ ಗ್ರಾಮ ಪಂಚಾಯತ್‌ನಲ್ಲಿ ನೀರುಗಂಟಿ  ಕೆಲಸಗಾರರಿಗೆ ಆಹಾರ ಸಾಮಾಗ್ರಿಗಳ ಕಿಟ್ ಹಾಗೂ ಮಾಸ್ಕ್ ವಿತರಿಸಲಾಯಿತು ವಿತರಿಸಲಾಯಿತು. ಭದ್ರಾವತಿ ತಾಲೂಕಿನ ಹಿರಿಯೂರು ಜಿಪಂ ಕ್ಷೇತ್ರ ವ್ಯಾಪ್ತಿಯ  8 ಗ್ರಾಮಪಂಚಾಯತ್ ನ 700 ಕ್ಕೂ ಹೆಚ್ಚು ವಿಶೇಷಚೇತನರು ಹಾಗೂ ನೀರುಗಂಟಿಗಳಿಗೆ ಶಿವಮೊಗ್ಗ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎನ್ ಕುಮಾರ್, ಡಿ ದೇವರಾಜ್ ಅರಸು ಸಂಶೋಧನಾ ಸಂಸ್ಥೆ ನಿರ್ದೇಶಕರಾದ ಅನುರಾಧ ಪಟೇಲ್ ಕಿಟ್‌ಗಳನ್ನು ವಿತರಣೆ ಮಾಡಿದರು.

ಶಿವಮೊಗ್ಗದಲ್ಲಿ ಇದುವರೆಗೂ ಯಾವುದೇ ಕೊರೋನಾ ಪ್ರಕರಣಗಳು ಕಾಣಿಸಿಕೊಂಡಿಲ್ಲ. ಅಧಿಕಾರಿಗಳ ಕಾರ್ಯದಕ್ಷತೆ ಹಾಗೂ ಜನರ ಸಂಯಮದಿಂದಾಗಿ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಇದುವರೆಗೂ ಕೊರೋನಾ ಕೆಂಗಣ್ಣಿಗೆ ಗುರಿಯಾಗಿಲ್ಲ.

ಕಳೆದ ಒಂದು ವಾರದಲ್ಲಿ ಹೊರರಾಜ್ಯಗಳಿಂದ 289 ಮಂದಿ ಶಿವಮೊಗ್ಗಕ್ಕೆ ಆಗಮಿಸಿದ್ದಾರೆ. ಈ ಎಲ್ಲರನ್ನೂ ಆರೋಗ್ಯ ತಪಾಸಣೆಗೊಳಪಡಿಸಿ ಕ್ವಾರಂಟೈನ್‌ ಮಾಡಲಾಗಿದೆ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ತಿಳಿಸಿದ್ದಾರೆ. ಹೊರಗಿನಿಂದ ಬಂದವರ ಮೇಲೆ ಜಿಲ್ಲಾಡಳಿತ ಹದ್ದಿನ ಕಣ್ಣಿಟ್ಟಿದೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರು ಹಾಗೂ ಗೊಂದಲವನ್ನುಂಟು ಮಾಡುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.