ಬೆಳಗಾವಿ(ಏ.16): ಲಾಕ್‌ಡೌನ್‌ ನಡುವೆಯೇ ನವಜಾತ ಶಿಶುವೊಂದನ್ನು ಸೂರತ್‌ನಿಂದ ಖಾಸಗಿ ವಿಮಾನದ ಮೂಲಕ ವೈದ್ಯರು ಬೆಳಗಾವಿಗೆ ಕರೆತಂದಿರುವ ಘಟನೆ ಬುಧವಾರ ನಡೆದಿದೆ.

ಗುಜರಾತ್‌ನ ಸೂರತ್‌ನಿಂದ ತಂದ ಶಿಶುವನ್ನು ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರ ಬಳಿ ಆರೋಗ್ಯ ತಪಾಸಣೆ ಮಾಡಿದ ಬಳಿಕ ಬೆಳಗಾವಿ ದಂಪತಿಗೆ ಹಸ್ತಾಂತರಿಸಲಾಯಿತು. ನವಜಾತ ಶಿಶುವನ್ನು ಸೂರತ್‌ನಿಂದ ಸರಾಯಾ ಏವಿಯೇಷನ್‌ ಪ್ರೈವೇಟ್‌ ಲಿಮಿಟೆಡ್‌ಗೆ ಸೇರಿದ ಖಾಸಗಿ ವಿಮಾನದ ಮೂಲಕ ಮಂಗಳವಾರ ಮಧ್ಯಾಹ್ನ 3.55ಕ್ಕೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಕರೆತರಲಾಯಿತು. ಬಳಿಕ ಅಲ್ಲಿಂದ ವಾಹನದಲ್ಲಿ ಖಾಸಗಿ ಆಸ್ಪತ್ರೆಗೆ ತೆರಳಿ, ಶಿಶುವಿನ ಆರೋಗ್ಯ ತಪಾಸಣೆ ನಡೆಸಿದ ಬಳಿಕ ದಂಪತಿಗೆ ಹಸ್ತಾಂತರಿಸಲಾಯಿತು. ಖಾಸಗಿ ವಿಮಾನ ಮುಂಬೈಗೆ ವಾಪಸಾಯಿತು.

ಕಾಪಾಡು ಭಗವಂತ: ಕೊರೋನಾ ನಿಗ್ರಹಕ್ಕೆ ದೇವರ ಕುದುರೆ ಮೊರೆ!

ಶಿಶು ಏಕೆ ತಂದಿದ್ದು?:

ಬೆಳಗಾವಿಯ ಉದ್ಯಮಿಯೊಬ್ಬರು ಪ್ರನಾಳ ಶಿಶು ಇದಾಗಿದೆ. ಸೂರತ್‌ನಲ್ಲಿ ಈ ಪ್ರನಾಳ ಶಿಶುವಿಗೆ ಮಹಿಳೆಯೊಬ್ಬರು ಜನ್ಮ ನೀಡಿದ್ದರು. ಆ ಶಿಶುವನ್ನು ಪಡೆಯಲೆಂದೇ ಬೆಳಗಾವಿ ಉದ್ಯಮಿಯೊಬ್ಬರು ಸೂರತ್‌ನಿಂದ ಸರಾಯಾ ಏವಿಯೇಷನ್‌ ಪ್ರೈವೇಟ್‌ ಲಿ. ಗೆ ಸೇರಿದ ಖಾಸಗಿ ವಿಮಾನದ ಮೂಲಕ ಬೆಳಗಾವಿಗೆ ತರಿಸಿಕೊಂಡಿದ್ದಾರೆ. ಹೀಗಾಗಿ ಶಿಶು ಕೊಡಲು ಸೂರತ್‌ನಿಂದ ಈ ವಿಶೇಷ ವಿಮಾನ ಬಂದಿತ್ತು ಎಂದು ಮೂಲಗಳು ತಿಳಿಸಿವೆ.