ಗೋಕಾಕ್‌(ಏ.13): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೋನಾ ವೈರಸ್‌ ಭೀತಿಯಿಂದ ಕಂಗೆಟ್ಟಿರುವ ಜನರು ಇಲ್ಲಿನ ಗ್ರಾಮವೊಂದರಲ್ಲಿ ಸೋಂಕು ಹರಡದಂತೆ ರಕ್ಷಿಸಲು ದೇವರ ಕುದುರೆ ಬಿಡುವ ಮೂಲಕ ದೇವರ ಮೊರೆ ಹೋಗಿರುವ ವಿಶಿಷ್ಟ ಘಟನೆ ನಡೆದಿದೆ. 

ಬೆಳಗಾವಿ ಜಿಲ್ಲೆ ಗೋಕಾಕ್‌ ತಾಲೂಕಿನ ಕೊಣ್ಣೂರು ಗ್ರಾಮದ ಹಿರಿಯರು ಶುಕ್ರವಾರ ಈ ಬಗ್ಗೆ ನಿರ್ಧರಿಸಿ ಇತಿಹಾಸ ಪ್ರಸಿದ್ಧ ಸುಕ್ಷೇತ್ರ (ಕೊಣ್ಣೂರು)ಮರಡಿ ಮಠದಲ್ಲಿ ಪವಾಡೇಶ್ವರ ಮಹಾಸ್ವಾಮೀಜಿ ಮಾರ್ಗದರ್ಶನದಂತೆ ಗ್ರಾಮದ ಜನತೆ ಕಾಡಸಿದ್ಧೇಶ್ವರ ಸ್ವಾಮಿಯವರ ಕುದುರೆಯನ್ನು ಮಧ್ಯರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 4ಗಂಟೆಯವರೆಗೆ ಗ್ರಾಮದಲ್ಲಿ ಸಂಚರಿಸಲು ಬಿಟ್ಟಿದ್ದು ಈ ದೈವ ಕುದುರೆಯಿಂದ ಗ್ರಾಮದ ಜನತೆಯ ರಕ್ಷಣೆಗೆ ಮೊರೆ ಹೋಗಿದ್ದಾರೆ.

ಈರುಳ್ಳಿ ಮಾರಾಟಗಾರರಿಗೆ ಕೊರೋನಾ ಸೋಂಕು ದೃಢ: ಗ್ರಾಮಸ್ಥರಲ್ಲಿ ಆತಂಕ50 ವರ್ಷಗಳ ಹಿಂದೆಯೂ ಮಲೇರಿಯಾ, ಪ್ಲೇಗ್‌ ಹಾಗೂ ಕಾಲರಾ ದಂತಹ ಸಾಂಕ್ರಾಮಿಕ ರೋಗಳು ಹರಡಿದ ಸಮಯದಲ್ಲೂ ಮರಡಿಮಠದ ಕಾಡಸಿದ್ಧೇಶ್ವರ ಸ್ವಾಮಿಯವರು ಕಟ್ಟಿದ್ದ ಕುದರೆಯನ್ನು ಮಧ್ಯರಾತ್ರಿ ಗ್ರಾಮದಾದ್ಯಂತ ಸುತ್ತಾಡಲು ಬಿಟ್ಟಿದ್ದರಂತೆ. ಶುಕ್ರವಾರ ಮಧ್ಯರಾತ್ರಿ ಕುದುರೆ ಬಿಟ್ಟ ನಂತರ ಮುಂದಿನ ಸೋಮವಾರ ಹಾಗೂ ಶುಕ್ರವಾರ ಹೀಗೆ ಐದು ವಾರ ಬಿಡುವ ಸಂಪ್ರದಾಯ ಮಾಡಿದ್ದು, ಈ ಸಮಯದಲ್ಲಿ ನಾಗರಿಕರು ಮಾಂಸಾಹಾರ, ಎಣ್ಣೆಯಲ್ಲಿ ಕರೆಯುವ ಪದಾರ್ಥಗಳನ್ನು ಮಾಡದಂತೆ ಗ್ರಾಮದಾದ್ಯಂತ ಡಂಗೂರ ಸಾರಲಾಗಿದೆ ಎಂದು ತಿಳಿದುಬಂದಿದೆ.