Vijayapura: ಆಜಾದಿಕಾ ಅಮೃತ ಮಹೋತ್ಸವ ಅಂಗವಾಗಿ ವಿಶೇಷ ಸೈಕಲ್ ಜಾಥಾ!
ದೇಶಾದ್ಯಂತ 75 ಐತಿಹಾಸಿಕ ಸ್ಥಳಗಳನ್ನು ವಿಶ್ವ ಸೈಕಲ್ ಜಾಥಾಕ್ಕಾಗಿ ಆಯ್ಕೆ ಮಾಡಲಾಗಿದ್ದು, ಇದರಲ್ಲಿ ಐತಿಹಾಸಿಕ ವಿಜಯಪುರ ಜಿಲ್ಲೆಯೂ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ (ಜೂ.04): ದೇಶಾದ್ಯಂತ 75 ಐತಿಹಾಸಿಕ ಸ್ಥಳಗಳನ್ನು ವಿಶ್ವ ಸೈಕಲ್ ಜಾಥಾಕ್ಕಾಗಿ ಆಯ್ಕೆ ಮಾಡಲಾಗಿದ್ದು, ಇದರಲ್ಲಿ ಐತಿಹಾಸಿಕ ವಿಜಯಪುರ ಜಿಲ್ಲೆಯೂ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಹೀಗಾಗಿ ಐತಿಹಾಸಿಕ ವಿಜಯಪುರದಲ್ಲಿ ಸೈಕಲ್ ಜಾಥಾವನ್ನು ಅಚ್ಚುಕಟ್ಟಾಗಿ ನಡೆಸಲಾಯಿತು.
ಡಿಸಿ, ಎಸ್ಪಿಯಿಂದ ಸೈಕಲ್ ಸವಾರಿ: ನಗರದ ಗೋಳಗುಮ್ಮಟ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸೈಕಲ್ ಜಾಥಾದಲ್ಲಿ ಡಿಸಿ ವಿಜಯ ಮಹಾಂತೇಶ ದಾನಮ್ಮನವರ್ ಹಾಗೂ ಎಸ್ಪಿ ಆನಂದಕುಮಾರ್ ಪಾಲ್ಗೊಂಡರು. ಈ ವೇಳೆ ಸೈಕಲ್ ಜಾಥಾಗೆ ಜಿಲ್ಲಾಧಿಕಾರಿಗಳು ಚಾಲನೆ ನೀಡಿದರು. ಈ ಜಾಥಾದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೋಲಿಸ್ ಅಧೀಕ್ಷಕರು, ಸೈಕಲ್ ಸವಾರಿ ಮಾಡಿದ್ದು ವಿಶೇಷವಾಗಿತ್ತು.
ವಿವಿಧೆಡೆ ಸಂಚಾರಿಸಿದ ಸೈಕಲ್ ಜಾಥಾ: 300 ಸೈಕ್ಲಿಸ್ಟಗಳು ಭಾಗವಹಿಸಿದ್ದ ಸೈಕಲ್ ಜಾಥಾವು ಗೋಲಗುಂಬಜ್‌ನಿಂದ ಪ್ರಾರಂಭವಾಗಿ ಕನಕದಾಸ ವೃತ್ತ, ಅಂಬೇಡ್ಕರ ವೃತ್ತ, ಬಸವೇಶ್ವರ ವೃತ್ತದಿಂದ, ಕೇಂದ್ರ ಬಸ್ ನಿಲ್ದಾಣ, ಗಾಂಧಿ ವೃತ್ತ, ಶಿವಾಜಿ ವೃತ್ತದ ಮಾರ್ಗವಾಗಿ ವಾಟರ್ ಟ್ಯಾಂಕ್ ಮೂಲಕ ಸೈಕ್ಲಿಂಗ್ ಹಾಸ್ಟಲ್‌ನಲ್ಲಿ ಸಮಾರೋಪಗೊಂಡಿತು.
Vijayapura ಹೊಲದಲ್ಲಿ ಸ್ವತಃ ನೇಗಿಲು ಹಿಡಿದು ಬಿತ್ತನೆ ಮಾಡಿದ ಮಠಾಧೀಶರು..!
ಜಿಲ್ಲಾಧಿಕಾರಿ ಪ್ರೋತ್ಸಾಹದ ಮಾತು: ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಯುವಜನತೆಯನ್ನು ಸದೃಢಗೊಳಿಸುವುದು ಇಂದಿನ ಅಗತ್ಯವಾಗಿದೆ. ಯುವಜನರ ಶಾರೀರಿಕ ಬೆಳವಣಿಗೆಯು ಉತ್ತಮವಾಗಿರುವ ನಿಟ್ಟಿನಲ್ಲಿ ಕ್ರೀಡೆಗಳಲ್ಲಿ ವ್ಯಾಯಾಮ, ಯೋಗ, ಸೈಕ್ಲಿಂಗ್, ಅಭ್ಯಾಸ ರೂಡಿಸಿಕೊಳ್ಳಲು ಪ್ರೋತ್ಸಾಹಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ಬಿ. ದಾನಮ್ಮನ್ನವರ ಅವರು ಹೇಳಿದರು.
ನಗರದ ಐತಿಹಾಸಿಕ ಗೋಳಗುಂಬಜ ಆವರಣದಲ್ಲಿ ನೆಹರು ಯುವ ಕೇಂದ್ರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ಜಿಲ್ಲಾ ಸೈಕ್ಲಿಂಗ್ ಸಂಸ್ಥೆ, ಸಮಪ್ರಭಾ ಶಿಕ್ಷಣ ಹಾಗೂ ಯುವ ಸಂಸ್ಥೆ, ಸ್ಪಂದನ ಸ್ವಯಂ ಸೇವಾ ಸಂಸ್ಥೆ, ಕರ್ನಾಟಕ ಅಮೆಚ್ಯೂರ ಸೈಕ್ಲಿಂಗ್ ಅಸೋಸಿಯೇಶನ್ ಹಾಗೂ ಫೇವಾರ್ಡ-ಕೆ, ಪುರಾತತ್ವ ಇಲಾಖೆ, ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ಆಜಾದಿಕಾ ಅಮೃತ ಮಹೋತ್ಸವ ಅಂಗವಾಗಿ ಜೂನ್ 3ರಂದು ವಿಶ್ವ ಸೈಕಲ್ ದಿನಾಚರಣೆ-2022ಯ ಸೈಕಲ್ ಜಾಥಾ ಉದ್ಘಾಟಿಸಿ ಅವರು ಮಾತನಾಡಿದರು.
ದಿನವಿಡೀ ಚಟುವಟಿಕೆಯಿಂದಿರಲು ಸೈಕ್ಲಿಂಗ್ ಅತ್ಯುತ್ತಮವಾದ ವ್ಯಾಯಾಮವಾಗಿದೆ. ದೇಹದಾರ್ಢ್ಯತೆ ಕಾಪಾಡಲು ಆರೋಗ್ಯಕರ ಜೀವನ ಕ್ರಮ ನಡೆಸಲು ಹಾಗೂ ವಿಶೇಷವಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಚೈತನ್ಯ ಶೀಲರಾಗಲು ಸೈಕ್ಲಿಂಗ್ ಉತ್ತಮ ಸಾಧನವಾಗಿದೆ ಎಂದು ಅವರು ಸಲಹೆ ಮಾಡಿದರು.
ಒತ್ತಡದ ಬದುಕಿಗೆ ಸೈಕ್ಲಿಂಗ್ ಮದ್ದು: ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಹೆಚ್.ಡಿ. ಆನಂದಕುಮಾರ ಅವರು ಮಾತನಾಡಿ, ನಾವೆಲ್ಲರೂ ಇಂದಿನ ದಿನಗಳಲ್ಲಿ ಒಂದಿಲ್ಲೊಂದು ಒತ್ತಡದ ಮಧ್ಯೆ ಬದುಕುತ್ತಿದ್ದೇವೆ. ಈ ನಡುವೆ, ನಮ್ಮ ಜೀವನಶೈಲಿಯನ್ನು ಬದಲಿಸಿಕೊಂಡು ಪ್ರತಿದಿನ ತಪ್ಪದೇ ವ್ಯಾಯಾಮ, ಕ್ರೀಡೆ ಹಾಗೂ ಯೋಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸದೃಢ ಸಮಾಜ ನಿರ್ಮಿಸಬೇಕು. ಪ್ರತಿಯೊಬ್ಬರು ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಸದೃಢ ಶರೀರ ಹೊಂದುವುದು ಬಹುಮುಖ್ಯವಾಗಿದೆ ಎಂದು ತಿಳಿಸಿದರು.
ರಾಷ್ಟ್ರಯುವ ಪ್ರಶಸ್ತಿ ಪುರಸ್ಕೃತ ಫೆಡರೇಶನ್ ರಾಷ್ಟಿಯ ಅಧ್ಯಕ್ಷರಾದ ಡಾ.ಜಾವೀದ್ ಎಂ ಜಮಾದಾರ ಅವರು ಮಾತನಾಡಿ, ತಾಂತ್ರಿಕ ಜೀವನ ಶೈಲಿಯಿಂದ ದೈಹಿಕ ಸಾಮರ್ಥ್ಯ ಕುಂಟಿತವಾಗುತ್ತಿದೆ. ಸದೃಢತೆ ಕೇವಲ ವ್ಯಾಖ್ಯವಲ್ಲ; ಅದೊಂದು ಜೀವನ ಸ್ಥಂಭ. ಉತ್ತಮ ಆರೋಗ್ಯದ ಜೊತೆಗೆ ಮಾನಸಿಕ ಸದೃಢತೆಯನ್ನು ಕಾಪಾಡಿಕೊಳ್ಳಬೇಕೆಂದರು.
ಇಂಡಿ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲೂ ಲಂಚಾವತಾರ: ಅಣ್ತಮ್ಮನ ಹಣದ ದಾಹಕ್ಕೆ ಬೇಸತ್ತ ಜನತೆ..!
ಸೈಕ್ಲಿಂಗ್ ಅಸೋಸಿಯೇಶನ್ ರಾಜ್ಯಾಧ್ಯಕ್ಷರಾದ ರಾಜು ಬಿರಾದಾರ, ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯ ಅಧಿಕಾರಿ ಸಿ.ಕೆ. ಸುರೇಶ, ವಿಶಾಲ ಸೈಕಲ್ ಮಾಲ್ ಮಾಲೀಕರಾದ ವಿಶಾಲ ಹೀರಾಸ್ಕರ್, ಸಮಪ್ರಭಾ ಸಂಸ್ಥೆಯ ಅಧ್ಯಕ್ಷರಾದ ಪ್ರಶಾಂತ ದೇಶಪಾಂಡೆ, ಸಂಜು ಫಡತರೆ, ಮಹಾದೇವ ದೇವರ ಅವರು ಉಪಸ್ಥಿತರಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಎಸ್.ಜಿ.ಲೋಣಿ ಸ್ವಾಗತ ಮತ್ತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುರೇಶ ಬಿಜಾಪುರ ನಿರೂಪಿಸಿದರು. ನೆಹರು ಯುವ ಕೇಂದ್ರದ ಸಹಾಯಕ ಕಾರ್ಯಕ್ರಮ ಅಧಿಕಾರಿ ಬೇಬಿ ದೊಡಮನಿ ಅವರು ವಂದಿಸಿದರು.