ಶಿರಸಿ (ಜ.30):  ಮಾರಿಕಾಂಬಾ ಜಾತ್ರೆಗೆ ಪ್ರಯಾಣಿಕರ ಅನುಕೂಲಕ್ಕಾಗಿ ಬಿಡುವ ವಿಶೇಷ ಬಸ್‌ಗಳಿಗೆ ಹೆಚ್ಚಿನ ದರ ಆಕರಣೆ ಮಾಡದಂತೆ ಆಗ್ರಹಿಸಿ ಇಲ್ಲಿನ ವಿಶ್ವ ಹಿಂದೂ ಪರಿಷತ್ ವತಿಯಿಂದ  ಸಹಾಯಕ ಆಯುಕ್ತರ ಮೂಲಕ ರಾಜ್ಯ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಲಾಯಿತು. 

ರಾಜ್ಯದಲ್ಲಿಯೇ ಪ್ರಸಿದ್ಧವಾಗಿರುವ ಶಿರಸಿ ಮಾರಿಕಾಂಬಾ ಜಾತ್ರೆಗೆ ಪಾಲ್ಗೊಳ್ಳಲು ಭಕ್ತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಭಟ್ಕಳ ಸೇರಿದಂತೆ ರಾಜ್ಯದ ವಿವಿಧ ಡಿಪೋದಿಂದ ವಿಶೇಷ ಬಸ್‌ಗಳನ್ನು ಓಡಿಸಲಾಗುತ್ತದೆ. ಆದರೆ ಜಾತ್ರಾ ವಿಶೇಷ ಬಸ್‌ಗೆ ಪ್ರಯಾಣಿಕರಿಂದ ಇದ್ದ ದರಕ್ಕಿಂತ ಹೆಚ್ಚುವರಿ ದರ ಆಕರಣೆ ಮಾಡಲಾಗುತ್ತದೆ. ಜಾತ್ರೆಗೆ ಆಗಮಿಸುವ ಭಕ್ತರ ಬಳಿ ಹೆಚ್ಚುವರಿ ಪ್ರಯಾಣ ದರ ವಸೂಲಿ ಮಾಡುವುದು ಸರಿಯಲ್ಲ. 

23ನೇ ವಯಸ್ಸಿನಿಂದಲೂ ಗಿಡ ನೆಡುತ್ತಲೇ ಇದ್ದಾರೆ 72 ವರ್ಷದ ತುಳಸಿಗೌಡ...

ಸಾರಿಗೆ ಸಂಸ್ಥೆಯವರು ಹೀಗೆ ಪ್ರಯಾಣಿಕರಿಂದ ಹೆಚ್ಚುವರಿ ಪ್ರಯಾಣ ದರ ವಸೂಲಿ ಮಾಡಿದರೆ ಖಾಸಗಿ ಬಸ್, ವಾಹನದವರೂ ಹೆಚ್ಚುವರಿ ದರ ವಸೂಲಿ ಮಾಡಲು ದಾರಿ ಮಾಡಿಕೊಟ್ಟಂತಾಗುತ್ತದೆ. ಹೀಗಾಗಿ ಶಿರಸಿ ಜಾತ್ರಾ ವಿಶೇಷ ಬಸ್ಸುಗಳಿಗೆ ಹೆಚ್ಚುವರಿ ದರ ನಿಗದಡಿ ಮಾಡದೇ ಈಗಿರುವ ದರವನ್ನೇ ಪ್ರಯಾಣಿಕರಿಂದ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಸಹಾಯಕ ಆಯುಕ್ತರ ಅನುಪಸ್ಥಿತಿಯಲ್ಲಿ ಕಚೇರಿ ಗುಮಾಸ್ತೆ ಮನವಿ ಸ್ವೀಕರಿಸಿದರು. ವಿಶ್ವಹಿಂದೂ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ರಾಮಚಂದ್ರ ನಾಯ್ಕ, ಪ್ರಮುಖರಾದ ಶಂಕರ ಶೆಟ್ಟಿ, ರಾಮದಾಸ ಬಳೇಗಾರ, ಸುರೇಂದ್ರ ಭಟ್ಕಳ, ಶಿವರಾಮ ನಾಯ್ಕ, ಗಣಪತಿ ಅಚಾರಿ, ಸುಧಾಕರ ಮಹಾಲೆ, ದೀಪಕ ನಾಯ್ಕ, ಎಸ್.ಎಂ. ನಾಯ್ಕ, ಸುರೇಶ ಆಚಾರಿ,ಸಂತೋಷ ಶೇಟ್ ಮುಂತಾದವರಿದ್ದರು.