23ನೇ ವಯಸ್ಸಿನಿಂದಲೂ ಗಿಡ ನೆಡುತ್ತಲೇ ಇದ್ದಾರೆ 72 ವರ್ಷದ ತುಳಸಿಗೌಡ
23ನೇ ವಯಸ್ಸಿನಲ್ಲಿ ದಿನವೊಂದಕ್ಕೆ ಒಂದೂವರೆ ರು. ಸಂಬಳಕ್ಕಾಗಿ ಅರಣ್ಯ ಇಲಾಖೆಯಲ್ಲಿ ಸಸಿ ನೆಡುವ ಕೆಸಲಕ್ಕೆ ಸೇರಿದ ತುಳಸಿ ಗೌಡ, ಇಂದಿಗೂ ತಮ್ಮ ಕಾರ್ಯದಲ್ಲಿ ನಿರತರಾಗಿದ್ದಾರೆ. ಈಗವರ ವಯಸ್ಸು 72.
ಕಾರವಾರ(ಜ.26): ವೃಕ್ಷಮಾತೆ ಎಂದೇ ಖ್ಯಾತರಾಗಿರುವ ಹಾಲಕ್ಕಿ ಸಮುದಾಯದ ಕಾರವಾರ ಜಿಲ್ಲೆಯ ಅಂಕೋಲದ ತುಳಸಿಗೌಡ ಅವರು ಕೇಂದ್ರ ಸರ್ಕಾರ ಕೊಡ ಮಾಡುವ ಪ್ರತಿಷ್ಠಿತ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಅಂಕೋಲ ತಾಲೂಕಿನ ಹೊನ್ನಳ್ಳಿ ಗ್ರಾಮದ ತುಳಸಿ ಗೌಡ (72) ಅವರು, ಯಾವ ವೃಕ್ಷ ವಿಜ್ಞಾನಿಗೂ ಕಡಿಮೆ ಇಲ್ಲದ ಭಂಡಾರ ಜ್ಞಾನ ಹೊಂದಿದ್ದಾರೆ. 23ನೇ ವಯಸ್ಸಿನಲ್ಲಿ ದಿನವೊಂದಕ್ಕೆ ಒಂದೂವರೆ ರು. ಸಂಬಳಕ್ಕಾಗಿ ಅರಣ್ಯ ಇಲಾಖೆಯಲ್ಲಿ ಸಸಿ ನೆಡುವ ಕೆಸಲಕ್ಕೆ ಸೇರಿದ ತುಳಸಿ ಗೌಡ, ಇಂದಿಗೂ ತಮ್ಮ ಕಾರ್ಯದಲ್ಲಿ ನಿರತರಾಗಿದ್ದಾರೆ.
ಸುಧರ್ಮಾ ಸಂಪತ್ ಕುಮಾರ್, ಜಯಲಕ್ಷ್ಮೀ ದಂಪತಿಗೆ ಪದ್ಮಶ್ರೀ
ಸಂಬಳದ ಬಗ್ಗೆ ಯೋಚಿಸದ ತುಳಸಿ ಗೌಡ ಪ್ರತಿದಿನ ನೂರಾರು ಸಸಿಗಳನ್ನು ನೆಟ್ಟು ಆರೈಕೆ ಮಾಡಿದ್ದಾರೆ. ಹೆತ್ತ ಮಗುವಿನಂತೆ ಅಕ್ಕರೆಯಿಂದ ಸಸಿಗಳನ್ನು ಬೆಳೆಸುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ತುಳಸಿ ಅವರ ಶ್ರದ್ಧೆಯನ್ನು ಗಮನಿಸಿ ಪ್ರೋತ್ಸಾಹಿಸಿದರೂ ಕೆಲಸ ಕಾಯಂ ಮಾಡಲು 15ರಿಂದ 20 ವರ್ಷಗಳೇ ಬೇಕಾಯಿತು. ಕಾಯಂ ಆದಾಗಲೂ ಅವರಿಗೆ ಸಿಗುತ್ತಿದ್ದುದು .2500-3000 ಸಂಬಂಳವಷ್ಟೇ. ಆದರೆ ಎಷ್ಟೇ ಬಡತನ ಇದ್ದರೂ ಹಣದ ಬಗ್ಗೆ ಯೋಚಿಸದ ತುಳಸಿ ಅವರಿಗೆ ತಲೆಯಲ್ಲಿದುದು ಸಸಿಗಳನ್ನು ಇನ್ನಷ್ಟು, ಮತ್ತಷ್ಟುನೆಡುವುದು ಮಾತ್ರವಾಗಿತ್ತು.
30 ಸಾವಿರ ಸಸಿ ನೆಟ್ಟದಾಖಲೆ:
ತುಳಸಿ ಅವರಿಗೆ 300ಕ್ಕೂ ಹೆಚ್ಚು ಕಾಡು ಮರಗಳ ಬಗ್ಗೆ ಅಪಾರವಾದ ಜ್ಞಾನ ಇದೆ. ಒಂದೇ ವರ್ಷದಲ್ಲಿ 30 ಸಾವಿರ ಸಸಿಗಳನ್ನು ನೆಟ್ಟದಾಖಲೆಯೂ ಇವರ ಹೆಸರಿನಲ್ಲಿದೆ. ಕಾಡಿನಿಂದ ಬೀಜಗಳನ್ನು ತಂದು ಸಸಿ ಮಾಡಿ ನೆಟ್ಟು ಪೋಷಿಸಿದ ಅವರ ಕಾಯಕದಿಂದ ಅಂಕೋಲಾದ ಬಹುತೇಕ ಕಡೆ ಹಸಿರು ನಳನಳಿಸುತ್ತಿದೆ.