ಮಯೂರ ಹೆಗಡೆ

ಹುಬ್ಬಳ್ಳಿ(ನ.01): ಅನ್ಯಭಾಷಿಕರಿಗೆ ಕನ್ನಡದ ಕಂಪು ಕಲಿಸುವಿಕೆ, ವರ್ಷದುದ್ದಕ್ಕೂ ಸವಿಗನ್ನಡದ ತರಹೇವಾರಿ ಕಾರ್ಯಕ್ರಮಗಳು, ಕನ್ನಡದಲ್ಲಿ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಪುರಸ್ಕಾರ... ಸ್ವಚ್ಛ ಭಾರತ ಯೋಜನೆಯಲ್ಲೂ ಕನ್ನಡದ ಮೂಲ ತೋರಿಸಿಕೊಟ್ಟ ಹೆಗ್ಗಳಿಕೆ..

ಹೌದು. ನೈಋುತ್ಯ ರೈಲ್ವೆ ಹುಬ್ಬಳ್ಳಿಯಲ್ಲಿದ್ದರೂ ಹಿಂದಿ, ಮಲೆಯಾಳಿ, ತೆಲುಗು, ತಮಿಳು... ಹೀಗೆ ಹತ್ತಾರು ಭಾಷಿಕರ ತಾಣ. ಕನ್ನಡವೆ ಗೌಣ ಎಂಬ ಭಾವನೆ ಬಹುತೇಕರಲ್ಲಿದೆ. ಆದರೆ, ಇಲ್ಲಿಯೂ ಕಳೆದ ಹದಿನೇಳು ವರ್ಷದಿಂದ ‘ಭಾರಿಸು ಕನ್ನಡ ಡಿಂಡಿಮ’ ಎನ್ನುತ್ತಿರುವುದು ನೈಋುತ್ಯ ರೈಲ್ವೆ ಕನ್ನಡ ಸಂಘ. ಗ್ರೂಪ್‌ ‘ಡಿ’ ಯಿಂದ ಹಿಡಿದು ಮೇಲಧಿಕಾರಿಗಳವರೆಗೂ ಅನ್ಯಭಾಷಿಕರೆ ತುಂಬಿರುವ ನೈಋುತ್ಯ ರೈಲ್ವೆ ಹೆಸರಿಗೆ ಮಾತ್ರ ಕನ್ನಡದ ವೀರ ನೆಲ ಹುಬ್ಬಳ್ಳಿಯಲ್ಲಿದೆ. ಈ ವಲಯದಲ್ಲಿ ಕನ್ನಡ ಹುಡುಕುವುದೆ ಕಷ್ಟ ಎಂಬ ಭಾವನೆ ಹೋಗಲಾಡಿಸಲು ಈ ಸಂಘ ಶ್ರಮಿಸುತ್ತಿದೆ.

ಕಳೆದ ಹದಿನೇಳು ವರ್ಷದಿಂದ ನಿರಂತರವಾಗಿ ಕನ್ನಡದ ಕೆಲಸ ಸಾಗಿದೆ. 2003ರಲ್ಲಿ ಹುಬ್ಬಳ್ಳಿಯಲ್ಲಿ ನೈಋುತ್ಯ ರೈಲ್ವೆ ಕನ್ನಡ ಸಂಘ ಆರಂಭವಾಯಿತು. ಕನ್ನಡದ ಕಟ್ಟಾಳು ಪಾಟೀಲ್‌ ಪುಟ್ಟಪ್ಪ, ಚೆಂಬೆಳಕಿನ ಕವಿ ಚೆನ್ನವೀರ ಕಣವಿ ಸಂಘ ಉದ್ಘಾಟಿಸಿದ್ದರು. ಹುಬ್ಬಳ್ಳಿ, ಹೊಸಪೇಟೆ, ಬಳ್ಳಾರಿ, ಬೆಳಗಾವಿ, ಮೈಸೂರು ಮಾತ್ರವಲ್ಲದೆ ಗೋವಾದಲ್ಲೂ ಶಾಖೆ ರಚಿಸಿಕೊಂಡು ಕಾರ್ಯ ನಿರ್ವಹಿಸುತ್ತಿದೆ. ಆರಂಭದಲ್ಲಿ 300ರಷ್ಟಿದ್ದ ಸದಸ್ಯರ ಸಂಖ್ಯೆ ಈಗ ಸಾವಿರ ದಾಟಿದೆ. ವಿಭಾಗ, ವಲಯ ಮಾತ್ರವಲ್ಲದೆ ವರ್ಕ್‌ಶಾಪ್‌ನಲ್ಲೂ ಸದಸ್ಯರು ಕನ್ನಡದ ಪರ ಕೆಲಸ ಮಾಡುತ್ತಿದ್ದಾರೆ.

ಹುಬ್ಬಳ್ಳಿ: 35 ಕಿಲೋ ಮೀಟರ್‌ ಪ್ರಯಾಣಿಸಿ ಹೋಂವರ್ಕ್‌ ತೋರಿಸಿದ ಬಾಲಕ...!

ಏನೇನು ಕಾರ್ಯ?:

ಸಂಘದ ಅಧ್ಯಕ್ಷ ಮಹಾಂತಪ್ಪ ನಂದೂರ ಮಾತನಾಡಿ, ಕನ್ನಡದ ಬಗ್ಗೆ ಆಸಕ್ತಿಯುಳ್ಳ ಕೇರಳದ ಕೆಲವರಿಗೆ ಕನ್ನಡ ಓದುವುದು, ಬರೆಯುವುದನ್ನು ಕಲಿಸಿದ್ದೇವೆ. ಆಸಕ್ತಿಯಿಂದ ಯಾರೆ ಬಂದರೂ ಅವರಿಗೆ ಭಾಷೆಯ ಜ್ಞಾನ ನೀಡುತ್ತೇವೆ. ಪ್ರತಿ ತಿಂಗಳು ಎರಡನೇ ಬುಧವಾರ ಕನ್ನಡದ ಕುರಿತು ಗೋಷ್ಠಿ, ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದೇವೆ. ಮಹಿಳಾ ದಿನಾಚರಣೆ, ಪರಿಸರ, ಸಾಹಿತ್ಯ, ಕವಿಗೋಷ್ಠಿ ನಡೆಸುತ್ತೇವೆ. ಕನ್ನಡದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ನಡೆದಿದೆ. ಶೈಕ್ಷಣಿಕ ಕ್ಷೇತ್ರ ಅಂದರೆ ಕನ್ನಡ ಮಾಧ್ಯಮ ಅಥವಾ ಕನ್ನಡ ಭಾಷೆ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಮಕ್ಕಳಿಗೆ ರಾಜ್ಯೋತ್ಸವದಂದು ಪುರಸ್ಕಾರ ನೀಡುತ್ತ ಬಂದಿದ್ದೇವೆ. ಅದೇ ರೀತಿ ಸಾಂಸ್ಕೃತಿಕ ಕ್ಷೇತ್ರ ಅಂದರೆ ರೈಲ್ವೆ ಸಿಬ್ಬಂದಿಗೆ ವಿವಿಧ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಗುತ್ತಿದೆ. ಹುಬ್ಬಳ್ಳಿಯ 20 ಹೈಸ್ಕೂಲ್‌ಗಳ ಮಕ್ಕಳಿಗೆ ಕ್ವಿಜ್‌, ಪ್ರಬಂಧ ಸ್ಪರ್ಧೆ ಆಯೋಜಿಸುತ್ತಿದ್ದೇವೆ ಎಂದರು.

ಸ್ವಚ್ಛ ಭಾರತಕ್ಕೆ ಕನ್ನಡದ ಸ್ಪರ್ಶ

ನೈಋುತ್ಯ ರೈಲ್ವೆ ಸ್ವಚ್ಛ ಭಾರತ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಮುಂದಾದಾಗ ಅದಕ್ಕೂ ಕನ್ನಡದ ಸ್ಪರ್ಶ ನೀಡಿದ್ದು ಈ ಸಂಘಟನೆ. ಕಸಗುಡಿಸುವ ಕೆಲಸ ಮಾಡುತ್ತಿದ್ದ ವಚನಕಾರ್ತಿ ಸತ್ಯಕ್ಕನ ಪರಿಚಯವನ್ನು ಮಹಾಪ್ರಬಂಧಕ ಎ.ಕೆ. ಸಿಂಗ್‌ ಅವರಿಗೆ ಮಾಡಿಕೊಟ್ಟಿತು. ಕಸಗುಡಿಸುತ್ತಿದ್ದ ಸತ್ಯಕ್ಕ ಮನಸ್ಸು ಶುದ್ಧವಾಗಿದ್ದರೆ ಮಾತ್ರ ಹೊರಗಿನ ವಾತಾವರಣವೂ ಶುದ್ಧ ಎಂಬುದನ್ನು ಸಾರಿದವಳು. ಆಕೆ ದುಷ್ಟರ, ಕೆಟ್ಟಕೆಲಸ ಮಾಡಿದವರ ಮನೆಯೆದುರು ಕಸ ಗುಡಿಸುತ್ತಿರಲಿಲ್ಲ. ಸಂಘವು ಈಕೆಯ ಭಾವಚಿತ್ರವನ್ನು ಸ್ವಚ್ಛಭಾರತದ ರಾಯಭಾರಿಯಂತೆ ನೈಋುತ್ಯ ರೈಲ್ವೆ ಪ್ರಧಾನ ಕಚೇರಿಗೆ ಕೊಡುಗೆಯಾಗಿ ನೀಡಿತ್ತು.

ನೈಋುತ್ಯ ರೈಲ್ವೆಯಲ್ಲಿ ಕನ್ನಡದ ಏನಾದರೂ ಕೆಲಸ ಆಗಬೇಕು ಎಂದಾದರೆ ನೈಋುತ್ಯ ರೈಲ್ವೆ ಕನ್ನಡ ಸಂಘವನ್ನು ಕೇಳಿ ಎನ್ನುವಷ್ಟರ ಮಟ್ಟಿಗೆ ಸಂಘ ಕಟ್ಟಿದ್ದೇವೆ. ಕನ್ನಡದ ಕಂಪು ಹರಡುವ ಕಾರ್ಯ ನಿರಂತರವಾಗಿರಲಿದೆ ಎಂದು ನೈಋುತ್ಯ ರೈಲ್ವೆ ಕನ್ನಡ ಸಂಘದ ಅಧ್ಯಕ್ಷ ಮಹಾಂತಪ್ಪ ನಂದೂರ ತಿಳಿಸಿದ್ದಾರೆ.