ಹುಬ್ಬಳ್ಳಿ(ಅ.31): ತಾನು ಮಾಡಿದ್ದ ಹೋಂವರ್ಕ್‌ ಟೀಚರ್‌ಗೆ ತೋರಿಸಲೇಬೇಕೆಂದು ಹಠ ಹಿಡಿದು ತನ್ನ ಅಂಗವಿಕಲ ತಾಯಿಯನ್ನು ಹಳ್ಳಿಯಿಂದ 35 ಕಿಮೀ ದೂರದ ನಗರಕ್ಕೆ ಕರೆದುಕೊಂಡು ಬಂದ ಘಟನೆಯೊಂದು ಶುಕ್ರವಾರ ನಡೆದಿದೆ.
ಕುಂದಗೋಳ ತಾಲೂಕಿನ ಯರೇಬೂದಿಹಾಳ ಗ್ರಾಮದ ಪವನ ಕಂಠಿ (8) ಎಂಬ ಬಾಲಕ ತಾನು ಮಾಡಿದ್ದ ಹೋಂವರ್ಕ್‌ ಹುಬ್ಬಳ್ಳಿಗೆ ಬಂದು ಟೀಚರ್‌ಗೆ ತೋರಿಸಿ ಸೈ ಎನಿಸಿಕೊಂಡಿದ್ದಾನೆ.

ಈ ಬಾಲಕ ಹುಬ್ಬಳ್ಳಿಯ ಸಾಯಿನಗರದಲ್ಲಿರುವ ಕಲ್ಲಪ್ಪ ನಾಗಪ್ಪ ಕೊಕಾಟಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾನೆ. ಈತನ ತಂದೆ ಮೂಗ. ತಾಯಿ ಅಂಗವಿಕಲೆ. ಕೂಲಿ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಅವರಿಗೆ ಪವನ ಕಂಠಿ ಒಬ್ಬನೇ ಪುತ್ರ. ಪುತ್ರ ಚೆನ್ನಾಗಿ ಓದಲಿ ಎಂದು ಹುಬ್ಬಳ್ಳಿಯ ವಸತಿ ನಿಲಯದಲ್ಲಿಟ್ಟು ಓದಿಸುತ್ತಿದ್ದಾರೆ.

ಸದ್ಯ ಎರಡನೆಯ ತರಗತಿಯಲ್ಲಿದ್ದಾನೆ ಪವನ. ಕೊರೋನಾದಿಂದಾಗಿ ಶಾಲೆಗಳಿಗೆ ರಜೆ. ವಸತಿ ನಿಲಯದಲ್ಲಿರುವ ಮಕ್ಕಳನ್ನು ಮನೆಗೆ ಕಳುಹಿಸಲಾಗಿದೆ. ಅದರಂತೆ ಈತನೂ ಕುಂದಗೋಳ ತಾಲೂಕಿನ ಯರೇಬೂದಿಹಾಳದಲ್ಲಿರುವ ತನ್ನ ತಾಯಿ ತಂದೆ ಜತೆಗೆ ಇದ್ದಾನೆ. ಕಳೆದ ತಿಂಗಳು ಈತನ ತಾಯಿ ಶಾಲೆಗೆ ಬಂದು ಪುಸ್ತಕಗಳನ್ನು ತೆಗೆದುಕೊಂಡು ಹೋಗಿದ್ದರು. ಆಗ ಶಿಕ್ಷಕರು, ಮನೆಯಲ್ಲಿ ಅಭ್ಯಾಸ ಮಾಡಲು ಹೋಂವರ್ಕ್ ಕೊಟ್ಟಿದ್ದರು. ಅವನ್ನೆಲ್ಲ ಈ ಬಾಲಕ ಪೂರ್ಣ ಮಾಡಿದ್ದಾನೆ.

ಈ ಊರು ತುಂಬಾ ಐಐಟಿ ವಿದ್ಯಾರ್ಥಿಗಳೇ! ಹೇಗೆ ಅಂತೀರಾ?

ನಾನು ಹೋಂವರ್ಕ್ ಪೂರ್ಣಗೊಳಿಸಿದ್ದೇನೆ. ಇದನ್ನು ಟೀಚರ್‌ಗೆ ತೋರಿಸಬೇಕು. ನಮ್ಮ ಶಾಲೆಯ ಸಮೀಪದಲ್ಲೇ ಟೀಚರ್‌ಮನೆಯಿದೆ. ಹೋಗಿ ತೋರಿಸಿಕೊಂಡು ಬರೋಣ ಎಂದು ತಾಯಿಗೆ ತಿಳಿಸಿದ್ದಾನೆ. ತಾಯಿಯೂ ಎಷ್ಟೇ ಸಮಾಧಾನ ಪಡಿಸಲು ಮುಂದಾದರೂ ಒಪ್ಪಿಲ್ಲ. ನಾನು ಹೋಂವರ್ಕ್ ತೋರಿಸದಿದ್ದಲ್ಲಿ ನನ್ನನ್ನು ಟೀಚರ್‌ ಫೇಲ್‌ ಮಾಡುತ್ತಾರೆ ಎಂದು ಹಠ ಮಾಡಿ ತಾಯಿಯನ್ನು ಕರೆದುಕೊಂಡು ಬಸ್‌ನಲ್ಲಿ 35 ಕಿಮೀ ಕ್ರಮಿಸಿ ಹುಬ್ಬಳ್ಳಿಗೆ ಬಂದಿದ್ದಾನೆ.

ಈತನ ಕ್ಲಾಸ್‌ ಟೀಚರ್‌ ಅನಸೂಯಾ ಅಶೋಕ ಸಜ್ಜನ ಅವರ ಮನೆಗೆ ಹೋಗಿದ್ದಾನೆ. ಈತನ ಓದಿನ ಪ್ರೀತಿ, ಶಿಕ್ಷಕರ ಬಗ್ಗೆ ಇರುವ ಗೌರವ ನೋಡಿ ಶಿಕ್ಷಕಿ ಖುಷಿ ಪಟ್ಟಿದ್ದಾರೆ. ಅಲ್ಲದೇ, ಹಾಗೆಲ್ಲ ನಿನ್ನನ್ನು ಫೇಲ್‌ ಮಾಡಲ್ಲ. ನೀನು ಜಾಣ ವಿದ್ಯಾರ್ಥಿ ಎಂದು ಸಮಾಧಾನಪಡಿಸಿ, ಆತನಿಗೆ ಮತ್ತಷ್ಟು ಹೋಂವರ್ಕ್ ಕೊಟ್ಟಿದ್ದಾರೆ. ಅಲ್ಲದೇ, ಇವನ್ನು ಮಾಡಿ ಮನೆಯಲ್ಲೇ ಇಟ್ಟಿಕೊ. ಅವನ್ನು ತೋರಿಸಲು ಬರಬೇಡ ಎಂದು ತಿಳಿ ಹೇಳಿದ್ದಾರೆ. ಅಲ್ಲದೇ, ಮನೆಯ ಪಕ್ಕದಲ್ಲಿರುವ ಯಾರಾದರೂ ಮೊಬೈಲ್‌ ನಂಬರ್‌ನಿಂದ ನನಗೆ ಮಿಸ್ಡ್‌ಕಾಲ್‌ ಕೊಡಿ. ನಾನೇ ಕರೆ ಮಾಡಿ ನಿಮ್ಮ ಮಗನ ವಿದ್ಯಾಭ್ಯಾಸದ ಕುರಿತು ವಿಚಾರಿಸುತ್ತೇನೆ ಎಂದು ತಾಯಿಗೂ ತಿಳಿಸಿದ್ದಾರೆ. ಅಲ್ಲದೇ, ಬಾಲಕನಿಗೆ ನೋಟ್‌ಬುಕ್‌, ಪೆನ್ಸಿಲ್‌, ಬಿಸ್ಕತ್‌ಗಳನ್ನು ಕೊಟ್ಟು ಕಳುಹಿಸಿದ್ದಾರೆ.

ಪವನ ಕಂಠಿ ಹೋಂವರ್ಕ್ ತೋರಿಸಲೆಂದೇ ಮನೆಗೆ ಬಂದಿದ್ದ. ಅವರದು ಕೂಲಿಕಾರ್ಮಿಕರ ಕುಟುಂಬ. ಮನೆಯಲ್ಲಿ ಮೊಬೈಲ್‌ಕೂಡ ಇಲ್ಲ. ಹೀಗಾಗಿ ಹಠ ಮಾಡಿ ತಾಯಿಯನ್ನು ಕರೆದುಕೊಂಡು ಬಂದಿದ್ದ ಎಂದು ಶಿಕ್ಷಕಿ ಅಶೋಕ ಸಜ್ಜನ  ಅನಸೂಯಾ ತಿಳಿಸಿದ್ದಾರೆ.