ನೈಋತ್ಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕಾಗಿ ಜೂನ್ 20 ಮತ್ತು 21 ರಂದು ಹುಬ್ಬಳ್ಳಿ ಮತ್ತು ಚಿಕ್ಕಮಗಳೂರು ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಆರಂಭಿಸಿದೆ. ಈ ರೈಲು 5 ಜಿಲ್ಲೆಗಳ ಮೂಲಕ ಹಾದುಹೋಗಲಿದ್ದು, ಪ್ರವಾಸಿಗರಿಗೆ ಅನುಕೂಲಕರವಾದ ವೇಳಾಪಟ್ಟಿಯನ್ನು ಹೊಂದಿದೆ.
ಧಾರವಾಡ: ಹುಬ್ಬಳ್ಳಿ ಮತ್ತು ಪ್ರವಾಸಿ ತಾಣಗಳಿರುವ ಚಿಕ್ಕಮಗಳೂರು ನಡುವೆ ಪ್ರಯಾಣಿಸುವ ಜನರಿಗೆ ನೈಋತ್ಯ ರೈಲ್ವೆಯು ಭರ್ಜರಿ ಸಿಹಿ ಸುದ್ದಿ ನೀಡಿದೆ. ವಾರಾಂತ್ಯದ ದಿನಗಳಲ್ಲಿ ಪ್ರಯಾಣಿಕರ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಹಾಗೂ ರೈಲುಗಳಲ್ಲಿನ ಹೆಚ್ಚುವರಿ ಜನದಟ್ಟಣೆಯನ್ನು ನಿವಾರಿಸುವ ಉದ್ದೇಶದಿಂದ ಜೂನ್ 20 ಮತ್ತು 21 ರಂದು ಈ ಎರಡೂ ನಗರಗಳ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಈ ರೈಲು ಉತ್ತರ ಮತ್ತು ಮಧ್ಯ ಕರ್ನಾಟಕದ ಒಟ್ಟು 5 ಜಿಲ್ಲೆಗಳ ಮೂಲಕ ಹಾದುಹೋಗಲಿದ್ದು, ಮಾನ್ಸೂನ್ ಪ್ರಕೃತಿ ಸವಿಯಲು ಇದೊಂದು ಆಫರ್ ನೀಡಿದಂತಿದೆ. ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಅತ್ಯಂತ ಅನುಕೂಲಕರವಾದ ಈ ರೈಲಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ರೈಲಿನ ವೇಳಾಪಟ್ಟಿ ಮತ್ತು ಸಂಚಾರದ ವಿವರ
ಈ ವಿಶೇಷ ರೈಲನ್ನು ಜೂನ್ 20 (ಶನಿವಾರ) ಮತ್ತು ಜೂನ್ 21 (ಭಾನುವಾರ) ರಂದು ಒಟ್ಟು ಎರಡು ಟ್ರಿಪ್‌ಗಳ ಕಾಲ ಓಡಿಸಲಾಗುತ್ತಿದೆ.
ಹುಬ್ಬಳ್ಳಿ - ಚಿಕ್ಕಮಗಳೂರು ವಿಶೇಷ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 07341): ಜೂನ್ 20 ಮತ್ತು 21 ರಂದು ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಬೆಳಗ್ಗೆ 5 ಗಂಟೆಗೆ ಹೊರಟು, ಅದೇ ದಿನ ಬೆಳಗ್ಗೆ 11:15 ಕ್ಕೆ ಚಿಕ್ಕಮಗಳೂರು ನಿಲ್ದಾಣವನ್ನು ತಲುಪಲಿದೆ.
ಚಿಕ್ಕಮಗಳೂರು - ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 07342): ಜೂನ್ 20 ಮತ್ತು 21 ರಂದು ಚಿಕ್ಕಮಗಳೂರಿನಿಂದ ಸಂಜೆ 5:30 ಕ್ಕೆ ಹೊರಟು, ಅದೇ ದಿನ ರಾತ್ರಿ 11:20 ಕ್ಕೆ ಹುಬ್ಬಳ್ಳಿ ನಿಲ್ದಾಣಕ್ಕೆ ಬಂದು ತಲುಪಲಿದೆ.
ಎಲ್ಲೆಲ್ಲಿ ನಿಲುಗಡೆ ಇರಲಿದೆ? (ಮಾರ್ಗ ಮತ್ತು ನಿಲ್ದಾಣಗಳು)
ಪ್ರಯಾಣಿಕರ ಅನುಕೂಲಕ್ಕಾಗಿ ಈ ವಿಶೇಷ ಎಕ್ಸ್‌ಪ್ರೆಸ್ ರೈಲು ಮಾರ್ಗಮಧ್ಯೆ ಪ್ರಮುಖ ನಗರಗಳು ಸೇರಿದಂತೆ ಒಟ್ಟು 15 ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
ಪ್ರಮುಖ ನಿಲುಗಡೆಗಳು: ಕುಂದಗೋಳ, ಸಂಶಿ (ಸೌಂಶಿ), ಯಳವಿಗಿ, ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು(ಚಿತ್ರದುರ್ಗ), ರಾಮಗಿರಿ, ಅಜ್ಜಂಪುರ, ಬೀರೂರು, ಕಡೂರು, ಬಿಸ್ಲೆಹಳ್ಳಿ, ಸಖರಾಯಪಟ್ಟಣ ಹಾಗೂ ಕಣಿವೆಹಳ್ಳಿ.
ಬೋಗಿಗಳ ವಿವರ
ಈ ವಿಶೇಷ ರೈಲು ಒಟ್ಟು 10 ಬೋಗಿಗಳನ್ನು (Coaches) ಒಳಗೊಂಡಿರುತ್ತದೆ. ಸಾಮಾನ್ಯ ಮತ್ತು ಮಧ್ಯಮ ವರ್ಗದ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬೋಗಿಗಳನ್ನು ವಿನ್ಯಾಸಗೊಳಿಸಲಾಗಿದೆ:
- 1 ಸ್ಲೀಪರ್ ಕ್ಲಾಸ್ ಬೋಗಿ (Sleeper Class)
- 7 ಸಾಮಾನ್ಯ ದರ್ಜೆ ಬೋಗಿಗಳು (General Coach)
- 2 ದ್ವಿತೀಯ ದರ್ಜೆ ಲಗೇಜ್ ಕಮ್ ಬ್ರೇಕ್ ವ್ಯಾನ್ ಹಾಗೂ ದಿವ್ಯಾಂಗರ ವಿಶೇಷ ಕಂಪಾರ್ಟ್‌ಮೆಂಟ್ ಬೋಗಿಗಳು.
ಪ್ರವಾಸಿಗರಿಗೆ ಸೂಕ್ತ ಸಮಯದ ಪ್ಲಾನಿಂಗ್!
ನೈಋತ್ಯ ರೈಲ್ವೆ ಅಧಿಕಾರಿಗಳು ಈ ರೈಲಿನ ವೇಳಾಪಟ್ಟಿಯನ್ನು ಪ್ರವಾಸಿಗರಿಗೆ ಅತ್ಯಂತ ಅನುಕೂಲವಾಗುವ ರೀತಿಯಲ್ಲಿ ಸಿದ್ಧಪಡಿಸಿದ್ದಾರೆ.
ರೈಲು ಬೆಳಗ್ಗೆ 11:15ಕ್ಕೆ ಚಿಕ್ಕಮಗಳೂರು ತಲುಪುವುದರಿಂದ, ಪ್ರವಾಸಿಗರು ಆರಾಮವಾಗಿ ಮಧ್ಯಾಹ್ನದ ವೇಳೆಗೆ ಚಿಕ್ಕಮಗಳೂರಿನ ಪ್ರಸಿದ್ಧ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ ಮುಂತಾದ ಕಡೆ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ ಮಾಡಲು ಸಾಕಷ್ಟು ಸಮಯ ಸಿಗುತ್ತದೆ.
ಇನ್ನು ಹಿಂದಿರುಗುವಾಗ ಭಾನುವಾರ ಸಂಜೆ 5:30ಕ್ಕೆ ರೈಲು ಇರುವುದರಿಂದ, ವೀಕೆಂಡ್‌ನಲ್ಲಿ ಇಡೀ ದಿನ ಸುತ್ತಾಡಿ, ಯಾವುದೇ ಆತುರವಿಲ್ಲದೇ ಆರಾಮವಾಗಿ ರೈಲು ಹತ್ತಿ ರಾತ್ರಿಯೊಳಗೆ ಹುಬ್ಬಳ್ಳಿಗೆ ತಲುಪಬಹುದಾಗಿದೆ. ಸಾರ್ವಜನಿಕರು ಹಾಗೂ ಪ್ರಕೃತಿ ಪ್ರೇಮಿಗಳು ಈ ವಿಶೇಷ ರೈಲು ಸೇವೆಯ ಸದುಪಯೋಗ ಪಡಿಸಿಕೊಳ್ಳಬೇಕಾಗಿ ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ಕೋರಿದೆ.


