ಬೆಂಗಳೂರು [ಆ.21]:  ನೆಲದ ಮೇಲಿನ ವಿದ್ಯುತ್‌ ಮಾರ್ಗಗಳ ಬದಲು ನೆಲದಡಿ ಒಟ್ಟು 18 ಸಾವಿರ ಕಿಲೋ ಮೀಟರ್‌ ಉದ್ದದ ವಿದ್ಯುತ್‌ ಕೇಬಲ್‌ಗಳನ್ನು ಅಳವಡಿಸುವ ಮಹತ್ವಾಕಾಂಕ್ಷಿ ಯೋಜನೆ ಟೆಂಡರ್‌ ಪ್ರಕ್ರಿಯೆಯಲ್ಲಿದ್ದು, ಶೀಘ್ರವೇ ಕಾಮಗಾರಿ ಆರಂಭಿಸುವುದಾಗಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ತಿಳಿಸಿದರು.

ಮಂಗಳವಾರ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಮಂಡಳಿ (ಎಫ್‌ಕೆಸಿಸಿಐ) ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಸ್ಕಾಂ ವ್ಯಾಪ್ತಿಯಲ್ಲಿ ನೆಲದಡಿ ಸುಮಾರು 5200 ಕೋಟಿ ರು. ವೆಚ್ಚದಲ್ಲಿ ಮೂರು ಹಂತದಲ್ಲಿ 6 ಸಾವಿರ ಕಿ.ಮೀ. ಹೈ ಟೆನ್ಷನ್‌ ಕೇಬಲ್‌ ಮತ್ತು 12 ಸಾವಿರ ಕಿ.ಮೀ. ಲೋ ಟೆನ್ಷನ್‌ ಕೇಬಲನ್ನು ಅಳವಡಿಸುವ ಯೋಜನೆ ಇದಾಗಿದೆ. ಈ ವರ್ಷ ಮೊದಲ ಹಂತದ ಕಾಮಗಾರಿಗೆ ಟೆಂಡರ್‌ ಮಾಡಲಾಗಿದ್ದು, ಶೀಘ್ರವೇ ಕಾರ್ಯಾರಂಭ ಆಗಲಿದೆ. ಮೊದಲ ಹಂತಕ್ಕೆ ಸುಮಾರು 1800 ಕೋಟಿ ರು. ವೆಚ್ಚ ಅಂದಾಜಿಸಲಾಗಿದ್ದು, ಈ ಯೋಜನೆ ಮೂರು ವರ್ಷದಲ್ಲಿ ಮುಕ್ತಾಯವಾಗಲಿದೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶ, ಕೈಗಾರಿಕಾ ಪ್ರದೇಶ ಮತ್ತು ತುಮಕೂರಿನ ಕೆಲವು ಪ್ರದೇಶಗಳಲ್ಲಿ ನೆಲದಡಿ ವಿದ್ಯುತ್‌ ಮಾರ್ಗ ಅಳವಡಿಸುವ ಕುರಿತು ಜಾಗ ಪರಿಶೀಲನೆ ನಡೆದಿದೆ. ಬೆಸ್ಕಾಂ ಮುಖ್ಯ ಎಂಜಿನಿಯರ್‌ ಸೇರಿದಂತೆ ಇತರ ಅಧಿಕಾರಿಗಳು ನಿಗದಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ಆರ್ಥಿಕ ಇಲಾಖೆ ಯೋಜನೆಗೆ ಅನುದಾನ ನೀಡುತ್ತಿದ್ದು, ವಿದ್ಯುತ್‌ ಸಮಸ್ಯೆ ಉಂಟಾಗದಂತೆ ವ್ಯವಸ್ಥೆ ಮಾಡಲು ಈ ಯೋಜನೆ ಸಹಕಾರಿಯಾಗಲಿದೆ ಎಂದರು.

ಕಾಚೋಹಳ್ಳಿ, ಮಾಚೋಹಳ್ಳಿ ಮತ್ತು ಮಾಲೂರು ಪ್ರದೇಶಗಳಲ್ಲಿ ವಿದ್ಯುತ್‌ ಕಾಮಗಾರಿಗಳ ಹಿನ್ನೆಲೆಯಲ್ಲಿ ಕೈಗಾರಿಕೆಗಳಿಗೆ ಸಾಕಷ್ಟುಸಮಸ್ಯೆ ಆಗುತ್ತಿದೆ. ಅಲ್ಲದೇ ಬೆಸ್ಕಾಂ ಅಧಿಕಾರಿಗಳು ನಿರ್ವಹಿಸುತ್ತಿರುವ ವಾಟ್ಸಪ್‌ ಗ್ರೂಪ್‌ಗಳಲ್ಲಿ ಲೋಡ್‌ಶೆಡ್ಡಿಂಗ್‌ 10 ಗಂಟೆಗೆ ಮಾಡುವುದಿದ್ದರೆ ಬೆಳಗ್ಗೆ 9ಕ್ಕೆ ಮಾಹಿತಿ ನೀಡಲಾಗುತ್ತಿದೆ. ಇದರಿಂದ ಕೈಗಾರಿಕೆ ತೊಂದರೆ ಆಗುತ್ತಿದೆ. ಒಂದು ದಿನ ಮೊದಲೇ ಮಾಹಿತಿ ನೀಡಿದರೆ ಕಾರ್ಯಕ್ರಮ ರೂಪಿಸಿಕೊಳ್ಳಲು ನೆರವಾಗುತ್ತದೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಕೈಗಾರಿಕೋದ್ಯಮಿ ಶಶಿಧರ್‌ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಎಫ್‌ಕೆಸಿಸಿಐನಿಂದ ವಿವಿಧ ಬೇಡಿಕೆಗಳನ್ನು ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಎಫ್‌ಕೆಸಿಸಿ ಅಧ್ಯಕ್ಷ ಸಿ.ಆರ್‌.ಜನಾರ್ಧನ್‌, ಪೆರಿಕಲ್‌ ಎಂ.ಸುಂದರ್‌, ಐ.ಎಸ್‌.ಪ್ರಸಾದ್‌, ಬೆಸ್ಕಾಂ ನಿರ್ದೇಶಕ (ಟೆಕ್ನಿಕಲ್‌) ಉದಯಕುಮಾರ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.

 ಹೆಚ್ಚುವರಿ ವಿದ್ಯುತ್‌ ಇಲ್ಲ :  ಹೊಸ ಕಟ್ಟಡ ನಿರ್ಮಾಣ ಮಾಡದೆ ಇರುವ ಜಾಗದಲ್ಲೇ ಹೊಸ ಯಂತ್ರ ಅಳವಡಿಸಿಕೊಂಡರೆ, ಹೊಸ ದಾಖಲೆ ಇಲ್ಲದೆ ಹೆಚ್ಚುವರಿ ವಿದ್ಯುತ್‌ ಪೂರೈಕೆಗೆ ಬೆಸ್ಕಾಂ ಅನುಮತಿ ನೀಡುತ್ತದೆ. ಆದರೆ ಹೊಸ ಕಟ್ಟಡದಲ್ಲಿ ಯಂತ್ರಗಳನ್ನು ಅಳವಡಿಸಿಕೊಂಡರೆ ಹೆಚ್ಚುವರಿ ವಿದ್ಯುತ್‌ ಪೂರೈಕೆ ನೀಡಲು ಸಾಧ್ಯವಿಲ್ಲ. ಅನಿಯಮಿತ ಲೋಡ್‌ ಶೆಡ್ಡಿಂಗ್‌ನಿಂದ ಕೈಗಾರಿಕೆಗಳಿಗೆ ಮಾತ್ರವಲ್ಲ ಬೆಸ್ಕಾಂಗೂ ನಷ್ಟಆಗುತ್ತಿದೆ. ಶೀಘ್ರವೇ ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಿಖಾ ಭರವಸೆ ನೀಡಿದರು.