ಒಳಗೊಳಗೆ ನಡೆಯುತ್ತಿದೆ JDSನಲ್ಲಿ ತಯಾರಿ : ಶೀಘ್ರ ನಿಖಿಲ್ ರಾಜಕೀಯ ಶುರು
ಜೆಡಿಎಸ್‌ನಲ್ಲಿ ಒಳಗೊಳಗೆ ತಯಾರಿಯು ನಡೆಯುತ್ತಿದೆ. ರಾಜಕೀಯ ಚಟುವಟಿಕೆಗಳು ಜೋರಾಗಿದ್ದು, ಹೊ ಸುದ್ದಿಗಳು ಹೊರಬರುತ್ತಿದೆ
ರಾಮನಗರ (ನ.19): 2023ರ ವಿಧಾನಸಭಾ ಕ್ಷೇತ್ರ ಚುನಾವಣೆ ಹಾಗೂ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಸ್ಪರ್ಧೆ ಬಗ್ಗೆಯಾಗಲಿ ಪಕ್ಷದಲ್ಲಿ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.
ನಗರದಲ್ಲಿ ಆರ್‌ಟಿಒ ಕಚೇರಿಗಾಗಿ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರೆವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುತ್ರ ನಿಖಿಲ್‌ಗೆ ಕ್ಷೇತ್ರ ತ್ಯಾಗ ಮಾಡುವಿರಾ ಎಂಬ ಪ್ರಶ್ನೆಗೆ ಈಗ ಅದರ ಚರ್ಚೆ ಅಗತ್ಯವಿಲ್ಲ ಎಂದಷ್ಟೇ ಉತ್ತರಿಸಿದರು.
ರಾಮನಗರ ನಮ್ಮ ಕುಟುಂಬದ ಕರ್ಮಭೂಮಿ. ನಿಖಿಲ್ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷನಾಗಿ ಹಾಗೂ ಇಲ್ಲಿನ ಜನರ ಪ್ರೀತಿಗೆ ಪಾತ್ರನಾಗಿದ್ದಾನೆ. ಪಕ್ಷ ಸಂಘಟನೆಯನ್ನು ಜಿಲ್ಲೆಯಿಂದಲೇ ಆರಂಭಿಸಬೇಕು ಎಂಬ ಕಾರಣಕ್ಕೆ ನಿಖಿಲ್ ಹೆಚ್ಚಿನ ಒತ್ತು ನೀಡುತ್ತಿದ್ದಾನೆ. ಜೊತೆಗೆ, ಪಕ್ಷ ಬಲಪಡಿಸುವ ಸಲುವಾಗಿ ರಾಜ್ಯದ ಎಲ್ಲೆಡೆ ಸಂಚಾರ ನಡೆಸುತ್ತಿದ್ದಾನೆ. ಇದರೊಟ್ಟಿಗೆ ರಾಮನಗರಕ್ಕೂ ಬಂದಿದ್ದಾನೆ ಎಂದು ಸಮರ್ಥಿಸಿಕೊಂಡರು.
ಕ್ಷೇತ್ರವನ್ನು ಪುತ್ರ ನಿಖಿಲ್ಗೆ ಬಿಟ್ಟು ಕೊಡಲು ಎಲ್ಲ ರೀತಿಯ ಸಿದ್ಧತೆಗಳನ್ನು ಒಳಗೊಳಗೆ ಜೆಡಿಎಸ್ ಪಕ್ಷ ಮಾಡಿಕೊಳ್ಳುತ್ತಿದೆ. ಅದಕ್ಕೆ ಪುಷ್ಠಿ ನೀಡುವಂತೆ ರಾಮನಗರಲ್ಲಿ ನಿಖಿಲ್ ಕುಮಾರಸ್ವಾಮಿ ತಮ್ಮ ಕಾರ್ಯ ಚಟುವಟಿಕೆಗಳನ್ನು ಶುರು ಮಾಡಿಕೊಂಡಿದ್ದಾರೆ. ಈಗಾಗಲೇ ಸಿದ್ಧತೆಯಲ್ಲಿ ತೊಡಗಿರುವ ಅವರು ಜನರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಕುಮಾರಣ್ಣನ ಜತೆ ಮಾತನಾಡಿ ಬಗೆಹರಿಸಿಕೊಡುತ್ತೇನೆ ಎಂಬ ಭರವಸೆ ಕೊಡುತ್ತಿದ್ದಾರೆ.
ತಮ್ಮ ಅನಾರೋಗ್ಯ ಸಮಸ್ಯೆ ಬಗ್ಗೆ ತಿಳಿಸಿದ ಅನಿತಾ ಕುಮಾರಸ್ವಾಮಿ : ವೈದ್ಯರ ಸೂಚನೆ ಇತ್ತೆಂದ ಶಾಸಕಿ ..
ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾಗಿ ತಮ್ಮ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದಾರೆ. ಇಬ್ಬರು ತಮ್ಮ ತಮ್ಮ ಪಕ್ಷಗಳಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕ್ಷೇತ್ರಕ್ಕೆ ತಿಂಗಳುಗಟ್ಟಲೆ ಬರಲಿಲ್ಲ ಎಂದು ನಾಗರೀಕರು ಆಕ್ರೋಶಗೊಂಡಿದ್ದಾರೆ ಎಂದು ಸುದ್ದಿಗಾರರು ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಅನಿತಾ, ತಮಗೆ ಸೈನಸ್ ಸಮಸ್ಯೆ ಇದ್ದಿದ್ದರಿಂದ ವೈದ್ಯರು ಮೂರು ತಿಂಗಳುಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದರಿಂದ ಕ್ಷೇತ್ರಕ್ಕೆ ಬರಲಾಗಲಿಲ್ಲ. ಆದರೆ, ಕ್ಷೇತ್ರದ ಅವಶ್ಯಕತೆಗಳ ಬಗ್ಗೆ ತಾವು ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿ ಇದ್ದದ್ದಾಗಿ ತಿಳಿಸಿದರು. ಜೆಡಿಎಸ್ ಮುಖಂಡರಾದ ರಾಜಶೇಖರ್, ಬಿ.ಉಮೇಶ್, ಅಜಯ್ ದೇವೇಗೌಡ, ಪಿ.ಅಶ್ವಥ್, ಜಯಕುಮಾರ್ , ರಾಜಶೇಖರ್ , ಕುಮಾರ್ ಗೌಡ ಮತ್ತಿತರರು ಹಾಜರಿದ್ದರು.