ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಡಿಸೆಂಬರ್‌ ವೇಳೆಗೆ ರಾಜ್ಯಾದ್ಯಂತ ಆರಂಭಗೊಳ್ಳಲಿರುವ 438 ನಮ್ಮ ಕಿನ್ಲಿಕ್‌ಗಳ ಪೈಕಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತವರು ಜಿಲ್ಲೆಗೆ ಬರೀ 3 ಮಾತ್ರ ನಮ್ಮ ಕಿನ್ಲಿಕ್‌ಗಳು ಮಂಜೂರಾಗಿದೆ.

ಕಾಗತಿ ನಾಗರಾಜಪ್ಪ.

 ಚಿಕ್ಕಬಳ್ಳಾಪುರ (ಅ.08) ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಡಿಸೆಂಬರ್‌ ವೇಳೆಗೆ ರಾಜ್ಯಾದ್ಯಂತ ಆರಂಭಗೊಳ್ಳಲಿರುವ 438 ನಮ್ಮ ಕಿನ್ಲಿಕ್‌ಗಳ ಪೈಕಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತವರು ಜಿಲ್ಲೆಗೆ ಬರೀ 3 ಮಾತ್ರ ನಮ್ಮ ಕಿನ್ಲಿಕ್‌ಗಳು ಮಂಜೂರಾಗಿದೆ.

ಹೌದು, ಬಡತನ ರೇಖೆಗಿಂತ (BPL) ಕೆಳಗಿರುವ ಜನರಿಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಅದರಲ್ಲೂ ನಗರ ಪ್ರದೇಶದ ಜನತೆಗೆ ಉತ್ತಮ ವೈದ್ಯಕೀಯ (Medicle) ಸೌಲಭ್ಯ ಸಿಗಬೇಕೆಂಬ ರೂಪರೇಷದೊಂದಿಗೆ ಆರಂಭಿಸಲಾಗುತ್ತಿರುವ ನಮ್ಮ ಕ್ಲಿನಿಕ್‌ ಜಿಲ್ಲೆಯ ಚಿಂತಾಮಣಿ, ಚಿಕ್ಕಬಳ್ಳಾಪುರ ಹಾಗೂ ಬಾಗೇಪಲ್ಲಿ ಪಟ್ಟಣಕ್ಕೆ ತಲಾ ಒಂದೊಂದು ಮಂಜೂರಾಗಿದೆ.

ಜಿಲ್ಲೆಯಲ್ಲಿ ಮೂರು ನಮ್ಮ ಕ್ಲಿನಿಕ್‌

50 ಸಾವಿರ ಜನಸಂಖ್ಯೆ ಇರುವ ನಗರಗಳಿಗೆ ಮೊದಲ ಆದ್ಯತೆ ನಮ್ಮ ಕ್ಲಿನಿಕ್‌ಗಳನ್ನು ತೆರೆಯಲು ಆರೋಗ್ಯ ಇಲಾಖೆ ನಿರ್ಧರಿಸಿದ್ದು ಆ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ, ಚಿಂತಾಮಣಿ ನಗರಗ 50 ಸಾವಿರ ಜನಸಂಖ್ಯೆ ದಾಟಿ ಶರವೇಗದಲ್ಲಿ ಬೆಳೆಯುತ್ತಿದ್ದು 3 ನಮ್ಮ ಕ್ಲಿನಿಕ್‌ಗಳ ಪೈಕಿ ಚಿಂತಾಮಣಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ತಲಾ ಒಂದು ಕ್ಲಿನಿಕ್‌ ತೆರೆಲು ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ಧರಿಸಿದ್ದು ಮತ್ತೊಂದನ್ನು ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದ ತಾಲೂಕಾದ ಬಾಗೇಪಲ್ಲಿ ಪಟ್ಟಣದಲ್ಲಿ 1 ನಮ್ಮ ಕ್ಲಿನಿಕ್‌ ಸ್ಥಾಪನೆಗೆ ಆರೋಗ್ಯ ಇಲಾಖೆ ಮುಂದಾಗಿದೆ.

ಗೌರಿಬಿದನೂರಲ್ಲಿ ಜನಸಂಖ್ಯೆ 50 ಸಾವಿರ ಮೀರಿದ್ದರೂ ಅಲ್ಲಿ ಸ್ಥಳೀಯವಾಗಿ ನಗರ ಆರೋಗ್ಯ ಕೇಂದ್ರ ಇದೆ. ಆದರೆ ಬಾಗೇಪÜಲ್ಲಿ ಪಟ್ಟಣದಲ್ಲಿ ನಗರ ಭಾಗದಲ್ಲಿ ಆರೋಗ್ಯ ಕೇಂದ್ರ ಇಲ್ಲದ ಕಾರಣಕ್ಕೆ ನಮ್ಮ ಕ್ಲಿನಿಕ್‌ ಆರಂಭಿಸಲು ನಿರ್ಧಾರಿಸಲಾಗಿದೆಯೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಸ್‌.ಎಸ್‌.ಮಹೇಶ್‌ ಶುಕ್ರವಾರ ಕನ್ನಡಪ್ರಭಗೆ ತಿಳಿಸಿದರು.

ಪಟ್ಟಣಗಳಿಗೂ ಯೋಜನೆ ಲಾಭ

ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಜೊತೆಗೆ ಹೋಬಳಿ ಮಟ್ಟದಲ್ಲಿ ಕೂಡ ಸಮುದಾಯ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ನಗರ ಪಟ್ಟಣ ಪ್ರದೇಶದಲ್ಲಿ ಜನಸಂಖ್ಯೆಗೆ ಅನುಗುಣಮವಾಗಿ ಆಸ್ಪತ್ರೆಗಳು ಇಲ್ಲ. ಜೊತೆಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿರುವ ಸಾರ್ವಜನಿಕ ಆಸ್ಪತ್ರೆ ಮೇಲಿನ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ನಗರ ಪ್ರದೇಶಗಳಲ್ಲಿ ನಮ್ಮ ಕ್ಲಿನಿಕ್‌ ತೆರೆಯಲು ಯೋಜನೆ ರೂಪಿಸಿ ಅನುಷ್ಟಾನಕ್ಕೆ ಮುಂದಾಗಿದೆ. ಆದರೆ ಆರೋಗ್ಯ ಸಚಿವರ ತವರು ಜಿಲ್ಲೆಗೆ ಬರೀ 3 ಕ್ಲಿನಿಕ್‌ಗಳು ಅಷ್ಟೇ ಮಂಜೂರಾಗಿದ್ದು ಗೌರಿಬಿದನೂರು, ಶಿಡ್ಲಘಟ್ಟಹಾಗೂ ಗುಡಿಬಂಡೆ ಪಟ್ಟಣಕ್ಕೆ ಯೋಜನೆ ಲಾಭ ಸಿಗಬೇಕು ಎಂಬುದು ಜಿಲ್ಲೆಯ ಜನರ ಅಭಿಲಾಷೆಯಾಗಿದೆ.

ಬಾಕ್ಸ್‌

2 ನಮ್ಮ ಕ್ಲಿನಿಕ್‌ಗೆ ಸರ್ಕಾರಿ ಕಟ್ಟಡ

ಜಿಲ್ಲೆಗೆ ಮಂಜೂರಾಗಿರುವ 3 ನಮ್ಮ ಕ್ಲಿನಿಕ್‌ಗಳ ಕಾರ್ಯಾರಂಭಕ್ಕೆ ಆರೋಗ್ಯ ಇಲಾಖೆ ಸಕಲ ಸಿದ್ದತೆ ಕೈಗೊಂಡಿದೆ. ಈಗಾಗಲೇ ಬಾಗೇಪಲ್ಲಿ ಹಾಗೂ ಚಿಂತಾಮಣಿ ನಗರದಲ್ಲಿ ನಮ್ಮ ಕ್ಲಿನಿಕ್‌ ಆರಂಭಕ್ಕೆ ಸರ್ಕಾರದ ಕಟ್ಟಡವೇ ದೊರೆತಿದ್ದು ನವೀಕರಣ ಕಾರ್ಯ ನಡೆದಿದೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ನಮ್ಮ ಕ್ಲಿನಿಕ್‌ ಆರಂಭಿಸಲು ಸರ್ಕಾರಿ ಕಟ್ಟಡ ಇದುವರೆಗೂ ಸಿಕ್ಕಿಲ್ಲ. ಸಿಗದೇ ಹೋದರೆ ಖಾಸಗಿ ಕಟ್ಟಡದಲ್ಲಿ ಆರಂಭಿಸಲಾಗುವುದು. ಈಗಾಗಲೇ ನಮ್ಮ ಕ್ಲಿನಿಕ್‌ಗೆ ಬೇಕಾದ ವೈದ್ಯಕೀಯ ಸಿಬ್ಬಂದಿ ನೇಮಕಾತಿ ಪೂರ್ಣಗೊಂಡಿದೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ದಿನಾಂಕ ಕೊಟ್ಟಕೂಡಲೇ ನಮ್ಮ ಕ್ಲಿನಿಕ್‌ಗಳಿಗೆ ಜಿಲ್ಲೆಯಲ್ಲಿ ಚಾಲನೆ ನೀಡಲಾಗುವುದೆಂದು ಜಿಲ್ಲಾ ಆರೋಗ್ಯಾಧಿಕಾರಿ ಎಸ್‌.ಎಸ್‌.ಮಹೇಶ್‌ ವಿವರಿಸಿದರು.