ಶೀಘ್ರದಲ್ಲೇ ಸುಮಲತಾ ಬೆಂಬಲಿಗ ಹಾಗೂ ಪ್ರಭಾವಿ ನಾಯಕ ಬಿಜೆಪಿ ಸೇರ್ಪಡೆ ಖಚಿತವಾಗಿದೆ. ಈ ಸಂಬಂಧ ಮಾತುಕತೆಗಳು ಪೂರ್ಣಗೊಂಡಿವೆ.
ಮಂಡ್ಯ(ಮಾ.17): ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಯುವ ಮುಖಂಡ ಹಾಗೂ ಸುಮಲತಾ ಬೆಂಬಲಿಗ ಎಸ್. ಸಚ್ಚಿದಾನಂದ ಅವರು ಶೀಘ್ರದಲ್ಲೇ ಕಮಲ ಪಾಳಯ ಸೇರುವುದು ನಿಶ್ಚಿತವಾಗಿದೆ. ಈಗಾಗಲೇ ಪಕ್ಷ ಸೇರುವ ಕುರಿತಂತೆ ಮಾತುಕತೆ ಪೂರ್ಣಗೊಂಡಿದ್ದು, ಪಕ್ಷಕ್ಕೆ ಸೇರಿಸಿಕೊಳ್ಳುವುದಕ್ಕೆ ವರಿಷ್ಠರಿಂದ ಗ್ರೀನ್ ಸಿಗ್ನಲ್ ದೊರಕಿದೆ.
ಕಳೆದ ಲೋಕಸಭೆ ಸಾರ್ವತ್ರಿಕ ಚುನಾವಣೆ ವೇಳೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಕೆಲಸ ಮಾಡಿದರೆಂಬ ಕಾರಣಕ್ಕೆ ಕಾಂಗ್ರೆಸ್ ನಾಯಕರು ಪಕ್ಷದಿಂದ ಉಚ್ಛಾಟನೆ ಮಾಡಿದ್ದರು. ಆನಂತರದಲ್ಲಿ ಮತ್ತೆ ಇವರನ್ನು ಪಕ್ಷಕ್ಕೆ ಸೇರಿಸಿಕೊಳ್ಳದೆ ಕಡೆಗಣಿಸಿರುವುದರಿಂದ ಬಿಜೆಪಿ ಸೇರ್ಪಡೆಗೊಳ್ಳಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.
ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆಗೆ ಆಗಮಿಸಿದ್ದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಅವರು ಇಂಡುವಾಳುವಿನಲ್ಲಿರುವ ಎಸ್. ಸಚ್ಚಿದಾನಂದ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ರಾಜ್ಯಾಧ್ಯಕ್ಷರ ದಿನಾಂಕಕ್ಕಾಗಿ ಕಾಯಲಾಗುತ್ತಿದೆ. ದಿನಾಂಕ ಸಿಕ್ಕ ಕೂಡಲೇ ಪಕ್ಷ ಸೇರುವುದಕ್ಕೆ ಮುಹೂರ್ತ ಫಿಕ್ಸ್ ಆಗಲಿದೆ ಎಂದು ತಿಳಿದುಬಂದಿದೆ.
ಸಂಸದೆ ಸುಮಲತಾಗೆ JDS ಶಾಸಕರೋರ್ವರ ಗಂಭೀರ ಸಲಹೆ .
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಮೊದಲ ಬಾರಿಗೆ ಖಾತೆ ತೆರೆದಿರುವ ಬಿಜೆಪಿ ಇದೀಗ ಜಿಪಂ ಮತ್ತು ಗ್ರಾಪಂ ಚುನಾವಣೆ ಸಮೀಪಿಸುತ್ತಿರುವುದರಿಂದ ಎರಡನೇ ಹಂತದ ಯುವ ನಾಯಕರಿಗೆ ಸೆಳೆಯುವುದಕ್ಕೆ ಮುಂದಾಗಿದೆ. ಪ್ರಥಮ ಹಂತವಾಗಿ ಜೆಡಿಎಸ್ ಪಕ್ಷದಲ್ಲಿದ್ದ ಅಶೋಕ್ ಜಯರಾಂ ಹಾಗೂ ಯುವ ಮುಖಂಡ ಎಸ್.ಸಚ್ಚಿದಾನಂದ ಅವರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಲು ಉತ್ಸುಕರಾಗಿ, ರಾಜಕಾರಣದಲ್ಲಿ ಸಕ್ರಿಯವಾಗಿರುವ ಮಂಡ್ಯ ತಾಲೂಕು ಇಂಡುವಾಳು ಗ್ರಾಮದ ಸಚ್ಚಿದಾನಂದ ಈ ಮೊದಲು ಅಂಬರೀಶ್ ಅವರ ಕಟ್ಟಾಬೆಂಬಲಿಗರಾಗಿದ್ದರಲ್ಲದೇ, ಕೆಪಿಸಿಸಿ ಸದಸ್ಯರೂ ಆಗಿದ್ದರು.
ಅಂಬರೀಶ್ ಸಾವಿನ ಬಳಿಕ ಎದುರಾದ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಚಿತ್ರನಟಿ ಸುಮಲತಾ ಅಂಬರೀಶ್ ಪರವಾಗಿ ಬಹಿರಂಗವಾಗಿಯೇ ಕೆಲಸ ಮಾಡಿದ್ದರು. ಈ ಬೆಳವಣಿಗೆಯಿಂದ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು. ಕೈಪಡೆಯಿಂದ ದೂರವಾಗಿರುವ ಸಚ್ಚಿದಾನಂದ, ತಮ್ಮ ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ಕಮಲ ಪಡೆಯತ್ತ ವಾಲಿದ್ದಾರೆ ಎನ್ನಲಾಗಿದೆ.
ಕಳೆದ ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್ ಪಕ್ಷದ ಶಾಸಕರಾಗಿದ್ದ ಎ.ಬಿ. ರಮೇಶ್ ಬಂಡಿಸಿದ್ದೆಗೌಡ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಚುನಾವಣೆಯಲ್ಲಿ ರಮೇಶ್ ಬಂಡಿಸಿದ್ದೇಗೌಡರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಮುಂದಿನ ಚುನಾವಣೆಯಲ್ಲೂ ಮತ್ತೆ ಕೈ ಪಾಳಯದ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್‌ನಲ್ಲಿದ್ದರೆ ತಮಗೆ ಟಿಕೆಟ್ ದೊರೆಯದು ಎಂಬ ಬಗ್ಗೆ ಚಿಂತಿಸಿರುವ ಎಸ್.ಸಚ್ಚಿದಾನಂದ ಅವರು, ಬಿಜೆಪಿ ಸೇರಿದರೆ ತಮ್ಮ ಭವಿಷ್ಯದ ರಾಜಕೀಯ ಹಾದಿ ಸುಗಮವಾಗಬಹುದೆಂಬ ನಂಬಿಕೆ ಸಚ್ಚಿದಾನಂದ ಅವರದ್ದಾಗಿದೆ ಎಂದು ಗೊತ್ತಾಗಿದೆ.
ಹೀಗಾಗಿ ಕಮಲ ಹಿಡಿಯಲು ಸಚ್ಚಿದಾನಂದ ಸಜ್ಜಾಗಿದ್ದಾರೆ ಎನ್ನುವುದನ್ನು ಅವರ ಆಪ್ತ ಮೂಲಗಳೇ ಖಚಿತಪಡಿಸಿವೆ. ಸಚ್ಚಿದಾನಂದ ಅವರೊಂದಿಗೆ ಅವರ ಅಪಾರ ಬೆಂಬಲಿಗರು ಕೂಡ ಬಿಜೆಪಿ ಸೇರಲಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಿ ಅಲ್ಲಿ ಪಕ್ಷ ಸೇರ್ಪಡೆ ಪ್ರಕ್ರಿಯೆ ಪೂರ್ಣಗೊಳಿಸಲು ಪೂರಕ ಸಿದ್ಧತೆಯೂ ನಡೆದಿದೆ. ಶೀಘ್ರದಲ್ಲೆ ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಮುಹೂರ್ತವೂ ನಿಗದಿಯಾಗಲಿದೆ ಎನ್ನುವುದನ್ನು ಮೂಲಗಳು ತಿಳಿಸಿವೆ.
