ಬೆಳಗಾವಿ (ಆ.25): ಸಾರಿಗೆ ಇಲಾಖೆಯಿಂದ ಕೋರಿಯರ್‌ ಸೇವೆ ಆರಂಭಿಸಲು ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಕೆಲವೇ ದಿನಗಳಲ್ಲಿ ಸಾರಿಗೆ ಇಲಾಖೆಯಿಂದ ಕೋರಿಯರ್‌ ಸೇವೆ ಆರಂಭವಾಗಲಿದೆ ಎಂದು ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈವರೆಗೂ ಖಾಸಗಿಯವರೇ ಕೋರಿಯರ್‌ ಸರ್ವಿಸ್‌ ನೀಡುತ್ತಿದ್ದರು. ನಮ್ಮ ಸಾರಿಗೆ ಬಸ್‌ಗಳು ಪ್ರತಿಯೊಂದು ಹಳ್ಳಿಗಳಿಗೂ ಹೋಗುತ್ತವೆ. ಖಾಸಗಿಯವರು ಆದಾಯ ಮಾಡಿಕೊಳ್ಳುತ್ತಿದ್ದರು. ಅದು ಸರ್ಕಾರಕ್ಕೆ ಬರಲಿ ಎಂಬ ವಿಚಾರವಿದೆ. ವರ್ಷಕ್ಕೆ ನೂರಾರು ಕೋಟಿ ಆದಾಯ ಬರುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಕೊರೋನಾ ಭೀತಿ ಮಧ್ಯೆ ಪ್ರಯಾಣಿಕರನ್ನು ಸೆಳೆಯಲು KSRTC ಬಸ್‌ ವಿನ್ಯಾಸ ಬದಲು...

ರಾಜ್ಯಗಳಿಗೆ ಪತ್ರ: ಅಂತಾರಾಜ್ಯ ಬಸ್‌ಗಳ ಸೇವೆ ಆರಂಭಿಸಲು ಅನೇಕ ರಾಜ್ಯಗಳಿಗೆ ಪತ್ರ ಬರೆಯಲಾಗಿದ್ದು, ಆಂಧ್ರಪ್ರದೇಶ ಅಂತಾರಾಜ್ಯ ಬಸ್‌ ಸೇವೆ ಆರಂಭಕ್ಕೆ ಒಪ್ಪಿಗೆ ನೀಡಿದೆ ಎಂದು ಸಚಿವ ಲಕ್ಷ್ಮಣ ಸವದಿ ತಿಳಿಸಿದರು.

ಆಂಧ್ರಪ್ರದೇಶ- ಕರ್ನಾಟಕ ಮಧ್ಯೆ ಬಸ್‌ ಸಂಚಾರ ಪ್ರಾರಂಭಿಸಲಾಗುವುದು. ತೆಲಂಗಾಣ, ಗೋವಾ, ತಮಿಳುನಾಡು ರಾಜ್ಯದಿಂದ ನಮಗೆ ಇನ್ನೂ ಒಪ್ಪಿಗೆ ಬರಬೇಕು. ಮಹಾರಾಷ್ಟ್ರದಲ್ಲಿ ಕೊರೋನಾ ತೀವ್ರತೆ ಇರುವುದರಿಂದ ಬಸ್‌ ಸಂಚಾರ ಆರಂಭ ಬಗ್ಗೆ ಕೇಳಿಲ್ಲ. ಮಹಾರಾಷ್ಟ್ರಕ್ಕೆ ಬಸ್‌ಗಳನ್ನು ಓಡಿಸುವ ಬಗ್ಗೆ ಇನ್ನೂ ಚಿಂತನೆ ಮಾಡಿಲ್ಲ ಎಂದು ಹೇಳಿದರು.