ಕೊರೋನಾ ಭೀತಿ ಮಧ್ಯೆ ಪ್ರಯಾಣಿಕರನ್ನು ಸೆಳೆಯಲು KSRTC ಬಸ್ ವಿನ್ಯಾಸ ಬದಲು
ಬಸ್‌ನಲ್ಲಿ ನಡುವಿನ ಅಂತರ ಹೆಚ್ಚಿಸಿ ಕೇವಲ 29 ಸೀಟ್ ಅಳವಡಿಕೆ|ಕೊರೋನಾ ಕಾರಣಕ್ಕೆ ಬಸ್ ಹತ್ತಲು ಜನರಿಗೆ ಹೆದರಿಕೆ| ಲಾಕ್‌ಡೌನ್ ಸಡಿಲಿಕೆ ಬಳಿಕ ಮೇ 19ರಿಂದ ಬಸ್ ಸೇವೆ ಪುನರಾರಂಭ| ನಿರೀಕ್ಷಿತ ಪ್ರಮಾಣದಲ್ಲಿ ಬಸ್‌ಗಳತ್ತ ಬರದ ಪ್ರಯಾಣಿಕರು|
ಬೆಂಗಳೂರು(ಆ.22): ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಪ್ರಯಾಣಿಕರ ನಡುವೆ ಸಾಮಾಜಿಕ ಅಂತರ ಕಾಯ್ದು ಕೊಳ್ಳಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಇದೀಗ ಬಸ್‌ಗಳ ಆಸನ ವಿನ್ಯಾಸ ಬದಲಾವಣೆಗೆ ಮುಂದಾಗಿದೆ.
ಪ್ರಾಯೋಗಿಕವಾಗಿ ಬೆಂಗಳೂರು ಕೇಂದ್ರ ವಿಭಾಗದ 2X2 ವಿನ್ಯಾಸದ ಎರಡು ಸಾಲಿನ 39 ಆಸನ ಸಾಮರ್ಥ್ಯದ ರಾಜಹಂಸ (ನೋಂದಣಿ ಸಂಖ್ಯೆ ಕೆಎ 27 ಎಫ್ 1803) ಬಸ್‌ನಲ್ಲಿ ಆಸನ ವಿನ್ಯಾಸ ಬದಲಾವಣೆ ಮಾಡಲಾಗಿದೆ. ಅಂದರೆ, 2X2 ವಿನ್ಯಾಸದ ಎರಡು ಸಾಲುಗಳ ಆಸನಗಳನ್ನು ಒಂದು ಆಸನದ ಮೂರು ಸಾಲುಗಳಾಗಿ ಪರಿವರ್ತಿಸಲಾಗಿದೆ. ಇದರಿಂದ 39 ಆಸನದ ಬದಲು 29 ಆಸನಗಳನ್ನು ಅಳವಡಿಸಿದ್ದು, ಆಸನಗಳ ನಡುವಿನ ಅಂತರ ಹೆಚ್ಚಿಸಲಾಗಿದೆ. ಪ್ರಸ್ತುತ ಈ ಬಸ್ ಪ್ರಾಯೋಗಿಕವಾಗಿ ಬೆಂಗಳೂರು-ಮೈಸೂರು ಮಾರ್ಗದಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿದೆ. ಈ ಪ್ರಯೋಗ ಯಶಸ್ವಿಯಾದರೆ ಇತರೆ ಬಸ್‌ಗಳಿಗೂ ಇದೇ ಮಾದರಿ ಅನುಸರಿಸುವುದಾಗಿ ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
4 ತಿಂಗಳಿಗೆ ಸಾರಿಗೆ ವಿಭಾಗಕ್ಕೆ 30 ಕೋಟಿ ನಷ್ಟ
ಈ ಪ್ರಯೋಗಕ್ಕೆ ‘ಹರಿತಾ ಸೀಟಿಂಗ್ ಸಿಸ್ಟಂ’ ಅವರು ಈ ಪ್ರಯೋಗಕ್ಕೆ ಉಚಿತ ಆಸನಗಳನ್ನು ಒದಗಿಸಿದ್ದಾರೆ. ನಿಗಮದ ಬೆಂಗಳೂರು ಪ್ರಾದೇಶಿಕ ಕಾರ್ಯಾಗಾರದಲ್ಲಿ ಈ ರಾಜಹಂಸ ಬಸ್‌ನ ಆಸನ ವಿನ್ಯಾಸವನ್ನು ಪರಿವರ್ತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಲಾಕ್‌ಡೌನ್ ಸಡಿಲಿಕೆ ಬಳಿಕ ಮೇ 19ರಿಂದ ಬಸ್ ಸೇವೆ ಪುನರಾರಂಭಿಸಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಪ್ರಯಾಣಿಕರು ಬಸ್‌ಗಳತ್ತ ಬರುತ್ತಿಲ್ಲ. ಈ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿ ಇದೀಗ ಪ್ರಯಾಣಿಕರಲ್ಲಿ ಸುರಕ್ಷಿತಭಾವ ಮೂಡಿಸುವ ಸಲುವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುವಾಗುವಂತೆ ಬಸ್‌ಗಳ ಆಸನ ವಿನ್ಯಾಸ ಬದಲಾವಣೆಗೆ ಮುಂದಾಗಿದೆ.